ದೀಪಿಕಾ ಪಡುಕೋಣೆ ಜೊತೆ ಮುನಿಸು ; ಜವಾನ್ ಒಪ್ಪಿಕೊಂಡಿದ್ದೇಕೆ ನಯನತಾರಾ..?
ಸಾಮಾನ್ಯಕ್ಕೆ ಇಬ್ಬರು ಸ್ಟಾರ್ ಗಳು ಒಂದೇ ಚಿತ್ರಕ್ಕೆ ಬಣ್ಣ ಹಚ್ಚಿದರೆ, ನಿರ್ದೇಶಕರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತೆ. ಸ್ವಾರದ್ವಯರ ವರ್ಚಸ್ಸಿಗೆ ಅನುಗುಣವಾಗಿ, ಅವರ ಅಭಿಮಾನಿಗಳನ್ನ ಗಮನದಲ್ಲಿಟ್ಟುಕೊಂಡು ಕಥೆಯನ್ನ ಹೆಣೆಯಬೇಕಾಗುತ್ತೆ. ಇಬ್ಬರ ಪಾತ್ರಕ್ಕೂ ಸಮಾನವಾದ ಪ್ರಾಮುಖ್ಯತೆಯನ್ನೂ ನೀಡಬೇಕಾಗುತ್ತೆ. ಚೂರು ಹೆಚ್ಚು ಕಡಿಮೆ ಆದರೂ.. ಇಬ್ಬರು ಸ್ಟಾರ್ ಗಳ ನಡುವಿನ ಈಗೋ ಕ್ಲ್ಯಾಶು ಆ ಸಿನಿಮಾವನ್ನೇ ಬಲಿ ಪಡೆಯುವ ಸಾಧ್ಯತೆ ಇರುತ್ತೆ. ಸಿನಿಮಾದ ನೆಪದಲ್ಲಿ ಮೂಡುವ ಬಿರುಕು ಆ ನಂತರ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇರುತ್ತೆ.
ಇನ್ನೂ ಚಿತ್ರಕ್ಕೆ ಬಣ್ಣ ಹಚ್ಚಿದ ಸ್ಟಾರ್ ಗಳ ಮನಸಿನಲ್ಲಿ ಕಲ್ಮಶ ಇರುತ್ತೋ ಇಲ್ಲವೋ. ಆದರೆ ಈ ಹಬೆಯಲ್ಲಿ ಅನೇಕರು ತಮ್ಮ ಬೆಳೆಯನ್ನ ಬೇಯಿಸಿಕೊಳ್ಳುತ್ತಾರೆ. ಇಲ್ಲ ಸಲ್ಲದ ಸುದ್ದಿಯನ್ನ ತೇಲಿ ಬಿಡುತ್ತಾರೆ. ನಯನತಾರಾ ಹಾಗೂ ದೀಪಿಕಾ ಪಡುಕೋಣೆ ವಿಚಾರದಲ್ಲಿಯೂ ಇದೇ ಆಗಿತ್ತು.

ಹೌದು, ನಿಮಗೆ ನೆನಪಿದ್ದರೆ.. ಜವಾನ್ ಚಿತ್ರ ತೆರೆಗೆ ಬಂದ ನಂತರ, ನಯನತಾರಾ-ದೀಪಿಕಾ ಪಡುಕೋಣೆಯ ನಡುವೆ ಸಂಬಂಧ ಹಳಿಸಿದೆ ಅನ್ನುವ ಮಾತು ಕೇಳಿ ಬಂದಿತ್ತು. ದೀಪಿಕಾ ಪಡುಕೋಣೆಯ ಪಾತ್ರಕ್ಕೆ ಚಿತ್ರದ ದ್ವೀತಿಯಾರ್ಧದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಕಾರಣಕ್ಕೆ ನಯನತಾರಾ, ಚಿತ್ರದ ನಿರ್ದೇಶಕ ಆಟ್ಲೀ ಮೇಲೆ ಮುನಿಸಿಕೊಂಡಿದ್ದಾರೆ ಅನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.
