ಮದ್ರಾಸ್ ಕೋರ್ಟ್‌ನಲ್ಲಿ ಸಿವಿಲ್ ಮೊಕದ್ಧಮೆ ದಾಖಲಿಸಿದ ಧನುಷ್; ನಯನತಾರಾಗೆ ಉತ್ತರ ಕೊಡಿ ಎಂದ ಕೋರ್ಟ್
ತಮಿಳು ಚಿತ್ರರಂಗದಲ್ಲಿ ನಯನತಾರಾ ಹಾಗೂ ಧನುಷ್ ಮಧ್ಯೆ ವೈಮನಸ್ಸು ಮೂಡಿದ ವಿಷಯ ಸುದ್ದಿಯಾಗುತ್ತಲೇ ಇದೆ. ನೆಟ್‌ಫ್ಲಿಕ್ಸ್‌ನಲ್ಲಿ ನಯನತಾರಾ ಕುರಿತ ಡಾಕ್ಯೂಮೆಂಟರಿ ಪ್ರಸಾರ ಆಗುತ್ತಿದೆ. ಇದರಲ್ಲಿ ಧನುಷ್ ನಿರ್ಮಿಸಿದ 'ನಾನುಂ ರೌಡಿ ಧನ್' ಸಿನಿಮಾದ ದೃಶ್ಯ ಬಳಸಿದ್ದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಸೇರಿದ್ದಾರೆ.
ತನ್ನ ಅನುಮತಿ ಇಲ್ಲದೆ ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿಯಲ್ಲಿ 'ನಾನುಂ ರೌಡಿ ಧನ್' ಸಿನಿಮಾದ ದೃಶ್ಯವನ್ನು ಬಳಸಿದ್ದಾರೆಂದು ಧನುಷ್ ಮದ್ರಾಸ್ ಹೈ ಕೋರ್ಟ್‌ನಲ್ಲಿ ಸಿವಿಲ್ ಮೊಕದ್ದನ್ನು ಹೂಡಿದ್ದಾರೆ. ನಟಿ ನಯನತಾರಾ, ಪತಿ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಅವರ ನಿರ್ಮಾಣ ಕಂಪನಿಯನ್ನು ಸೇರಿಸಿ ಸಿವಿಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ.

ನಯನತಾರಾ ಸಿನಿಮಾ ಜರ್ನಿ ಹಾಗೂ ಮದುವೆ ಕುರಿತ ಡಾಕ್ಯೂಮೆಂಟರಿಯನ್ನು ನಿರ್ಮಾಣ ಮಾಡಲಾಗಿತ್ತು. ಇದರ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಓಟಿಟಿ ವೇದಿಕೆ ಖರೀದಿ ಮಾಡಿತ್ತು. ಇದೇ ಡಾಕ್ಯೂಮೆಂಟರಿ ಈಗ ವಿವಾದಕ್ಕೆ ಸಿಲುಕಿದೆ. ನಯನತಾರಾ, ವಿಘ್ನೇಶ್ ಹಾಗೂ ಧನುಷ್ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.
'ನಯನತಾರಾ: ಬಿಯಾಂಡ್ ದಿ ಫೇರಿಟೇಲ್; ಡಾಕ್ಯೂಮೆಂಟರಿಯ ತುಣುಕಿನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಒಟ್ಟಿಗೆ ಕೆಲಸ ಮಾಡಿದ್ದ ಮೊದಲ ಸಿನಿಮಾ 'ನಾನುಂ ರೌಡಿ ಧನ್' ಚಿತ್ರದ ಹಿನ್ನೆಲೆ ದೃಶ್ಯವನ್ನು ಬಳಸಿದ್ದರು. ಮೂರು ಸೆಕೆಂಡುಗಳ ಈ ದೃಶ್ಯವನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ಧನುಷ್ ನೋಟಿಸ್ ಕಳುಹಿಸಿದ್ದರು. ಅಲ್ಲದೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ತಿಳಿಸಲಾಗಿತ್ತು. ಈ ನೋಟೀಸ್ ವಿರುದ್ಧ ನಯನತಾರಾ ಕಿಡಿಕಾರಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪತ್ರ ಬರೆದು ಪೋಸ್ಟ್ ಮಾಡಿದ್ದರು.

ಇದರ ಮುಂದುವರೆದ ಭಾಗವಾಗಿ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ವಿರುದ್ಧ ಧನುಷ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಭಾರತದಲ್ಲಿ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಹೆಸರಿನಲ್ಲಿ ಗುರುತಿಸಿಕೊಂಡಿರುವ ನೆಟ್‌ಫ್ಲಿಕ್ಸ್ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡುವುದಕ್ಕೆ ಅನುಮತಿಯನ್ನು ಕೇಳಲಾಗಿದೆ. ಎರಡೂ ಕಡೆಯ ವಾದವನ್ನು ಆಲಿಸಿದ ಬಳಿಕ ಕೋರ್ಟ್ ಅನುಮತಿಯನ್ನು ನೀಡಿದೆ.
ಈಗಾಗಲೇ ವರದಿಯಾಗಿರುವ ಪ್ರಕಾರ, ಮುಂದಿನ ವಿಚಾರಣೆ ವೇಳೆಗೆ ಧನುಷ್ ಹೂಡಿದ ಮೊಕದ್ದಮೆಗೆ ನಟಿ ನಯನತಾರಾ ಪ್ರತಿಕ್ರಿಯೆ ನೀಡಬೇಕಿದೆ. ಧನುಷ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಂತೆ ಇದೆ. ಹೀಗಾಗಿ ನಯನತಾರಾ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಆದರೆ, ಬಹಿರಂಗ ಪತ್ರದಲ್ಲಿ ನಯನತಾರಾ ಕೂಡ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದು, ಅವರ ಮುಂದಿನ ನಡೆ ಹೇಗಿರುತ್ತೆ ಅನ್ನೋದನ್ನು ನೋಡಬೇಕಿದೆ.
'ನಾನುಂ ರೌಡಿ ಧನ್' ಸಿನಿಮಾ 2015ರಲ್ಲಿ ರಿಲೀಸ್ ಆಗಿತ್ತು. ಈ ವೇಳೆ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಸುಮಾರು ಏಳು ವರ್ಷಗಳ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ವೈವಾಹಿಕ ಜೀವನದ ಅತ್ಯಮೂಲ್ಯ ಸಿನಿಮಾ ಆಗಿದ್ದರಿಂದ 'ನಾನುಂ ರೌಡಿ ಧನ್' ದೃಶ್ಯ ಬಳಸಲು ಧನುಷ್ ಬಳಿ ಅನುಮತಿ ಕೇಳಿದ್ದರು. ಆದರೆ, ಧನುಷ್ ಎರಡು ವರ್ಷವಾದರೂ ಅನುಮತಿ ನೀಡಲಿಲ್ಲ ಎಂದು ನಯನತಾರಾ ಆರೋಪ ಮಾಡಿದ್ದರು.


Click it and Unblock the Notifications











