ತಮಿಳು ಜನತೆಗೆ ಧನ್ಯವಾದ; ಹೈಕೋರ್ಟ್‌ನಲ್ಲಿ ಹಿನ್ನಡೆ ಬಳಿಕ ಕಮಲ್ ಮಾತು
ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ನೀಡಿದ ವಿವಾದಕ್ಕೀಡಾಗಿದೆ. ಸದ್ಯ ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ನಾಳೆ(ಜೂನ್ 5) ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿಲ್ಲ. ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳುವ ಮಾತೇಯಿಲ್ಲ ಎನ್ನುತ್ತಿದ್ದಾರೆ.
ತಮಿಳಿನಲ್ಲಿ ಕನ್ನಡ ಭಾಷೆ ಹುಟ್ಟಿದ್ದು ಎಂದು ತಮಿಳು ನಟ ಕಮಲ್ ಹಾಸನ್ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತಿಹಾಸ ತಿಳಿಯದೇ ಏನೇನೋ ಹೇಳಿಕೆ ನೀಡಬಾರದು. ತಮಿಳಿನಿಂದ ಕನ್ನಡ ಭಾಷೆ ಹುಟ್ಟಿಲ್ಲ, ಕಮಲ್ ಹಾಸನ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ಮತ್ತೆ ಕಮಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಚೆನ್ನೈನಲ್ಲಿ ಇಂದು(ಜೂನ್ 4) 'ಥಗ್ ಲೈಫ್' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಈ ನಡುವೆ ವಿವಾದದ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ಕಮಲ್ ಈ ಬಗ್ಗೆ ಹೆಚ್ಚು ಮಾತನಾಡಿಲ್ಲ. ಅದನ್ನು ಬೇರೆ ವೇದಿಕೆಯಲ್ಲೇ ಮಾತನಾಡುತ್ತೇನೆ ಎಂದಿದ್ದಾರೆ. "ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನ ಪರ ನಿಂತಿದ್ದಕ್ಕಾಗಿ ತಮಿಳುನಾಡಿನ ಜನತೆಗೆ ನಾನು ಧನ್ಯವಾದ ಹೇಳಬೇಕು. 'ಉಯಿರೆ'(ಜೀವನ), 'ಉರವೆ'(ಬಂಧ), 'ತಮಿಳೆ'(ತಮಿಳು ಭಾಷೆ ಸಂಸ್ಕೃತಿ) ಎಂಬ ಪದಗುಚ್ಛದ ಅರ್ಥವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ಅದಕ್ಕೆ ಬದ್ಧನಾಗಿರುತ್ತೇನೆ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಸದ್ಯ ಈ ಪತ್ರಿಕಾಗೋಷ್ಠಿಯಲ್ಲಿ ಅದಕ್ಕಿಂತ ಬೇರೆ ವಿಚಾರಗಳ ಬಗ್ಗೆ ಮಾತನಾಡಬೇಕಿದೆ. "ಅದಕ್ಕೆಲ್ಲಾ, ಇದು ವೇದಿಕೆಯಲ್ಲ. ಆ ವಿಷಯಗಳ ಬಗ್ಗೆ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದು ನನ್ನ ಕರ್ತವ್ಯ ಮತ್ತು ಶೀಘ್ರದಲ್ಲೇ ಅದಕ್ಕಾಗಿ ಸುದ್ದಿಗೋಷ್ಠಿ ಆಯೋಜಿಸುತ್ತೇನೆ" ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ವಿವಾದ ತಣ್ಣಗಾಗದ ಕಾರಣ ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈ ಸಂಬಂಧ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ಕೂಡ ಹಿನ್ನಡೆಯಾಗಿದೆ. "ಕಮಲ್ ಹಾಸನ್ ಮೊದಲು ಕನ್ನಡಿಗರ ಕ್ಷಮೆ ಕೇಳಿ, ಬಳಿಕ ಅರ್ಜಿ ವಿಚಾರಣೆ ನಡೆಸುತ್ತೇವೆ" ಎಂದು ಹೈಕೋರ್ಟ್ ನ್ಯಾಯಮೂರ್ತಿ ಚಾಟಿ ಬೀಸಿದ್ದಾರೆ.
ದಶಕಗಳ ಹಿಂದಿನ ಘಟನೆ ನೆನಪಿಸಿದ ನ್ಯಾಯಮೂರ್ತಿ ನಾಗಪ್ರಸನ್ನ "ಸಿ. ರಾಜಗೋಪಾಲಚಾರಿ ಇದೇ ರೀತಿಯ ಹೇಳಿಕೆ ನೀಡಿದ್ದರು. ನಂತರ ಅವರು ಕ್ಷಮೆಯಾಚನೆ ಮಾಡಿದ್ದರು. ಆದರೆ ಕಮಲ್ ಯಾವುದೇ ಕ್ಷಮಾಯಾಚನೆ ಮಾಡಿಲ್ಲ. ವಾಣಿಜ್ಯ ಉದ್ದೇಶದ ಸಿನಿಮಾ ಮಾಡಿದ್ದಾರೆ. ನಿಮ್ಮ ತಪ್ಪಿಗೆ ಸಿನಿಮಾ ಬಿಡುಗಡೆ ಮಾಡಲು ಪೊಲೀಸರು ಭದ್ರತೆ ನೀಡಬೇಕೇ?" ಎಂದು ಪ್ರಶ್ನಿಸಿದ್ದರು. ಜೂನ್ 10ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಸಿನಿಮಾ ಆಡಿಯೋ ಲಾಂಚ್ ವೇದಿಕೆಯಲ್ಲಿ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ "ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಮಾತೇಯಿಲ್ಲ" ಎಂದು ಎರಡು ಬಾರಿ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದರು.
ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರದಲ್ಲಿ ಕಮಲ್ ಜೊತೆ ಸಿಂಬು, ತ್ರಿಷಾ, ಅಭಿರಾಮಿ ಸಹ ನಟಿಸಿದ್ದಾರೆ. ಮಣಿರತ್ನಂ ಜೊತೆ ಸೇರಿ ಕಮಲ್ ಹಾಸನ್ ಸಹ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕರ್ನಾಟಕ ಹೊರತುಪಡಿಸಿ ದೇಶ ವಿದೇಶಗಳಲ್ಲಿ ನಾಳೆ ಸಿನಿಮಾ ತೆರೆಗಪ್ಪಳಿಸಲಿದೆ. ತಮಿಳುನಾಡಿನಲ್ಲಿ ಸ್ಪೆಷಲ್ ಶೋಗಳನ್ನು ಆಯೋಜಿಸಲು ಸರ್ಕಾರ ಅನುಮತಿ ನೀಡಿದೆ.


Click it and Unblock the Notifications











