"ಸ್ಟಾಲಿನ್ ಅಂಕಲ್ ಎಂದು ದಳಪತಿ ವಿಜಯ್ ಕರೆದಿದ್ದರಲ್ಲಿ ತಪ್ಪೇನಿದೆ"; ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್
ತಮಿಳಿನ ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್ ಫಿಲ್ಮಿಬೀಟ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಮನ್ಸೂರ್ ಅಲಿ ಖಾನ್, ಕ್ಯಾಪ್ಟನ್ ವಿಜಯಕಾಂತ್ ಅವರೊಂದಿಗಿನ ತಮ್ಮ ಸ್ನೇಹ ಮತ್ತು ನಟನೆಯ ಪಯಣವನ್ನು ನೆನಪಿಸಿಕೊಂಡಿದ್ದಾರೆ. 'ಕ್ಯಾಪ್ಟನ್ ಪ್ರಭಾಕರನ್' ಸಿನಿಮಾ ಮರು ಬಿಡುಗಡೆಯ ಬಗ್ಗೆ ಮಾತನಾಡುತ್ತಾ, ಆ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಜಯಕಾಂತ್ ಅವರ ನಟನೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಈ ಸಂದರ್ಶನದ ವೇಳೆ ನಟ ಮನ್ಸೂರ್ ಅಲಿ ಖಾನ್ ಒಮ್ಮೆ 'ಕ್ಯಾಪ್ಟನ್ ಪ್ರಭಾಕರನ್' ಸಿನಿಮಾದಲ್ಲಿ ನಟಿಸಲು ಹೇಗೆ ಆಯ್ಕೆಯಾದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಬಾಲವನಂ ಎಂಬ ನಿರ್ದೇಶಕರು ಇವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಂತರ, ನಿರ್ದೇಶಕ ಸೆಲ್ವಮಣಿ ಅವರು ಮನ್ಸೂರ್ ಅವರನ್ನು ನೋಡಿದ ತಕ್ಷಣ ಆಯ್ಕೆ ಮಾಡಿಕೊಂಡರು. ಮೊದಲಿಗೆ 1000 ರೂಪಾಯಿ ಅಡ್ವಾನ್ಸ್ ಕೂಡ ನೀಡಿದ್ದರು. ಆ ಕ್ಷಣವನ್ನು ಮನ್ಸೂರ್ ಅಲಿ ಖಾನ್ ನೆನಪಿಸಿಕೊಂಡಿದ್ದಾರೆ.

ತಮಿಳಿನ ಈ ವಿವಾದಾತ್ಮಕ ನಟ ತಮ್ಮ ಹೊಸ ಸಂಗೀತ ಆಲ್ಬಂ 'ಅಹಂ ಬ್ರಹ್ಮಾಸ್ಮಿ' ಬಗ್ಗೆನೂ ಮಾತಾಡಿದ್ದಾರೆ. ಈ ವೆಳೆ ಸಂಸ್ಕೃತದಲ್ಲಿ ಟಾಮ್ ಕ್ರೂಸ್ ಜೊತೆ ಸಿನಿಮಾ ಮಾಡುವ ಕನಸನ್ನು ಹಂಚಿಕೊಂಡರು. "ನನಗೆ ಅವಕಾಶ ಸಿಕ್ಕರೆ, ಸಂಸ್ಕೃತದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸುವ ಗುರಿ ಇಟ್ಟುಕೊಂಡಿದ್ದೇನೆ" ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ. ಹಾಗೇ ಹೊಸ ಆಲ್ಬಂ 'ಅಹಂ ಬ್ರಹ್ಮಾಸ್ಮಿ' ಬಗ್ಗೆ ಹೇಳುತ್ತಾ "ನಿಮ್ಮ ಒಳಗೇ ದೇವರು ಇದ್ದಾನೆ" ಎಂಬ ಅರ್ಥ ಕೊಡುತ್ತದೆ ಎಂದಿದ್ದಾರೆ. ಸಂಸ್ಕೃತದ ಶ್ಲೋಕಗಳನ್ನು ಓದಿದಾಗ, ಅದರಲ್ಲಿನ ತತ್ವಗಳನ್ನು ಅರಿತುಕೊಂಡೆ. ಮರಗಳು ನೆರಳನ್ನು ನೀಡುತ್ತವೆ. ಆದರೆ, ಅವು ಬಿಸಿಲಿನಲ್ಲಿ ಕಾಯುತ್ತವೆ. ಇದು ನಿಸ್ವಾರ್ಥ ಸೇವೆಗೆ ಒಂದು ಉದಾಹರಣೆ" ಎಂದು ಮನ್ಸೂರ್ ಅಲಿಖಾನ್ ಹೇಳಿದ್ದಾರೆ. ಹಾಗೇ "ರಾಜಕೀಯ ನಾಯಕರು ಸಹ ಈ ಮರಗಳಂತೆ ನಿಸ್ವಾರ್ಥವಾಗಿರಬೇಕು" ಎಂದೂ ಹೇಳಿದ್ದಾರೆ.
ಈ ವೇಳೆ ದಳಪತಿ ವಿಜಯ್ ತಮ್ಮ ರಾಜಕೀಯ ಸಮಾವೇಶದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಅಂಕಲ್ ಎಂದು ಕರೆದಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. "ಸ್ಟಾಲಿನ್ ಅವರನ್ನು ಅಂಕಲ್ ಎಂದು ಕರೆದರೆ ತಪ್ಪೇನು?" ಎಂದು ಕೇಳುವ ಮೂಲಕ ಬಿಸಿ ಬಿಸಿ ಚರ್ಚೆಗೆ ತುಪ್ಪ ಸುರಿದಿದ್ದಾರೆ. ಅವರ ಈ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಮಾತನಾಡಿದ ಮನ್ಸೂರ್ ಅಲಿ ಖಾನ್, ವಿಜಯ್ ಅವರ ರಾಜಕೀಯ ಸಮಾವೇಶ ಮತ್ತು ನ್ಯಾಯಾಲಯದ ನಿಷೇಧದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ರಾಜಕೀಯ ಮತ್ತು ಸಮಾಜದ ಬಗ್ಗೆ ಅವರ ದಿಟ್ಟ ಮಾತುಗಳು ಗಮನ ಸೆಳೆದಿವೆ.

