Mahalakshmi-Ravindar : ಮದುವೆಯಾದ ವರ್ಷಕ್ಕೆ ರವೀಂದ್ರ ಚೆನ್ನೈ ಪೊಲೀಸರ ಅತಿಥಿ.. ಫೇವರಿಟ್ ದಂಪತಿಗೆ ಆಘಾತ!
ಸೋಶಿಯಲ್ ಮೀಡಿಯಾದ ಫೇವರಿಟ್ ಜೋಡಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಚಂದ್ರಶೇಖರನ್. ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಬಹುತೇಕ ಮಂದಿಯ ಅಚ್ಚುಮೆಚ್ಚಿನ ಕಪಲ್ ಕೂಡ ಹೌದು.
ಮದುವೆ ಆದಲ್ಲಿಂದ ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಿದ್ದ ಈ ಜೋಡಿಗೆ ಚೆನ್ನೈ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಪತಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್‌ರನ್ನು ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಕೆಲವೇ ದಿನಗಳ ಹಿಂದಷ್ಟೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇದಾದ ಕೇವಲ ನಾಲ್ಕು ದಿನಗಳಲ್ಲೇ ರವೀಂದ್ರರನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ರವೀಂದ್ರ ಚಂದ್ರಶೇಖರನ್ ಮಾಡಿದ ಮೋಸವೇನು? ಮೋಸ ಮಾಡಿದ್ದು ಯಾರಿಗೆ? ತಿಳಿಯಲು ಮುಂದೆ ಓದಿ.
ಮಹಾಲಕ್ಷ್ಮಿ-ರವೀಂದ್ರ ನೆಟ್ಟಿಗರ ಫೇವರಿಟ್
ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅನ್ನು ನಟಿ ಮಹಾಲಕ್ಮ್ಮಿ ವಿವಾಹವಾಗುತ್ತಿದ್ದಂತೆ ಹೆವೀ ಟ್ರೋಲ್ ಆಗಿದ್ದರು. ಹಣಕ್ಕಾಗಿಯೇ ರವೀಂದ್ರ ಚಂದ್ರಶೇಖರನ್ ಅನ್ನು ಮದುವೆ ಆಗಿದ್ದೀಯಾ? ಶುಗರ್ ಡ್ಯಾಡಿ ಅಂತೆಲ್ಲ ಕಮೆಂಟ್ ಮಾಡಿ ಟ್ರೋಲ್ ಮಾಡಿದ್ದರು. ಆ ವೇಳೆ ಈ ಜೋಡಿ ಟ್ರೋಲ್‌ಗಳಿಗೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿತ್ತು. ಅಲ್ಲಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಬಗ್ಗೆ ಚರ್ಚೆಯಾಗುತ್ತಲೇ ಇತ್ತು.
ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ
ಇತ್ತೀಚೆಗಷ್ಟೇ ಮಹಾಲಕ್ಷ್ಮಿ ಹಾಗೂ ರವೀಂದ್ರ ಚಂದ್ರಶೇಖರನ್ ಜೋಡಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು. ಈ ವೇಳೆ ರವೀಂದ್ರ ಪತ್ನಿ ಮಹಾಲಕ್ಷ್ಮಿಗೆ ಸುದೀರ್ಘ ಪತ್ರವೊಂದನ್ನು ಬರೆದು ಗಿಫ್ಟ್ ಮಾಡಿದ್ದರು. ಆ ಪತ್ರದ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಈಗ ವಂಚನೆ ಆರೋಪದ ಮೇಲೆ ರವೀಂದ್ರ ಚಂದ್ರಶೇಖರನ್ ಅನ್ನು ಪೊಲೀಸರು ಬಂಧಿಸಿ, ಈ ಜೋಡಿ ಶಾಕ್ ಕೊಟ್ಟಿದ್ದಾರೆ.

ವಂಚನೆ ಆರೋಪದ ಮೇಲೆ ಬಂಧನ
ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬ ಉದ್ಯಮಿಗೆ ರವೀಂದ್ರ ಚಂದ್ರಶೇಖರ್ ವಂಚನೆ ಮಾಡಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ರವೀಂದ್ರ ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಕಾಪಾರನ್ನು ಪ್ರೇರೇಪಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 2020ಯಲ್ಲಿ ಸುಮಾರು 15.38 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಹಣ ಪಡೆದ ಬಳಿಕ ಯೋಜನೆಯನ್ನು ಆರಂಭಿಸಿಲ್ಲ ಹಾಗೂ ಹಣವನ್ನೂ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.
ಜೈಲು ಸೇರಿರೋ ರವೀಂದ್ರ
ಉದ್ಯಮಿ ಬಾಲಾಜಿ ಕಾಪಾ ನೀಡಿದ ದೂರಿನ ಮೇರೆಗೆ ತನಿಖೆಯನ್ನು ನಡೆಸಲಾಗಿತ್ತು. ಇದರಲ್ಲಿ ರವೀಂದ್ರ ಚಂದ್ರಶೇಖರ್ ದಾಖಲೆಗಳನ್ನು ನಕಲು ಮಾಡಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ರವೀಂದ್ರರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿತ್ತು. ಸದ್ಯ ನ್ಯಾಯಾಧೀಶರ ಆದೇಶದ ಹಿನ್ನೆಲೆ ರವೀಂದರ್ ಜೈಲಿನಲ್ಲಿದ್ದಾರೆ. ಇವರ ವಿರುದ್ಧ ಈಗಾಗಲೇ ಹಲವು ವಂಚನೆ ಪ್ರಕರಣಗಳು ರಿಜಿಸ್ಟರ್ ಆಗಿವೆ.


Click it and Unblock the Notifications











