ಕಿಡ್ನಿ, ಶ್ವಾಸಕೋಶ, ನರ ರಜನಿಗೆ ಅದೆಷ್ಟು ಆರೋಗ್ಯ ಸಮಸ್ಯೆ? ಇಲ್ಲಿದೆ ಸೂಪರ್‌ಸ್ಟಾರ್ ಮೆಡಿಕಲ್ ಹಿಸ್ಟರಿ!
ಸೂಪರ್‌ಸ್ಟಾರ್ ರಜನಿಕಾಂತ್ ಹೊಚ್ಚ ಹೊಸ ಸಿನಿಮಾ 'ವೆಟ್ಟೈಯಾನ್' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಮಯದಲ್ಲಿ ರಜನಿಕಾಂತ್ ಆರೋಗ್ಯ ಕೈ ಕೊಟ್ಟಿದೆ. ನಿನ್ನೆ (ಸೆಪ್ಟೆಂಬರ್ 30) ದಿಢೀರನೇ ರಜನಿ ಆಸ್ಪತ್ರೆಗೆ ದಾಖಲಾಗಿದ್ದು, ಸಿನಿಮಾ ಮಂದಿ ಹಾಗೂ ಅಭಿಮಾನಿಗಳಲ್ಲಿ ಆತಂಕವನ್ನು ಹುಟ್ಟಾಗಿತ್ತು.
ರಜನಿಕಾಂತ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾತ್ರಿಯಿಂದಲೇ ವೈದ್ಯರ ತಂಡ ರಜನಿ ತಪಾಸಣೆಗೆ ಮುಂದಾಗಿದ್ದರು. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ರಜನಿಯ ಕಿಬ್ಬೊಟ್ಟೆಯ ಭಾಗದಲ್ಲಿ ಸ್ಟಂಟ್ ಅಳವಡಿಗೆ ಮಾಡಲಾಗಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ರಜನಿಕಾಂತ್ ಇರಬೇಕಾಗಿ ಬರಬಹುದು ಎಂದು ಹೇಳಲಾಗುತ್ತಿದೆ.

ಆಸ್ಪತ್ರೆ ವೈದ್ಯರು ರಜನಿಕಾಂತ್‌ಗೆ ಇನ್ನಷ್ಟು ಆರೋಗ್ಯ ತಪಾಸಣೆ ಮಾಡಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ. ಇದೇ ವೇಳೆ ರಜನಿಕಾಂತ್ ಪತ್ನಿ ಲತಾ ಆಲ್ ಈಸ್ ವೆಲ್ ಎಂದು ಹೇಳಿದ್ದು ಫ್ಯಾನ್ಸ್‌ಗೆ ಸಮಧಾನ ತಂದಿದೆ. ಸೂಪರ್‌ಸ್ಟಾರ್ ರಜನಿಗೀಗ 73 ವರ್ಷ ಆದರೂ, ಇವರ ಸಿನಿಮಾಗಳಿಗೆ ಬೇಡಿಕೆ ಕಮ್ಮಿಯಾಗಿಲ್ಲ. 2011 ರಿಂದಲೂ ರಜನಿಕಾಂತ್ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ, ಶ್ವಾಸಕೋಶ, ನರಕ್ಕೆ ಸಂಬಂಧಿಸಿದ ಸಮಸ್ಯೆಗೆ ಚಿಕಿತ್ಯೆ ಪಡೆಯುತ್ತಿದ್ದಾರೆ. ಹಾಗಿದ್ದರೆ, ರಜನಿಯ ಮೆಡಿಕಲ್ ಹಿಸ್ಟರಿ ಏನು ಹೇಳುತ್ತಿದೆ? ತಿಳಿಯಲು ಮುಂದೆ ಓದಿ.
