"ಜನರು 'ದಿ ಕೇರಳ ಸ್ಟೋರಿ' ರೀತಿಯ ಸಿನಿಮಾಗಳನ್ನು ನೋಡ್ಬೇಕು.. ಆದ್ರೆ"
ತಮಿಳು ನಟ ಕಮಲ್ ಹಾಸನ್ ಇತ್ತೀಚೆಗೆ 'ದಿ ಕೇರಳ ಸ್ಟೋರಿ' ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಉಳಗ ನಾಯಗನ್ ವಿವಾದಾತ್ಮಕ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆದರೆ ಕೊಂಚ ಬೇರೆ ರೀತಿ ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಸದ್ಯ ಕಮಲ್ ಹೇಳಿಕೆ ವೈರಲ್ ಆಗುತ್ತಿದೆ.
ಅವಕಾಶ ಕೊಟ್ಟರೆ ಸಿನಿಮಾ ಬ್ಯಾನ್ ಮಾಡ್ತೀರಾ ಎಂದು ಕೇಳಿದಾಗ "ನಾನು ಯಾವುದೇ ಸಿನಿಮಾ ನಿಷೇಧಕ್ಕೆ ಒಪ್ಪಲ್ಲ. ಆದರೆ ಸಿನಿಮಾ ಹಾಗೂ ಆ ಸಿನಿಮಾ ಉದ್ದೇಶ ಏನು ಎನ್ನುವುದನ್ನು ಜನರಿಗೆ ಅರ್ಥಮಾಡಿಸಲು ನಾನು ಪ್ರಯತ್ನಿಸುತ್ತೇನೆ" ಎಂದು ಮಕ್ಕಳ್ ನೀದಿಮಯ್ಯಂ ಪಕ್ಷದ ಅಧ್ಯಕ್ಷ, ನಟ ಕಮಲ್ ಹಾಸನ್ ಹೇಳಿದ್ದಾರೆ. "ಇಂಡಿಯಾ ಟುಡೇ ಕಾನ್ಕ್ಲೇವ್ ಸೌತ್ 2023" ಮಾಧ್ಯಮ ಸಂವಾದದಲ್ಲಿ ಭಾಗಿ ಆಗಿ ಕಮಲ್ ಹಾಸನ್ ಮಾತನಾಡಿದ್ದಾರೆ.

"ನಮ್ಮ 'ವಿಶ್ವರೂಪಂ' ಸಿನಿಮಾ ತಮಿಳುನಾಡಿನಲ್ಲಿ ನಿಷೇಧಿಸಲಾಗಿತ್ತು. ಇದನ್ನು ಏಕೆ ನಿಷೇಧಿಸಲಾಯಿತು ಎಂಬ ಬಗ್ಗೆ ಜನರಿಗೆ ಇನ್ನೂ ಗೊತ್ತಾಗಿಲ್ಲ. ಆ ಬಳಿಕ ರಾಜ್ ಕಮಲ್ ಫಿಲ್ಮ್ಸ್ ಮತ್ತು ತಮಿಳುನಾಡು ಸರ್ಕಾರದ ನಡುವೆ ಕಾನೂನಾತ್ಮಕ ಹೋರಾಟ ನಡೆಯಿತು. ಕೊನೆಗೆ ನಾವು ಪ್ರಕರಣವನ್ನು ಗೆದ್ದು ಸಿನಿಮಾ ಬಿಡುಗಡೆ ಮಾಡಿದೆವು. ನಾನು ಯಾವುದೇ ಸಿನಿಮಾನ ನಿಷೇಧಿಸಬೇಕು ಎಂದು ಪ್ರತಿಪಾದಿಸುವುದಿಲ್ಲ" ಎಂದು ಉಳಗ ನಾಯಗನ್ ಹೇಳಿದ್ದಾರೆ.
32000 ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡಿದ್ದನ್ನು 3 ಮಹಿಳೆಯರು ಎಂದು ಚಿತ್ರದ ಟ್ರೈಲರ್ ಡಿಸ್ಕ್ರಿಪ್ಷನ್‌ನಲ್ಲಿ ಚಿತ್ರತಂಡ ಬದಲಾಯಿಸಿದರು ಎನ್ನುವುದರ ಬಗ್ಗೆ ಕಮಲ್ ಮಾತನಾಡಿದ್ದಾರೆ. "ಕೆಲವು ಸಂಗತಿಗಳ ಸಂಖ್ಯೆಯನ್ನು ಹೆಚ್ಚಿಸಲು ಅಥವಾ ಉತ್ಪ್ರೇಕ್ಷಿಸಲು ಸಾಧ್ಯವಿಲ್ಲ ಮತ್ತು ಅದನ್ನು ರಾಷ್ಟ್ರೀಯ ಬಿಕ್ಕಟ್ಟಿನಂತೆ ಕಾಣುವಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ವಿವಾದಾತ್ಮಕ ಚಿತ್ರವನ್ನು ನೋಡಿಲ್ಲ ಆದರೆ ಜನರು ಅದರ ಬಗ್ಗೆ ಏನು ಮಾತನಾಡಿದ್ದಾರೆ ಎಂದು ಕೇಳಿದ್ದೇನೆ" ಎಂದು ಅವರು ಹೇಳಿದರು.

