ರಜನಿ ಇದ್ದರೂ 'ಲಾಲ್ ಸಲಾಂ' ಗೆದ್ದಿಲ್ಲ; ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ ತಲೈವಾ ಪುತ್ರಿ ಸಿನಿಮಾ
ಒಂದು ಕಾಲದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಒಂದು ಸೀನ್‌ನಲ್ಲಿ ಬಂದು ಹೋದರೂ ಸಿನಿಮಾ ಗೆದ್ದು ಬಿಡುತ್ತೆ ಅನ್ನೋ ನಂಬಿಕೆ ಇತ್ತು. ಆದ್ರೀಗ ಸಿನಿಮಾ ಮಂದಿಯ ಈ ನಂಬಿಕೆ ಉಲ್ಟಾ ಅಂದಂತೆ ಕಾಣುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗಷ್ಟೇ ತೆರೆಕಂಡಿರೋ 'ಲಾಲ್ ಸಲಾಂ' ಸಿನಿಮಾ. ಇದರಲ್ಲಿ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
'ಲಾಲ್ ಸಲಾಂ' ಸಿನಿಮಾವನ್ನು ರಜನಿಕಾಂತ್ ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡಿದ್ದರು. ರಜನಿ ಜೊತೆಗೆ ಪ್ರಮುಖ ಪಾತ್ರದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ನಟಿಸಿದ್ದರೆ ಕ್ರಿಕೆಟ್ ಲೋಕದ ದಂತಕಥೆ ಕಪಿಲ್ ದೇವ್ ಕೂಡ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಫೆಬ್ರವರಿ 9ರಂದು ಅದ್ದೂರಿಯಾಗಿ ರಿಲೀಸ್ ಆಗಿತ್ತು. ಆದರೆ, ಮೊದಲ ವೀಕೆಂಡ್‌ನಲ್ಲಿಯೇ ಸಿನಿಮಾ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿಲ್ಲ.

ಮೊದಲು ಈ ಸಿನಿಮಾವನ್ನು ಪೊಂಗಲ್‌ಗೆ ರಿಲೀಸ್ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಅದೇ ವೇಳೆ ಮಾಜಿ ಪತಿ ಧನುಷ್ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಕೂಡ ರಿಲೀಸ್ ಆಗಿತ್ತು. ಹೀಗಾಗಿ ವಿವಾದಕ್ಕೆ ಎಡೆ ಮಾಡಿಕೊಡದೆ 'ಲಾಲ್ ಸಲಾಂ' ಸಿನಿಮಾವನ್ನು ಫೆಬ್ರವರಿ 9ಕ್ಕೆ ಮುಂದೂಡಲಾಗಿತ್ತು. ಹೀಗಿದ್ದರೂ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿಂತುಕೊಳ್ಳುವುದಕ್ಕೆ ಪರದಾಡುತ್ತಿದೆ. ಹಾಗಿದ್ದರೆ ಮೊದಲ ಮೂರು ದಿನಗಳ ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಲಾಲ್ ಸಲಾಂ' ಕಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿತ್ತು. ಒಂದ್ಕಡೆ ರಜನಿಕಾಂತ್ ವಿಶೇಷ ಪಾತ್ರ. ಇನ್ನೊಂದು ಕಡೆ ರಜನಿ ಪುತ್ರಿ ಐಶ್ವರ್ಯಾ ನಿರ್ದೇಶನ. ಈ ಎರಡೂ ಕಾರಣಗಳಿಗೆ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ, ರಿಲೀಸ್ ಆದ್ಮೇಲೆ ಬಾಕ್ಸಾಫೀಸ್‌ನಲ್ಲಿ ಮಾತ್ರ ಆ ನಿರೀಕ್ಷೆಯನ್ನು ಮುಟ್ಟುವಲ್ಲಿ ತೀರಾ ಹಿಂದೆ ಬಿದ್ದಿದೆ.

ಮೊದಲ ಮೂರು ದಿನಗಳ 'ಲಾಲ್ ಸಲಾಂ' ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ. ಮೊದಲ ದಿನ 'ಲಾಲ್ ಸಲಾಂ' ಸಿನಿಮಾ 3.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ತಮಿಳು ವರ್ಷನ್ 3.25 ಆಗಿದ್ದರೆ, ತೆಲುಗು ವರ್ಷನ್‌ನಿಂದ 30 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಎರಡನೇ ದಿನ ಈ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆ ಆಗಬಹುದು ಎಂದು ಗೆಸ್ ಮಾಡಲಾಗಿತ್ತು. ಆದರೆ, ಆ ನಿರೀಕ್ಷೆ ಎಲ್ಲಾ ಹುಸಿಯಾಗಿದೆ.
'ಲಾಲ್ ಸಲಾಂ' ಎರಡನೇ ದಿನದ ಕಲೆಕ್ಷನ್ 3.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದರಲ್ಲಿ ತಮಿಳು ವರ್ಷನ್‌ನಿಂದ 3 ಕೋಟಿ ರೂಪಾಯಿ ಹಾಗೂ ತೆಲುಗು ವರ್ಷನ್‌ನಿಂದ 25 ಲಕ್ಷ ರೂಪಾಯಿ ಗಳಿಕೆ ಕಂಡಿತ್ತು. ಇನ್ನು ಮೊದಲ ಭಾನುವಾರ ಈ ಸಿನಿಮಾ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. 3 ದಿನಗಳ ಒಟ್ಟು ಕಲೆಕ್ಷನ್ ಭಾರತದಿಂದ ಸುಮಾರು 9.80 ಕೋಟಿ ರೂಪಾಯಿ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ವರದಿ ಮಾಡಿದ್ದಾರೆ.
ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸಿರುವ 'ಲಾಲ್ ಸಲಾಂ' ಸಿನಿಮಾ ಕಲೆಕ್ಷನ್ ಪಾತಾಳಕ್ಕೆ ಕುಸಿದಿರುವುದಕ್ಕೆ ಟ್ರೇಡ್ ಎಕ್ಸ್‌ಪರ್ಟ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಲಾಲ್ ಸಲಾಂ' ಸಿನಿಮಾದ ಬ್ಯುಸಿನೆಸ್ ಕುಸಿತಕ್ಕೆ ಕಾರಣಗಳನ್ನು ಕೊಡಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮೊದಲ ದಿನ ಕೆಲವೆಡೆ ಸ್ಕ್ರೀನಿಂಗ್ ಅನ್ನು ಕ್ಯಾನ್ಸಲ್ ಮಾಡಲಾಗಿತ್ತು. ಇಷ್ಟೇ ಅಲ್ಲದೆ ವಿಮರ್ಶಕರಿಂದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಹೀನಾಯ ಪ್ರದರ್ಶನ ಕಂಡಿದೆ.
'ಲಾಲ್ ಸಲಾಂ' ಸಿನಿಮಾ ಸುಮಾರು 80 ರಿಂದ 90 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಮೊದಲ ಮೂರು ದಿನಗಳ ಕಲೆಕ್ಷನ್ ನೋಡಿದರೆ, ಹಾಕಿರೋ ಬಜೆಟ್ ಕೂಡ ವಾಪಸ್ ಬರುವ ಸಾಧ್ಯತೆ ಕಡಿಮೆ ಇದೆ.


Click it and Unblock the Notifications