ಸಿಂಗಾಪುರದಲ್ಲಿ ಕಿಡ್ನಿ ಕಸಿ
ಸೂಪರ್‌ಸ್ಟಾರ್ ರಜನಿಕಾಂತ್ ತನ್ನ ಕನಸಿನ ಸಿನಿಮಾ 'ರಾಣಾ' ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. 2011ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಶುರುವಾಗಿತ್ತಷ್ಟಷ್ಟೇ ರಜನಿಗೆ ಮೊದಲ ಬಾರಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿತ್ತು. ತಕ್ಷಣವೇ ಚೆನ್ನೈನ ರಾಮಚಂದ್ರ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕಿಡ್ನಿ ಫೇಲ್ಯೂರ್ ಆಗಿದ್ದರು ಬೆಳಕಿಗೆ ಬಂದಿತ್ತು. ತಕ್ಷಣವೇ ಅವರನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಜನಿಕಾಂತ್ ಕಿಡ್ನಿ ಕಸಿ ಮಾಡಿದ ಬಳಿಕ ಭಾರತಕ್ಕೆ ಹಿಂತಿರುಗಿದ್ದರು. ಆರೋಗ್ಯ ಸುಧಾರಿಸಿಕೊಂಡ ಬಳಿಕ ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ ಆರಂಭ ಮಾಡಿದ್ದರು.

ಶ್ವಾಸಕೋಶದ ಸಮಸ್ಯೆ
2020ರ ಕೋವಿಡ್ ಸಮಯದಲ್ಲಿ ರಜನಿಕಾಂತ್‌ಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು. ಆ ವೇಳೆ ರಜನಿ 'ಅಣ್ಣಾತೆ' ಸಿನಿಮಾದ ಶೂಟಿಂಗ್‌ನಲ್ಲಿದ್ದರು. ಆ ವೇಳೆ ಕೋವಿಡ್ ತಗುಲಿರಬಹುದೆಂದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ತಗುಲಿಲ್ಲ ಅನ್ನೋದು ಖಾತರಿಯಾಗಿದ್ದರೂ, ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು. ಒಂದಿಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮನೆಗೆ ಹಿಂತಿರುಗಿದ್ದರು.
ನರದ ಸಮಸ್ಯೆ
ಮಾರನೇ ವರ್ಷವೇ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ನರದ ಸಮಸ್ಯೆಯಿಂದ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೂಡ ಚೆನ್ನೈನ ಕಾವೇರಿ ಆಸ್ಪತ್ರೆಯ ವೈದ್ಯರು ಸೂಪರ್‌ಸ್ಟಾರ್‌ಗೆ ಚಿಕಿತ್ಸೆಯನ್ನು ನೀಡಿದ್ದರು. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹಿಂತಿರುಗಿದ್ದರು.
ಈಗ ಹೊಟ್ಟೆ, ಹೃದಯದ ಸಮಸ್ಯೆ
ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ 'ಕೂಲಿ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ರಜನಿಕಾಂತ್‌ಗೆ ದಿಢೀರನೇ ಆರೋಗ್ಯ ಸಮಸ್ಯೆ ಎದುರಾಗಿತ್ತು. ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಕಿಬ್ಬೊಟ್ಟೆಯ ಭಾಗದಲ್ಲಿ ರಜನಿಗೆ ಸ್ಟಂಟ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರೊಂದಿಗೆ ರಜನಿಕಾಂತ್ ಆರೋಗ್ಯ ತಪಾಸಣೆಗೆಂದು ಆಗಾಗ ಅಮೆರಿಕಗೆ ಹೋಗಿ ಬರುತ್ತಿದ್ದರು. ಇಷ್ಟೆಲ್ಲ ಆರೋಗ್ಯ ಸಮಸ್ಯೆ ಇಟ್ಟುಕೊಂಡಿದ್ದ ರಜನಿಕಾಂತ್ ಸಿನಿಮಾಗಳಲ್ಲಿ ಇದೆಲ್ಲವನ್ನು ಮರೆತು ನಟಿಸಿದ್ದಾರೆ. ಇಂದಿನ ಜನರೇಷನ್‌ನ ಹೀರೋಗಳಿಗೆ ಸೂಪರ್‌ಸ್ಟಾರ್ ರಜನಿ ಬಾಕ್ಸಾಫೀಸ್‌ನಲ್ಲಿ ಟಕ್ಕರ್ ಕೊಟ್ಟಿದ್ದಾರೆ. ಆದಷ್ಟು ಬೇಗ ರಜನಿ ಗುಣಮುಖರಾಗಿ ಬರಲಿ ಅಂತ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications











