ಸೂಪರ್‌ಸ್ಟಾರ್ ರಜನಿ ಬಂಗಲೆ ಸಮೀಪ 4 ಬೆಡ್‌ರೂಮ್ ಫ್ಲ್ಯಾಟ್ ಖರೀಸಿದ ನಯನತಾರಾ
ನಯನತಾರಾ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್. ಈಕೆ ನಟಿಸುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿಬಿಡುತ್ತವೆ. ಸೂಪರ್‌ಸ್ಟಾರ್ ರಜನಿಕಾಂತ್‌ಯಿಂದ ಹಿಡಿದು ಬಾಲಿವುಡ್‌ನ ನಟ ಶಾರುಖ್ ಖಾನ್‌ವರೆಗೂ ನಯನತಾರಾ ನಟಿಸುತ್ತಿದ್ದಾರೆ. ಸೂಪರ್‌ಸ್ಟಾರ್‌ಗಳು ಕೂಡ ದಕ್ಷಿಣ ಭಾರತದ ಈ ಲೇಡಿ ಸೂಪರ್‌ಸ್ಟಾರ್ ಜೊತೆ ನಟಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಟ್ಟಿಗೆ ಇನ್ನೂ ಬೇಡಿಕೆ ಉಳಿಸಿಕೊಂಡಿರುವ ನಟಿ ತಲೈವಾ ರಜಿನಿಕಾಂತ್ ಬಂಗಲೆ ಪಕ್ಕದಲ್ಲೇ ಹೊಸ ಫ್ಲ್ಯಾಟ್ ಖರೀದಿಸಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ನಯನತಾರಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿರುವ 'ಅಣ್ಣಾತ್ತೆ' ಚಿತ್ರದಲ್ಲೂ ರಜನಿಕಾಂತ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಈಗ ಏಷ್ಯಾದ ದುಬಾರಿ ನಟ ರಜನಿಕಾಂತ್ ಬಂಗಲೆ ಇರುವ ಏರಿಯಾದಲ್ಲೇ ನಾಲ್ಕು ಬೆಡ್ ರೂಮ್ ಇರುವ ಭವ್ಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.

ರಜನಿ ಬಂಗಲೆ ಸಮೀಪ ನಯನತಾರಾ ಫ್ಲ್ಯಾಟ್
ಚೈನ್ನೈನಲ್ಲಿ ಪೋಯೆಸ್ ಗಾರ್ಡನ್ ಅತ್ಯಂತ ದುಬಾರಿ ಏರಿಯಾ. ಸೂಪರ್‌ಸ್ಟಾರ್ ರಜನಿಕಾಂತ್, ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಸೇರಿದಂತೆ ದಿಗ್ಗಜರೇ ಈ ಏರಿಯಾಲ್ಲಿ ವಾಸ ಮಾಡುತ್ತಿದ್ದಾರೆ. ಸದ್ಯ ಇದೇ ಏರಿಯಾದಲ್ಲಿ ರಜನಿಕಾಂತ್ ಅಳಿಯ ಧನುಷ್ ಕೂಡ ಹೊಸ ಬಂಗಲೆ ಕಟ್ಟಿಸುತ್ತಿದ್ದಾರೆ. ಈಗ ಇವರ ಸಾಲಿಗೆ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹೆಸರು ಕೂಡ ಸೇರಿಕೊಂಡಿದೆ. ನಯನತಾರಾ ಶೀಘ್ರದಲ್ಲಿಯೇ ಪೋಯೆಸ್ ಗಾರ್ಡನ್‌ನಲ್ಲಿ ಹೊಸದಾಗಿ ಖರೀದಿಸಿದ 4 ಬೆಡ್ ರೂಮಿನ ಫ್ಲ್ಯಾಟ್‌ಗೆ ಶಿಫ್ಟ್ ಆಗಲಿದ್ದಾರೆ.

ಇದೇ ಏರಿಯಾದಲ್ಲಿ ಮತ್ತೊಂದು ಬಂಗಲೆ ಖರೀಸಲು ಸ್ಕೆಚ್
ತಮಿಳು ಚಿತ್ರರಂಗದ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಈಗಾಗಲೇ ಹೊಸದಾಗಿ ಖರೀದಿಸಿರುವ 4 ಬೆಡ್ ರೂಮ್ ಫ್ಲ್ಯಾಟ್ ಜೊತೆ ಮತ್ತೊಂದು ಬಂಗಲೆಯನ್ನೂ ಕೊಂಡುಕೊಳ್ಳಲಿದ್ದಾರೆ. ಖರೀದಿ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ನಯನತಾರಾ ಅಧಿಕೃತವಾಗಿ ಈ ವಿಷಯವನ್ನು ತಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ನಿರ್ದೇಶಕ ವಿಘ್ನೇಶ್ ಜೊತೆ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಎರಡು ಬಂಗಲೆಗಳನ್ನು ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ವಿಘ್ನೇಶ್ ಜೊತೆ ವಿವಾಹ: ಈ ಫ್ಲ್ಯಾಟ್‌ನಲ್ಲೇ ವಾಸ
ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಇದೂವರೆಗೂ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡದೆ ಹೋದರೂ, ಸೋಶಿಯಲ್ ಮೀಡಿಯಾದಲ್ಲಿ ವಿಘ್ನೇಶ್ ಜೊತೆ ಇರುವ ನಯನತಾರಾ ಫೋಟೊಗಳು ಇವರ ಪ್ರೇಮಕತೆಯನ್ನು ಹೇಳುತ್ತಿದೆ. 2022ರಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಅದಕ್ಕಾಗಿ ಈ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿವಾಹದ ಬಳಿಕ ವಿಘ್ನೇಶ್ ಜೊತೆ ನಯನತಾರಾ ಇದೇ ಮನೆಯಲ್ಲಿ ವಾಸವಿರುತ್ತಾರೆ ಎನ್ನಲಾಗಿದೆ.

'ಗಾಡ್ ಫಾದರ್' ಜೊತೆ ನಟಿಸಲು 4 ಕೋಟಿ ಕೇಳಿದ ನಯನತಾರಾ
ಮೆಗಾಸ್ಟಾರ್ ಚಿರಂಜೀವಿ 'ಗಾಡ್ ಫಾದರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಜೊತೆ ನಟಿಸಲು ನಯನತಾರಾಗೆ ಆಫರ್ ನೀಡಲಾಗಿತ್ತು. ಆದರೆ, ನಯನತಾರಾ 'ಗಾಡ್ ಫಾದರ್' ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 4 ಕೋಟಿ ಸಂಭಾವನೆ ಕೇಳಿದ್ದಾರೆಂದು ವರದಿಯಾಗಿತ್ತು. ತನ್ನ 37ನೇ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿರುವ ಈ ನಟಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಜೊತೆ ಚೊಚ್ಚಲ ಬಾರಿಗೆ ನಟಿಸುತ್ತಿದ್ದಾರೆ. ಆಟ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











