'ಬಾಹುಬಲಿ 2' ಮೊದಲ ದಿನದ ಗಳಿಕೆ ಮೀರಿಸಲು 5 ದಿನ ತೆಗೆದುಕೊಂಡ 'ಪೊನ್ನಿಯಿನ್ ಸೆಲ್ವನ್ 2'!
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ 'ಪೊನ್ನಿಯಿನ್ ಸೆಲ್ವನ್ 2'. ಕಳೆದ 5 ದಿನಗಳಿಂದ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಪಾರ್ಟ್ 2 ಮೂಲಕ ಮಣಿರತ್ನಂ ಮತ್ತೆ ಗೆಲುವಿನ ರುಚಿ ಕಂಡಿದ್ದಾರೆ.
'ಪೊನ್ನಿಯನ್ ಸೆಲ್ವನ್ 1'ಗಿಂತ ಮಣಿರತ್ನಂ ನಿರ್ದೇಶಿಸಿದ ಪಾರ್ಟ್ 2ಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ಚೆನ್ನಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದರೂ, ಬಾಕ್ಸಾಫೀಸ್‌ನಲ್ಲಿ ದಾಖಲೆ ಮುರಿಯುವಂತಹ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ.

ಆರಂಭದಿಂದಲೂ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2'ಗೂ ಮಣಿರತ್ನಂ ಸಿನಿಮಾ 'ಪೊನ್ನಿಯಿನ್ ಸೆಲ್ವನ್ 2' ಹೋಲಿಕೆ ಮಾಡಲಾಗುತ್ತಿತ್ತು. ಆದರೆ, ಮಣಿರತ್ನಂ 'ಬಾಹುಬಲಿ 2' ದಾಖಲೆಯನ್ನು ಮುರಿಯುವಲ್ಲಿ ಸೋತಿದ್ದಾರೆ. ಈ ಕಾರಣಕ್ಕೆ ಟಾಲಿವುಡ್‌ನಲ್ಲಿ ಎರಡೂ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
'ಪೊನ್ನಿಯಿನ್ ಸೆಲ್ವನ್ 2' 5 ದಿನಗಳ ಕಲೆಕ್ಷನ್ ಎಷ್ಟು?
ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಶಾ ಕೃಷ್ಣನ್, ಜಯಂ ರವಿ, ಶೋಭಿತಾ ಸೇರಿದಂತೆ ಬಹು ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಮಣಿರತ್ನಂ ಅಂತಹ ಸ್ಟಾರ್ ನಿರ್ದೇಶಕರಿದ್ದಾರೆ. ಹೀಗಾಗಿ ಇದು ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೆಲ್ಲ ಉಡೀಸ್ ಮಾಡುತ್ತೆ ಅನ್ನೋ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿಲ್ಲ. ಐದು ದಿನಗಳಲ್ಲಿ ಉತ್ತಮ ಗಳಿಕೆಯನ್ನೇ ಕಂಡಿದೆ. ಕಳೆದ 5 ದಿನಗಳಲ್ಲಿ ಈ ಸಿನಿಮಾ ಸುಮಾರು 220 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಆದರೆ, ಈ ಗಳಿಕೆ 'ಬಾಹುಬಲಿ 2' ಮೊದಲ ದಿನ ಬಾಕ್ಸಾಫೀಸ್ ಗಳಿಕೆ ಸಮ ಎಂದೇ ಹೇಳಲಾಗುತ್ತಿದೆ.
'ಬಾಹುಬಲಿ 2' ಮೀರಿಸಲಿಲ್ಲ 'ಪೊನ್ನಿಯಿನ್ ಸೆಲ್ವನ್ 2'
'ಪೊನ್ನಿಯಿನ್ ಸೆಲ್ವನ್' ಮೇಲೆ ತಮಿಳು ಮಂದಿ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಈ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಮುರಿದು ಹಾಕುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಯಾಕಂದ್ರೆ, ತೆಲುಗು ಹಾಗೂ ತಮಿಳು ಸಿನಿಪ್ರಿಯರ ನಡುವೆನೇ ಪೈಪೋಟಿ ಶುರುವಾಗಿತ್ತು. ಹೀಗಾಗಿ 'ಪೊನ್ನಿಯಿನ್ ಸೆಲ್ವನ್ 2' ರಾಜಮೌಳಿಯ 'ಬಾಹುಬಲಿ 2' ದಾಖಲೆಯನ್ನು ಅಳಿಸಿ ಹಾಕಬಹುದು ಎಂದು ತುದಿಗಾಲಲ್ಲಿ ನಿಂತಿದ್ದವರಿಗೆ ನಿರಾಸೆಯಾಗಿದೆ.
ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2' ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಪ್ರಭಾಸ್, ರಾಣಾದಗ್ಗುಬಾಟಿ, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ನಟಿಸಿದ್ದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಿಟ್ ಆಗಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೊದಲ ದಿನ ಗ್ರಾಸ್ 220 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಹೀಗಾಗಿ 'ಪೊನ್ನಿಯಿನ್ ಸೆಲ್ವನ್ 2' 5 ದಿನಗಳ ಗಳಿಕೆ 'ಬಾಹುಬಲಿ 2' ಮೊದಲ ದಿನದ ಗಳಿಕೆ ಸಮ ಎಂದು ಬಾಲಿವುಡ್ ಹೇಳುತ್ತಿದೆ.
ಮಣಿರತ್ನಂ ಸದ್ಯ ಗೆಲುವಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಈ ಬೆನ್ನಲ್ಲೇ ಕಮಲ್ ಹಾಸನ್ ಜೊತೆ ಹೊಸ ಸಿನಿಮಾಗೆ ತಯಾರಿ ನಡೆಸಿದ್ದಾರೆ. ನಿರ್ದೇಶಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಇಬ್ಬರಿಗೂ ಸಕ್ಸಸ್ ಸಿಕ್ಕಿದೆ. ಹೀಗಾಗಿ ಈ ಜೋಡಿಯ ಹೊಸ ಸಿನಿಮಾ ಮೇಲೆ ಸಿನಿಪ್ರಿಯರು ಕಣ್ಣು ನೆಟ್ಟಿದ್ದಾರೆ.


Click it and Unblock the Notifications











