ಕಮಲ್ ಹಾಸನ್ ಸಿಎಂ ಆಗಿದ್ರೆ ಅಸೂಯೆ ಪಡ್ತಿದ್ದೆ; ರಜನಿಕಾಂತ್ ಹೇಳಿಕೆ ಬಗ್ಗೆ ಕಮಲ್ ಪ್ರತಿಕ್ರಿಯೆ
ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆ ಆಗಿರುವ ಬಗ್ಗೆ ನಟ ರಜನಿಕಾಂತ್ ಮಾತನಾಡಿದ್ದಾರೆ. ನಿನ್ನೆ(ಮೇ 17) ತಮ್ಮ ನಿವಾಸದ ಬಳಿಕ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ತಲೈವಾ ಹಂಚಿಕೊಂಡಿದ್ದರು. ವಿಜಯ್ ಸಿಎಂ ಆಗಿರುವ ಬಗ್ಗೆ ನನಗೆ ಯಾವುದೇ ಅಸೂಯೆ ಇಲ್ಲ, ಒಂದು ವೇಳೆ ಕಮಲ್ ಆಗಿದ್ರೆ ಅಸೂಯೆ ಆಗ್ತಿತ್ತು ಎಂದು ನಕ್ಕಿದ್ದರು.
ರಜನಿಕಾಂತ್ ಹೇಳಿಕೆ ಬಗ್ಗೆ ಸ್ವತಃ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ. ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಇಬ್ಬರೂ ಚಿತ್ರರಂಗ ಪ್ರವೇಶಿಸಿದರು. ಸ್ಟಾರ್ ನಟರಾಗಿ ಬೆಳೆದು ಬಂದರು. ಆರಂಭದಲ್ಲಿ ಒಟ್ಟಿಗೆ ಕೆಲ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಬಳಿಕ ದಿಢೀರನೆ ಇಬ್ಬರೂ ದೂರಾಗಿದ್ದರು. ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಲಿಲ್ಲ. ದಶಕಗಳ ಬಳಿಕ ಮತ್ತೆ ಇಬ್ಬರೂ ಕೈ ಜೋಡಿಸಿದ್ದಾರೆ.

ರಜನಿಕಾಂತ್ ನಟನೆಯ ಮುಂದಿನ ಚಿತ್ರವನ್ನು ಸ್ವತಃ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ನೆಲ್ಸನ್ ನಿರ್ದೇಶನದಲ್ಲಿ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣವಾಗುತ್ತಿದೆ. ದಿಗ್ಗಜ ನಟರಿಬ್ಬರು ಒಟ್ಟಿಗೆ ನಟಿಸೋಕೆ ಒಪ್ಪಿದ್ದಾರೆ. ಪ್ರೋಮೊ ಸಮೇತ ಸಿನಿಮಾ ಘೋಷಣೆಯಾಗಿದೆ. ಅನಿರುದ್ಧ್ ಸಂಗೀತ ಚಿತ್ರಕ್ಕಿದ್ದು ಶೀಘ್ರದಲ್ಲೇ ಸಿನಿಮಾ ಶುರುವಾಗಬೇಕಿದೆ. ಬಹುಕೋಟಿ ವೆಚ್ಚದಲ್ಲಿ ರೆಡ್ ಜೈಂಟ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ.
ಸಿನಿಮಾ ನಟರು ರಾಜಕೀಯರಂಗಕ್ಕೆ ಬರುವುದು ಹೊಸದಲ್ಲ. ರಜನಿಕಾಂತ್ ಕೂಡ ಹೊಸ ಪಕ್ಷ ಕಟ್ಟಿ ತಮಿಳುನಾಡು ರಾಜಕೀಯರಂಗಕ್ಕೆ ಧುಮುಕುವುದಾಗಿ ಘೋಷಿಸಿದ್ದರು. ಇದು ಭಾರೀ ಸಂಚಲನ ಸೃಷ್ಟಿಸಿತ್ತು. ಬಳಿಕ ಆರೋಗ್ಯದ ನೆಪವೊಡ್ಡಿ ನಿರ್ಧಾರದಿಂದ ಹಿಂದೆ ಸರಿದಿದ್ದರು. ಮಕ್ಕಳ್ ನೀದಿಮಯ್ಯಂ ಹೆಸರಿನಲ್ಲಿ ಕಮಲ್ ಹಾಸನ್ ಸ್ವಂತ ಪಕ್ಷ ಕಟ್ಟಿದ್ದರು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಸದ್ಯ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಎಂಕೆ ನೇತೃತ್ವದ ಮೈತ್ರಿಕೂಟದ ಬೆಂಬಲದೊಂದಿಗೆ ಜೂನ್ 2025ರಲ್ಲಿ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆ ಆಗಿದ್ದರು.
ವಿಜಯ್ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿದ್ದು ರಜನಿಕಾಂತ್ ಅವರಿಗೆ ಇಷ್ಟವಿಲ್ಲ, ಅದೇ ಕಾರಣಕ್ಕೆ ಡಿಎಂಕೆ, ಎಡಿಎಂಕೆ ಮೈತ್ರಿ ಸರ್ಕಾರ ರಚನೆ ಆಗಲಿ ಎಂದು ಬಯಸಿದ್ದರು ಎನ್ನುವ ವಂದತಿ ಹರಿದಾಡಿತ್ತು. ಚುನಾವಣೆ ಫಲಿತಾಂಶದ ಬೆನ್ನಲ್ಲೇ ಸ್ಟಾಲಿನ್ ಮನೆಗೆ ರಜನಿಕಾಂತ್ ಭೇಟಿ ನೀಡಿದ್ದೇಕೆ? ಮೈತ್ರಿ ಸರ್ಕಾರ ರಚನೆಗೆ ಸೂತ್ರಧಾರನಾಗಿಬಿಟ್ರಾ? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಮಾಡಿದ್ದರು. ಅದಕ್ಕೆಲ್ಲಾ ಸುದ್ದಿಗೋಷ್ಠಿಯಲ್ಲಿ ರಜನಿಕಾಂತ್ ತಿರುಗೇಟು ಕೊಟ್ಟಿದ್ದಾರೆ. ವಿಜಯ್ ಗೆಲುವನ್ನು ಕೊಂಡಾಡಿದ್ದಾರೆ.
ನನಗೂ ವಿಜಯ್‌ಗೂ ವಯಸ್ಸಿನಲ್ಲಿ ಬಹಳ ವ್ಯತ್ಯಾಸವಿದೆ. ನನ್ನ ಜೊತೆ ಅವರನ್ನು ಹೋಲಿಸಿಕೊಳ್ಳಲ್ಲ, ಅದೇ ರೀತಿ ಅವ್ರು ನನ್ನ ಜೊತೆ ಹೋಲಿಸಿಕೊಳ್ಳುವುದಿಲ್ಲ. ಅವರು ಚಿಕ್ಕ ಹುಡುಗನಾಗಿದ್ದ ಸಮಯದಿಂದ ನೋಡಿದ್ದೇನೆ. ವಿಜಯ್ ಸಿಎಂ ಆದರೆ ನನಗೆ ಅಸೂಯೆ ಯಾಕೆ? ಒಂದು ವೇಳೆ ಕಮಲ್ ಹಾಸನ್ ಸಿಎಂ ಆಗಿದ್ರೆ ಪಡ್ತಿದ್ದೆ ಅನ್ನಿಸುತ್ತೆ ಎಂದು ರಜನಿಕಾಂತ್ ನಗೆ ಬೀರಿದ್ದರು.
ರಜನಿಕಾಂತ್ ಹೇಳಿಕೆ ಬಗ್ಗೆ ಕಮಲ್ ಹಾಸನ್ ಅವರ ಬಳಿ ಮಾಧ್ಯಮದವರು ಪ್ರಶ್ನಿಸಿದ್ದಾರೆ. "ನಕ್ಕು ತಮಾಷೆಯಾಗಿ ರಜನಿಕಾಂತ್ ಆ ಮಾತು ಹೇಳಿದ್ದಾರೆ. ನಾವಿಬ್ಬರು ಒಬ್ಬರನ್ನು ನೋಡಿ ಮತ್ತೊಬ್ಬರು ಅಸೂಯೆಪಟ್ಟಿದ್ದೇ ಇಲ್ಲ. ಬೇಕಿದ್ರೆ ಪೈಪೋಟಿ ನಡೆಸುತ್ತೇವೆ, ಆದ್ರೆ ಅಸೂಯೆ ಇಲ್ಲ.. ಚಿತ್ರರಂಗದಲ್ಲಿ ನಾವಿಬ್ಬರು ಒಳ್ಳೆ ಕ್ರೀಡಾ ಸ್ಫೂರ್ತಿ ಇರುವವರು. ಕ್ರಿಕೆಟ್ ಆಡಿದ್ರು, ಹೀಗೆ ಇರ್ತಿದ್ವಿ" ಎಂದು ಕಮಲ್ ಹೇಳಿದ್ದಾರೆ.
ಕಮಲ್- ರಜನಿಕಾಂತ್ ನಡುವೆ ಮೊದಲಿನಿಂದಲೂ ಒಳ್ಳೆ ಸ್ನೇಹ ಇದೆ. ಇಬ್ಬರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುತ್ತೇವೆ ಎಂದು ಹೇಳಿ ನಿರ್ಮಾಪಕರು ಕಮ್ಮಿ ಸಂಭಾವನೆ ಕೊಡುತ್ತಿದ್ದರು. ಹಾಗಾಗಿ ಇನ್ಮುಂದೆ ಒಟ್ಟಿಗೆ ನಟಿಸೋದು ಬೇಡ, ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿದ್ರೆ ಹೆಚ್ಚು ಸಂಭಾವನೆ ಸಿಗುತ್ತದೆ ಎಂದು ನಿರ್ಧರಿಸಿದ್ದರು. ದಶಕಗಳ ಬಳಿಕ ಆ ನಿಯಮ ಬಿಟ್ಟು ಪ್ರೇಕ್ಷಕರನ್ನು ರಂಜಿಸಲು ಇಬ್ಬರೂ ಸಜ್ಜಾಗಿದ್ದಾರೆ.


Click it and Unblock the Notifications