ಹಾಗೇ ಚಿತ್ರರಂಗದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡ ಮನ್ಸೂರ್ ಅಲಿ ಖಾನ್, ಕಮಲ್ ಹಾಸನ್ ಅವರೊಂದಿಗೆ ನಟಿಸಲು ಅವಕಾಶ ಸಿಗದೇ ಇದ್ದಿದ್ದಕ್ಕೆ ಬೇಸರ ಹೊರ ಹಾಕಿದ್ದಾರೆ. "ನನ್ನ ವೃತ್ತಿ ಜೀವನದಲ್ಲಿ ಕಮಲ್ ಸರ್ ಜೊತೆ ನಟಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿಕೊಂಡಿದ್ದಾರೆ. ಸಂದರ್ಶನದ ಕೊನೆಯಲ್ಲಿ ಮನ್ಸೂರ್ ಅಲಿ ಖಾನ್, ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮ ಕಳವಳವನ್ನು ಕೂಡ ವ್ಯಕ್ತಪಡಿಸಿದರು. "ಪ್ರತಿಯೊಬ್ಬ ಮನುಷ್ಯನಿಗೂ ಬದುಕುವ ಹಕ್ಕಿದೆ" ಎಂದು ಹೇಳಿದ್ದಾರೆ.
ಇದೊಂದಿಗೆ ಕೇಂದ್ರ ಸರ್ಕಾರದ ನಡೆಯನ್ನೂ ಟೀಕಿಸಿದ್ದಾರೆ. ಜಿಎಸ್‌ಟಿ ಮತ್ತು ತೆರಿಗೆಗಳ ಬಗ್ಗೆ ಮಾತನಾಡುತ್ತಾ, ಜನರನ್ನು ಸಂಕಷ್ಟಕ್ಕೆ ಟೀಕಿಸಲಾಗುತ್ತಿದೆ ಎಂದಿದ್ದಾರೆ. "8000 ಕೋಟಿ ರೂಪಾಯಿಗಳಲ್ಲಿ ಪಾರ್ಲಿಮೆಂಟ್ ಕಟ್ಟಡವನ್ನು ನಿರ್ಮಿಸುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸಿದ್ದಾರೆ.
ಹಾಗೇ ಇತ್ತೀಚೆಗೆ ತೆರೆಕಂಡಿರುವ ಲೋಕೇಶ್ ಕನಕರಾಜ್ ಅವರ 'ಕೂಲಿ' ಸಿನಿಮಾದ ಬಗ್ಗೆ ಮಾತನಾಡುತ್ತಾ, ಮೊದಲಾರ್ಧ ಸ್ವಲ್ಪ ನಿಧಾನವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. 'ಕೈದಿ' ಚಿತ್ರದಲ್ಲಿ ಕಾರ್ತಿಕ್ ಬದಲಿಗೆ ಅವರನ್ನೇ ಆಯ್ಕೆ ಮಾಡಬೇಕಿತ್ತು ಎಂದು ತಮಾಷೆ ಮಾಡಿದ್ದು, ಕೊನೆಯಲ್ಲಿ, ಪ್ರಾಣಿಗಳ ಮೇಲಿನ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ನಾಯಿಗಳನ್ನು ಮನೆಯಲ್ಲಿ ಸಾಕುವುದರಿಂದ ಆಗುವ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ. ಪ್ರಾಣಿಗಳನ್ನು ಕಾಡಿನಲ್ಲಿ ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡುವುದರ ಜೊತೆಗೆ 'ಅಹಂ ಬ್ರಹ್ಮಾಸ್ಮಿ' ಹಾಡನ್ನು ಎಲ್ಲರೂ ಕೇಳಿ ಆನಂದಿಸಬೇಕು ಎಂದು ಹೇಳಿದ್ದಾರೆ.


Click it and Unblock the Notifications











