9 ವರ್ಷಗಳ ಬಳಿಕ ವಿವಾದ ಹುಟ್ಟು ಹಾಕಿದ ರಮೇಶ್ ಅರವಿಂದ್ ಸಿನಿಮಾ: ನಿರ್ಮಾಪಕರ ಆರೋಪ ಏನು?
ಸಕಲಕಲಾ ವಲ್ಲಭ ರಮೇಶ್ ಅರವಿಂದ್ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಕನ್ನಡ ಮಾತ್ರವಲ್ಲದೇ ತಮಿಳು ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. 2015ರಲ್ಲಿ ತಮಿಳಿನ 'ಉತ್ತಮ ವಿಲನ್' ಚಿತ್ರವನ್ನು ನಿರ್ದೇಶನದ ಮಾಡಿದ್ದರು. ಆದರೆ ಈಗ ಆ ಸಿನಿಮಾ ವಿವಾದ ಹುಟ್ಟುಹಾಕಿದೆ.
ಕಮಲ್ ಹಾಸನ್ ನಟನೆಯ 'ಉತ್ತಮ ವಿಲನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಇದೀಗ ಕಮಲ್ ವಿರುದ್ಧ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಲಿಂಗುಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರ ಕಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಮಲ್ ಹಾಸನ್ ಹಾಗೂ ಅವರ ಸಹೋದರ ಚಂದ್ರಹಾಸನ್ ಜೊತೆ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಆದರೆ ಚಿತ್ರದಿಂದ ನನಗೆ ಸಾಕಷ್ಟು ನಷ್ಟವಾಗಿದೆ ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.

'ಉತ್ತಮ ವಿಲನ್' ಚಿತ್ರದಿಂದ ಆದ ನಷ್ಟದಿಂದ ನಾನು ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು. ಈ ಸಿನಿಮಾ ಫ್ಲಾಪ್ ಬಳಿಕ ಕಮಲ್ 30 ಕೋಟಿ ರೂ. ಬಜೆಟ್‌ನಲ್ಲಿ ಮತ್ತೊಂದು ಸಿನಿಮಾ ಮಾಡುವುದಾಗಿ ಭರವಸೆ ನೀಡಿದರು. ಇಲ್ಲಿಯವರೆಗೆ ಅದು ನಡೆದಿಲ್ಲ. ಕಮಲ್ ಹಾಸನ್ 'ಉತ್ತಮ ವಿಲನ್' ಕಥೆಯಲ್ಲಿ ವಾರಕ್ಕೊಮ್ಮೆ ಬದಲಾವಣೆ ಮಾಡುತ್ತಿದ್ದರು. ಈ ಹಿಂದೆ ಕಮಲ್ ಹಾಸನ್ ಹಲವು ಚಿತ್ರಗಳಲ್ಲಿ ಇದೇ ರೀತಿ ಬದಲಾವಣೆಗಳನ್ನು ಮಾಡಿ ಗೆದ್ದಿದ್ದರು. ಆದರೆ ಈ ಸಿನಿಮಾ ವಿಚಾರದಲ್ಲಿ ಅದು ವರ್ಕ್ ಆಗಲಿಲ್ಲ.
'ಉತ್ತಮ ವಿಲನ್' ಸಿನಿಮಾ ಆರಂಭಕ್ಕೂ ಮುನ್ನ ನಾನು ಯಾವುದೇ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಸಿನಿಮಾ ಮುಗಿದು ಫಸ್ಟ್ ಕಾಪಿ ನೋಡುವಾಗ ಏನಾದರೂ ಬದಲಾವಣೆ ಇದ್ದರೆ ಹೇಳುತ್ತೇನೆ. ಆಗ ಮಾಡಬೇಕು ಎಂದಿದ್ದೆ. ಅದಕ್ಕೆ ಕಮಲ್ ಸಹ ಒಪ್ಪಿದ್ದರು. ಫಸ್ಟ್ ಕಾಪಿ ನೋಡುವಾಗಲು ನಾನು ಹೇಳಿದ ಬದಲಾವಣೆಗಳನ್ನು ಒಪ್ಪಿಕೊಂಡರು. ಸರಿ ಮಾಡೋಣ ಎಂದರು. ಆದರೆ ಕೊನೆಗೆ ಬದಲಾವಣೆ ಮಾಡದೇ ಸಿನಿಮಾ ಬಿಡುಗಡೆ ಆಯಿತು.
ನಾನು ಹೇಳಿದ ಬದಲಾವಣೆಗಳನ್ನು ಮಾಡಿದ್ದರೆ ಸಿನಿಮಾ ಗೆಲ್ಲುತ್ತಿತ್ತು. ಆದರೆ ಯಾಕೆ ಕಮಲ್ ಹಾಸನ್ ಒಪ್ಪಲಿಲ್ಲವೋ ಗೊತ್ತಿಲ್ಲ. ಬಳಿಕ 'ದೃಶ್ಯಂ' ಚಿತ್ರವನ್ನು ಕಮಲ್ ಹಾಸನ್ ಅವರೊಂದಿಗೆ ರೀಮೇಕ್ ಮಾಡಲು ನಾವು ಬಯಸಿದ್ದೇವೆ. ಆದರೆ ಅದು ಸಾಧ್ಯವಾಗಲಿಲ್ಲ. ಮತ್ತೊಬ್ಬ ನಿರ್ಮಾಪಕರ ಜೊತೆ ಸೇರಿ ಆ ಸಿನಿಮಾ ಮಾಡಿ ಯಶಸ್ಸು ಪಡೆದರು ಎಂದು ಲಿಂಗುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

'ಉತ್ತಮ ವಿಲನ್' ಚಿತ್ರದಿಂದ ನಮಗೆ ಲಾಭವಾಗಿದೆ ಎಂದು ಹೇಳಿರುವುದಾಗಿ ಇತ್ತೀಚೆಗೆ ಯೂಟ್ಯೂಬ್ ಚಾನಲ್‌ವೊಂದರಲ್ಲಿ ಸುದ್ದಿಯಾಗಿದೆ. ಆದರೆ ಇದೆಲ್ಲಾ ಸುಳ್ಳು ಎಂದು ಲಿಂಗುಸ್ವಾಮಿ ಒಡೆತನದ 'ತಿರುಪತಿ ಬ್ರದರ್ಸ್' ಸಂಸ್ಥೆ ಮಾಹಿತಿ ನೀಡಿದೆ. ಒಟ್ಟಾರೆ 9 ವರ್ಷಗಳ ಬಳಿಕ ಕಾಮಿಡಿ ಡ್ರಾಮಾ 'ಉತ್ತಮ ವಿಲನ್' ಮತ್ತೆ ಚರ್ಚೆ ಹುಟ್ಟಾಕ್ಕಿದೆ. ಈ ಚಿತ್ರಕ್ಕೆ ಖುದ್ದು ಕಮಲ್ ಹಾಸನ್ ಕಥೆ, ಚಿತ್ರಕೆ ಬರೆದಿದ್ದರು.
ಕಮಲ್ ಹಾಸನ್ ಜೊತೆಗೆ ಕೆ. ಬಾಲಚಂದರ್, ಕೆ. ವಿಶ್ವನಾಥ್, ಊರ್ವಶಿ, ಜಯರಾಂ, ಆಂಡ್ರಿಯಾ ಸೇರಿದಂತೆ ದೊಡ್ಡ ತಾರಾಗಣ 'ಉತ್ತಮ ವಿಲನ್' ಚಿತ್ರದಲ್ಲಿತ್ತು. ಗಿಬ್ರನ್ ಸಂಗೀತ ಸಂಯೋಜನೆ ಮಾಡಿದ್ದರು. ಸದ್ಯ ನಿರ್ಮಾಪಕ, ನಿರ್ದೇಶಕ ಎನ್. ಲಿಂಗುಸ್ವಾಮಿ ಆರೋಪಗಳಿಗೆ ಕಮಲ್ ಹಾಸನ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ. ಲಿಂಗುಸ್ವಾಮಿ 'ಸಂಡೇಕೋಳಿ', 'ಪಯ್ಯಾ', 'ವೆಟೈ', 'ಅಂಜಾನ್' ರೀತಿಯ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.


Click it and Unblock the Notifications










