Nayanthara-Dhanush Controversy:ನಯನತಾರಾ ಬೆಂಬಲಕ್ಕೆ ನಿಂತ ಮೇಘನಾ ರಾಜ್, ಅನುಪಮಾ, ಪಾರ್ವತಿ
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಬರೆದ ಬಹಿರಂಗ ಪತ್ರ ಸಂಚಲವನ್ನೇ ಸೃಷ್ಟಿಸಿದೆ. ಧನುಷ್ ವಿರುದ್ಧ ತಿರುಗಿಬಿದ್ದಿದ್ದ ನಯನತಾರಾ ನಡೆಯನ್ನು ತಮಿಳು ಚಿತ್ರರಂಗ ಅಚ್ಚರಿಯಿಂದ ನೋಡುತ್ತಿದೆ. ಇಬ್ಬರ ನಡುವಿನ ವಿವಾದ ಕೇವಲ ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿಗಾಗಿ ಅಷ್ಟೇನಾ? ಇಲ್ಲ ಇದರ ಹಿಂದೆ ಹಳೆಯ ದ್ವೇಷ ಏನಾದರೂ ಇದೆಯಾ? ಅನ್ನೋದನ್ನು ಹುಡುಕುವುದಕ್ಕೆ ಶುರು ಮಾಡಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಧನುಷ್ ವಿರುದ್ಧ ಸಿನಿಮಾ ಮಂದಿ ತಿರುಗಿ ಬೀಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ನಿರ್ಮಾಪಕರು ಸೇರಿದಂತೆ ಹಲವರು ಧನುಷ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈಗ ಸ್ವತ: ಲೇಡಿ ಸೂಪರ್‌ಸ್ಟಾರ್ ಧನುಷ್ ವಿರುದ್ಧ ತಿರುಗಿಬಿದ್ದಿದ್ದು ಕಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

ಮದುವೆಯ ಬಳಿಕವೂ ನಯನತಾರಾ ಸಕ್ಸಸ್ ಜರ್ನಿ ಮುಂದುವರೆದಿದೆ. ಹಾಗಂತ ನಯನತಾರಾ ಕೂಡ ವಿವಾದಗಳಲ್ಲಿ ಸಿಕ್ಕಿಕೊಂಡವರೇ. ಆದರೆ, ಧನುಷ್ ವಿವಾದ ಇತ್ತೀಚೆಗೆ ಸಾಕಷ್ಟು ಚರ್ಚೆ ಕೂಡ ಆಗಿತ್ತು. ಈಗ ನಯನತಾರಾ ಎತ್ತಿದ ಧ್ವನಿಗೆ ದಕ್ಷಿಣ ಭಾರತದ ನಟಿಯರು ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ಕೆಲವರು ಧನುಷ್ ಜೊತೆ ನಟಿಸಿದ ನಾಯಕಿಯರೇ ಆಗಿರುವುದು ಅಚ್ಚರಿ ಮೂಡಿಸಿದೆ.
ನಯನತಾರಾ ಪ್ರೀತಿಯಲ್ಲಿ ಸಾಕಷ್ಟು ಸೋಲುಗಳನ್ನು ಕಂಡವರು. ಹೀಗಾಗಿ ಖಿನ್ನತೆಗೆ ಜಾರಿದ್ದೂ ಕೂಡ ಇದೆ. ಆದರೆ, ಧನುಷ್ ನಿರ್ಮಾಣ ಮಾಡಿದ್ದ 'ನಾನುಂ ರೌಡಿ ಧನ್' ಸಿನಿಮಾದ ಸೆಟ್ಟಿನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮಧ್ಯೆ ಪ್ರೀತಿ ಚಿಗುರಿತ್ತು. ಸುಮಾರು 7 ವರ್ಷಗಳ ಕಾಲ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿ ಮಾಡಿದ್ದರು. ಎರಡು ವರ್ಷಗಳ ಹಿಂದಷ್ಟೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ನಯನತಾರಾ ನಿರ್ದೇಶಕ ವಿಘ್ನೇಶ ಶಿವನ್ ಜೊತೆ ಕೇವಲ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ 2022 ಮದುವೆ ಆಗಿದ್ದರು. ಮಹಾಬಲಿಪುರಂನಲ್ಲಿ ಈ ಮದುವೆ ಅದ್ಧೂರಿಯಾಗಿ ನಡೆದಿತ್ತು. ಈ ನಟಿಯ ವಿವಾಹದ ಕ್ಷಣಗಳನ್ನು ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿ ಮಾಡಿತ್ತು. ಇದಕ್ಕೆ ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡಿದೆ. ಇದೇ ಸಾಕ್ಷ್ಯಚಿತ್ರ ಈಗ ವಿವಾದಕ್ಕೆ ಸಿಲುಕಿದೆ.

ನಯನತಾರಾ ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ನೆಟ್‌ಪ್ಲಿಕ್ಸ್ ಡಾಕ್ಯೂಮೆಂಟರಿಯಲ್ಲಿ ನಯನತಾರಾ ಜೊತೆ ನಟಿಸಿದ ಸ್ಟಾರ್ ನಟರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕನ್ನಡದ ನಟಿ ಉಪೇಂದ್ರ ಕೂಡ ನಯನತಾರಾ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಎರಡು ವರ್ಷಗಳಿಂದ ಈ ಡಾಕ್ಯೂಮೆಂಟರಿಯನ್ನು ರಿಲೀಸ್ ಮಾಡುವುದಕ್ಕೆ ನಯನತಾರಾ ಪ್ರಯತ್ನ ಪಟ್ಟಿದ್ದರು. ಆದರೆ ಧನುಷ್ 'ನಾನುಂ ರೌಡಿ ಧನ್' ಸಿನಿಮಾದ ಹಾಡುಗಳು ಹಾಗೂ ದೃಶ್ಯಗಳನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಈ ಕಾರಣಕ್ಕೆ ನಯನತಾರಾ ಕೋಪಕೊಂಡು ಧನುಷ್ ವಿರುದ್ಧ ಬಹಿರಂಗ ಪತ್ರ ಬರೆದಿದ್ದರು. ಅದನ್ನು ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ದಕ್ಷಿಣ ಭಾರತದ ನಟಿಯರು ಲೈಕ್ ಕೊಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಅನುಪಮಾ ಪರಮೇಶ್ವರನ್, ಪಾರ್ವತಿ ತಿರುವೊತ್ತು, ಐಶ್ವರ್ಯ ರಾಜೇಶ್, ಐಶ್ವರ್ಯ ಲಕ್ಷ್ಮಿ, ಶ್ರುತಿ ಹಾಸನ್ ಲೈಕ್ ಮಾಡಿದ್ದಾರೆ. ಇವರಲ್ಲಿ ಶ್ರುತಿ ಹಾಸನ್ ಸೇರಿದಂತೆ ಕೆಲ ನಟಿಯರು ಧನುಷ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಹಾಗೇ ಕನ್ನಡದ ನಟಿ ಮೇಘನಾ ರಾಜ್ ಕೂಡ ಲೈಕ್ ಕೊಟ್ಟು ಬೆಂಬಲಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಕೂಡ ಲೈಕ್ ಕೊಟ್ಟು ಬೆಂಬಲಿಸಿದ್ದಾರೆ.


Click it and Unblock the Notifications











