ಮುಂದಿನ ಚಿತ್ರಗಳ ಬಗ್ಗೆ ಕಮಲ್ ಮಾತು; ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ!
ಉಳಗನಾಯಕನ್ ಕಮಲ್ ಹಾಸನ್ 'ವಿಕ್ರಂ' ಸಿನಿಮಾ ಸಕ್ಸಸ್‌ನಿಂದ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೆ ತಮಿಳಿನ ಸ್ಟಾರ್ ನಟರಿಗೆ ಪೈಪೋಟಿ ಕೊಡಲು ಆರಂಭಿಸಿದ್ದಾರೆ. ಅದೇ ಕಾರಣಕ್ಕೆ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕಮಲ್ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ.
ನಟನೆಯ ಜೊತೆ ಜೊತೆಗೆ ಕಮಲ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಆಲ್ಬಮ್ ಸಾಂಗ್ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಸಿನಿಮಾ ಜೊತೆಗೆ 'ಮಕ್ಕಳ್ ನೀಧಿಮಯ್ಯಂ' ಪಕ್ಷದ ನಾಯಕತ್ವ ವಹಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಕಮಲ್ ಇನ್ನು ಯಾವುದೇ ನಿರ್ಣಯ ಕೈಗೊಂಡಿಲ್ಲ. ಇತ್ತೀಚಿಗೆ ಡಿಎಂಕೆ ಜೊತೆ ಕಮಲ್ ನೇತೃತ್ವದ ಮಕ್ಕಳ್ ನೀಧಿಮಯ್ಯಂ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ.

ಸದ್ಯ ಕಮಲ್ ಹಾಸನ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಯಾವ ಸಿನಿಮಾ ಯಾವ ಹಂತದಲ್ಲಿದೆ ಎನ್ನುವುದನ್ನು ವಿವರಿಸಿದ್ದಾರೆ. ಸದ್ಯ ನಾಲ್ಕು ಸಿನಿಮಾಗಳು ಉಳಗನಾಯಗನ್ ಕೈಯಲ್ಲಿವೆ. ಇಂಡಿಯನ್ ಸರಣಿಯ 2 ಸಿನಿಮಾಗಳ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಕಮಲ್ ಮಾಹಿತಿ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕಮಲ್ 'ಇಂಡಿಯನ್' ಸರಣಿಯ 2 ಹಾಗೂ 3 ಸಿನಿಮಾಗಳ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. 1996ರಲ್ಲಿ ಬಂದಿದ್ದ ಸೂಪರ್ ಹಿಟ್ 'ಇಂಡಿಯನ್' ಸಿನಿಮಾ ಸೀಕ್ವೆಲ್ ಇದ್ದಾಗಿದ್ದು ಮತ್ತೆ ಶಂಕರ್ ಜೊತೆ ಕಮಲ್ ಕೈ ಜೋಡಿಸಿದ್ದಾರೆ. ಒಮ್ಮೆ ಚಿತ್ರೀಕರಣದಲ್ಲಿ ಕ್ರೇಜ್ ಬಿದ್ದು ದುರಂತ ಸಂಭವಿಸಿತ್ತು. ಬಳಿಕ ಚಿತ್ರೀಕರಣ ನಿಂತು ಹೋಗಿತ್ತು. 'ವಿಕ್ರಂ' ಸಿನಿಮಾ ಸಕ್ಸಸ್ ನಂತರ ಮತ್ತೆ ಈ ಸಿನಿಮಾ ಶೂಟಿಂಗ್ ನಡೆಯಲಾಯಿತು. ಜೊತೆಗೆ ಸರಣಿಯ ಮತ್ತೊಂದು ಸಿನಿಮಾವೂ ಸಿದ್ಧವಾಗಿದೆ.

ಮಣಿರತ್ನಂ ಹಾಗೂ ಕಮಲ್ ಹಾಸನ್ ಜೋಡಿಯ ಹೊಸ ಸಿನಿಮಾ 'ಥಗ್ ಲೈಫ್' ಕೂಡ ಕುತೂಹಲ ಮೂಡಿಸಿದೆ. ಬಹಳ ವರ್ಷಗಳ ನಂತರ ಇವರಿಬ್ಬರು ಒಂದಾಗಿದ್ದು ಕಮಲ್ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಮಣಿರತ್ನಂ ಕೂಡ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಈ ಸಿನಿಮಾ ಮೂಡಿ ಬರಲಿದೆ. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎಂದು ಕಮಲ್ ಇದೀಗ ಹೇಳಿದ್ದಾರೆ.
ಪ್ರಭಾಸ್ ನಟನೆಯ 'ಕಲ್ಕಿ 2898AD' ಚಿತ್ರದಲ್ಲಿ ಕಮಲ್ ಹಾಸನ್ ಕೂಡ ನಟಿಸುತ್ತಿದ್ದಾರೆ. ಇದು ಭಾರೀ ಕುತೂಹಲ ಮೂಡಿಸಿದೆ. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಈ ಎಪಿಕ್ ಸೈನ್ಸ್ ಫಿಕ್ಷನ್ ಸಿನಿಮಾ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಉಳಗನಾಯಗನ್ ಕಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ಪಾತ್ರದ ಬಗ್ಗೆ ಹೇಳಿ ಕಮಲ್ ನಿರಾಸೆ ಮೂಡಿಸಿದ್ದಾರೆ.
'ಕಲ್ಕಿ 2898AD' ಚಿತ್ರದಲ್ಲಿ ಕಮಲ್ ನಟಿಸುತ್ತಾರೆ ಎನ್ನುವ ಸುದ್ದಿ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಪ್ರಭಾಸ್- ಕಮಲ್ ತೆರೆಮೇಲೆ ಎದಿರುಬದಿರಾಗುವುದನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಚಿತ್ರದಲ್ಲಿ ನನ್ನದು ಅತಿಥಿ ಪಾತ್ರ ಎಂದು ಹೇಳಿ ಉಳಗನಾಯಗನ್ ಶಾಕ್ ಕೊಟ್ಟಿದ್ದಾರೆ. ಈ ಪ್ಯಾನ್ ವರ್ಲ್ಡ್ ಚಿತ್ರದಲ್ಲಿ ಕಮಲ್ ಮಹತ್ವದ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದುಕೊಂಡಿದ್ದವರಿಗೆ ಇದರಿಂದ ನಿರಾಸೆಯಾಗಿದೆ. ಒಂದು ವೇಳೆ ಚಿತ್ರದ ಸೀಕ್ವೆಲ್ ಬರುತ್ತಾ? ಅದರಲ್ಲಿ ಕಮಲ್ ಪಾತ್ರ ಮುಂದುವರೆಯುತ್ತಾ? ಎನ್ನುವ ಊಹಾಪೋಹವೂ ಶುರುವಾಗಿದೆ.


Click it and Unblock the Notifications











