ರಜನಿಗೆ ಆಕ್ಷನ್ ಕಟ್ ಹೇಳುವುದಕ್ಕೂ ಮುನ್ನ ನಿರ್ಮಾಣ ಸಂಸ್ಥೆ ಹುಟ್ಟಾಕಿದ ಲೋಕೇಶ್ ಕನಗರಾಜ್: ಪ್ಲ್ಯಾನ್ ಏನು?
ಲೋಕೇಶ್ ಕನಗರಾಜ್ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ. ಇದೂವರೆಗೂ ನಿರ್ದೇಶನ ಮಾಡಿದ್ದು ಕೇವಲ 5 ಸಿನಿಮಾಗಳು ಅಷ್ಟೇ. ಅಷ್ಟರಲ್ಲೇ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿದ್ದಾರೆ. ತಮ್ಮ ಟ್ಯಾಲೆಂಟ್ ಏನು ಅನ್ನೋದನ್ನು ತೋರಿಸಿದ್ದಾರೆ.
ಲೋಕೇಶ್ ಕನಗರಾಜ್ ಇದೂವರೆಗೂ ಕಾಲಿವುಡ್ ದಿಗ್ಗಜರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ದಳಪತಿ ವಿಜಯ್, ಕಮಲ್ ಹಾಸನ್, ಕಾರ್ತಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದೆ. ಇದೀಗ ಸಿನಿಮಾರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ಲೋಕೇಶ್ ಕನಗರಾಜ್ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಅದರ ಹೆಸರು 'ಝೀ ಸ್ಕ್ವಾಡ್'. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೋಕೇಶ್ ಕನಗರಾಜ್ ಹೊಸ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸಂಸ್ಥೆ ಮೂಲಕ ಹೇಗೆ ಕಾರ್ಯ ನಿರ್ವಹಿಸುತ್ತೆ ಅನ್ನೋದನ್ನು ಹೇಳಿಕೊಂಡಿದ್ದಾರೆ.
ತಮ್ಮ ಝೀ ಸ್ಕ್ವಾಡ್ ಮೂಲಕ ಲೋಕೇಶ್ ಕನಗರಾಜ್ ಹೊಸಬರಿಗೆ ಅವಕಾಶಗಳನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಅದಕ್ಕೂ ಮುನ್ನ ತಮ್ಮ ಜೊತೆ ಕೆಲಸ ಮಾಡಿರೋ ಸಹಾಯಕರಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಅವರ ಕ್ರಿಯೆಟಿವಿಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದಕ್ಕೆ ಲೋಕೇಶ್ ಕನಗರಾಜ್ ನಿರ್ಧರಿಸಿದ್ದಾರೆ.

ಇತ್ತೀಚೆಗಷ್ಟೇ ಲೋಕೇಶ್ ಕನಗರಾಜ್ ನಿರ್ದೇಶಿಸಿದ 'ಲಿಯೋ' ಸಿನಿಮಾ ರಿಲೀಸ್ ಆಗಿದೆ. ದಳಪತಿ ವಿಜಯ್, ತ್ರಿಶಾ ನಟಿಸಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಹಿಂದೆ ಕಮಲ್ ಹಾಸನ್ ನಟಿಸಿದ 'ವಿಕ್ರಮ್' ಸಿನಿಮಾ ಅವರ ಕರಿಯರ್‌ನ ಬೆಸ್ಟ್ ಸಿನಿಮಾ ಆಗಿತ್ತು.
ಕಾರ್ತಿ ನಟಿಸಿದ 'ಖೈದಿ' ಇದೂವರೆಗೂ ಲೋಕೇಶ್ ಕನಗರಾಜ್ ನಿರ್ದೇಶಿಸಿದ ಬೆಸ್ಟ್ ಸಿನಿಮಾ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಧೂಳೆಬ್ಬಿಸಿತ್ತು. ತಾನೇ ನಿರ್ದೇಶಿಸಿದ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ಹೊಸ ಸಿನಿಮಾಗೆ ಕನೆಕ್ಟ್ ಮಾಡುತ್ತಿರುವ ಲೋಕೇಶ್ ಐಡಿಯಾಗೆ ಸಿನಿಪ್ರೇಮಿಗಳು ಫಿದಾ ಆಗಿದ್ದಾರೆ.
'ಲಿಯೋ' ಬಳಿಕ ಲೋಕೇಶ್ ಕನಗರಾಜ್ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಜನಿಯ 171ನೇ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಸದ್ಯ ರಜನಿ ಜ್ಞಾನವೇಲ್ ಸಿನಿಮಾದಲ್ಲಿ ಬ್ಯುಸಿಯಾಗಿರುವುದ್ದು, 170ನೇ ಸಿನಿಮಾ ಮುಗಿದ ಕೂಡಲೇ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಲೋಕೇಶ್ ಕನಗರಾಜ್ 'ಲಿಯೋ' ಸಿನಿಮಾ ವೇಳೆ ನಿರ್ದೇಶನದಿಂದ ಹಿಂದೆ ಸರಿಯುವುದಾಗಿ ಹೇಳಿಕೆ ಕೊಟ್ಟಿದ್ದರು. ಸಿನಿಮಾ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. ಆ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದು, ತಮ್ಮ ನಿರ್ಮಾಣ ಸಂಸ್ಥೆಯಡಿ ಹೊಸಬರಿಗೆ ಅವಕಾಶವನ್ನು ನೀಡಲು ಮುಂದಾಗಿದ್ದಾರೆ.


Click it and Unblock the Notifications