ಸಿನಿಮಾ ನೋಡಬೇಕು ಎಂದ ಕಮಲ್
ಇನ್ನು 'ದಿ ಕೇರಳ ಸ್ಟೋರಿ' ಚಿತ್ರವನ್ನು ಜನರು ನೋಡಬೇಕು ಎಂದು ಕಮಲ್ ಹೇಳಿದ್ದಾರೆ. "ನಮ್ಮ ದೇಶದಲ್ಲಿ ಯಾರು ಬೇಕಾದರೂ ಮುಕ್ತವಾಗಿ ಮಾತನಾಡಬಹುದು. ಆದರೆ 'ದಿ ಕೇರಳ ಸ್ಟೋರಿ' ಅಂಥ ಚಿತ್ರಗಳನ್ನು ಜನರು ಸತ್ಯ ಎಂದು ಭಾವಿಸಿ ಹೋಗಿ ನೋಡಬಾರದು. ಈ ರೀತಿಯ ಚಿತ್ರಗಳನ್ನು ಜನರು ನೋಡಬೇಕು ಮತ್ತು ಆ ನಂತರ ಯಾವುದು ಸತ್ಯ, ಯಾವುದು ಸುಳ್ಳು ಎಂದು ಆಲೋಚಿಸಬೇಕು" ಎಂದು ಹೇಳಿದ್ದಾರೆ.
ಪ್ರೊಪೊಗಾಂಡ ಚಿತ್ರ ಎಂದಿದ್ದ ನಾಯಗನ್
ಅಬುಧಾಬಿಯಲ್ಲಿ ನಡೆದ 'ಐಫಾ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಕಮಲ್ 'ದಿ ಕೇರಳ ಸ್ಟೋರಿ' ಚಿತ್ರದ ಬಗ್ಗೆ ಮಾತನಾಡಿದ್ದರು. "ನಾನು ಈಗಾಗಲೇ ಹೇಳಿದ್ದೇನೆ. ಇದು ಪ್ರೊಪೊಗಾಂಡ ಸಿನಿಮಾ ಅಂತ. ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಟೈಟಲ್ ಕೆಳಗೆ ಸತ್ಯ ಘಟನೆ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ" ಎಂದು ಕಮಲ್ ಹಾಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹೇಳಿಕೆಯನ್ನು ಹಲವರು ಟೀಕಿಸಿದ್ದರು.

ಸಿನಿಮಾ ವಿವಾದ ಸೃಷ್ಟಿಸಿರುವುದೇಕೆ?
ಅಷ್ಟಕ್ಕೂ 'ದಿ ಕೇರಳ ಸ್ಟೋರಿ' ಸಿನಿಮಾ ಯಾಕಿಷ್ಟು ವಿವಾದ ಸೃಷ್ಟಿಸುತ್ತಿದೆ ಎಂದರೆ ಅದಕ್ಕೆ ಕಾರಣ ಕಥಾವಸ್ತು. ಕೇರಳದಲ್ಲಿ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ನೂಕಲಾಗುತ್ತಿದೆ ಎನ್ನಲಾದ ಸಂಗತಿಗಳನ್ನು ಆಧರಿಸಿ ಸಿನಿಮಾ ಮಾಡಿರೋದಾಗಿ ತಂಡ ಹೇಳಿದೆ. ಕೇರಳದಲ್ಲೇ ಈ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಿನಿಮಾ ಬಿಡುಗಡೆಗೆ ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು.
250 ಕೋಟಿ ರೂ. ಗಡಿಯಲ್ಲಿ ಸಿನಿಮಾ
ಮೊದಲ ದಿನ 8 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ನಿಧಾನವಾಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ಸಿನಿಮಾ ಗಳಿಕೆ 200 ಕೋಟಿ ರೂ. ಗಡಿ ದಾಟಿದೆ. ಈಗಾಗಲೇ 29 ದಿನ ಪೂರೈಸಿ ಸಿನಿಮಾ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ 250 ಕೋಟಿ ರೂ. ಗಡಿ ದಾಟುವ ಸುಳಿವು ಸಿಗುತ್ತಿದೆ. ಜೊತೆಗೆ ಓಟಿಟಿ ರಿಲೀಸ್ ಬಗ್ಗೆಯೂ ಚರ್ಚೆ ನಡೀತಿದೆ.


Click it and Unblock the Notifications