ಇಷ್ಟೆಲ್ಲಾ ಆದರೂ ನಯನತಾರಾ ಮಾತನಾಡಿರಲಿಲ್ಲ. ದೀಪಿಕಾ ಪಡುಕೋಣೆ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಹರಿದಾಡಿದ ಈ ಸುದ್ದಿಯನ್ನೇ ಅನೇಕರು ನಿಜ ಎಂದುಕೊಂಡಿದ್ದರು. ಆದರೆ ವಾಸ್ತವದಲ್ಲಿ ಈ ಸುದ್ದಿ ಸುಳ್ಳು. ಖುದ್ದು ನಯನತಾರಾ ಈ ಮಾತನ್ನ ಹೇಳಿದ್ದಾರೆ
ಹೌದು, ಜವಾನ್ ಚಿತ್ರದ ಸುತ್ತ ಮುತ್ತ ಒಂದಿಷ್ಟು ವಿಚಾರವನ್ನ ಹಂಚಿಕೊಂಡಿರುವ ನಯನತಾರಾ, ಜವಾನ್ ಚಿತ್ರದ ಮೂಲಕವೇ ಬಾಲಿವುಡ್‌ಗೆ ಕಾಲಿಟ್ಟಿದ್ದೇಕೆ ಅನ್ನುವುದಕ್ಕೂ ಉತ್ತರವನ್ನ ಕೊಟ್ಟಿದ್ದಾರೆ. ಆ ಉತ್ತರದ ಹೆಸರು ಶಾರುಖ್ ಖಾನ್ ಅನ್ನುವುದು ವಿಶೇಷ.
ಶಾರುಖ್ ಖಾನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಎಂದಿರುವ ನಯನತಾರಾ, ನಾನು ಕೂಡ ಅವರ ಅಭಿಮಾನಿ. ಅವರ ಸಿನಿಮಾಗಳನ್ನ ನೋಡುತ್ತಾ ಚಿತ್ರರಂಗಕ್ಕೆ ಬಂದವಳು ನಾನು ಅಂದಿದ್ದಾರೆ. ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಳ್ಳುವ ಆಸೆ ನನ್ನಲ್ಲಿಯೂ ಇತ್ತು ಅಂದಿದ್ದಾರೆ. ಇನ್ನೂ ಶಾರುಖ್ ಖಾನ್ ಮಹಿಳೆಯರಿಗೆ ತುಂಬಾನೇ ಮರ್ಯಾದೆ ಕೊಡ್ತಾರೆ, ಗೌರವ ಕೊಡ್ತಾರೆ ಎಂದಿರುವ ನಯನತಾರಾ ಜವಾನ್‌ನಂತಹ ಸಿನಿಮಾಗಾಗಿ ನಾನು ಕಾಯುತ್ತಿದ್ದೆ. ದೊಡ್ಡ ತಾರಾಬಳಗವೇ ಇರಬೇಕು ಮತ್ತು ಚಿತ್ರವೂ ಅದ್ಧೂರಿ ಮಟ್ಟದಲ್ಲಿರಬೇಕು. ನನ್ನ ಪಾತ್ರಕ್ಕೆ ತೂಕ ಇರಬೇಕು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ಜವಾನ್ ನನಗೆ ಸಿಕ್ಕಿತು ಎಂದಿದ್ದಾರೆ. ಈ ಕಾರಣಕ್ಕೆ ತಕ್ಷಣವೇ ಒಪ್ಪಿಕೊಂಡೆ ಎಂದಿರುವ ನಯನತಾರಾ ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ಜವಾನ್ ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತೆ ಎಂದು ನನಗೆ ಗೊತ್ತಿತ್ತು ಅಂದಿದ್ದಾರೆ. ನನ್ನ ಇಷ್ಟು ವರ್ಷದ ಅನುಭವದಿಂದ ಯಾವ ಚಿತ್ರ ನಿಲ್ಲುತ್ತೆ.. ಯಾವ ಚಿತ್ರ ಬೀಳುತ್ತೆ.. ಅನ್ನುವ ಪಾಠವನ್ನ ನನಗೆ ಕಲಿಸಿ ಕೊಟ್ಟಿದೆ ಅಂದಿದ್ದಾರೆ.

ಇನ್ನೂ ಜವಾನ್ ಚಿತ್ರದ ನಂತರ ನಯನತಾರಾಗೆ ಚಿನ್ನದ ಬೇಡಿಕೆ ಸೃಷ್ಟಿಯಾಗಿದೆ. ಕೇವಲ ಸೌತ್ ನಲ್ಲಿ ಅಷ್ಟೇ ಅಲ್ಲ. ನಾರ್ತ್ ನಲ್ಲಿಯೂ ಕೂಡ ನಯನತಾರಾ ಕಾಲ್ ಶೀಟ್ ಗೆ ಅನೇಕರು ದುಂಬಾಲು ಬಿದ್ದಿದ್ದಾರೆ. ಆದರೆ ನಯನತಾರಾ ಮಾತ್ರ ಮೊದಲಿಂದ ಸ್ಟಾರ್ ಆಕ್ಟರ್- ಸ್ಟಾರ್ ಡೈರೆಕ್ಟರ್ ಬೇಕು ಎಂದು ಪಟ್ಟು ಹಿಡಿದು ಕುಳಿತುಕೊಂಡಿಲ್ಲ. ಕಥೆ ಚೆನ್ನಾಗಿದ್ದರೆ ಪಾತ್ರಕ್ಕೆ ಬಣ್ಣ ಹಚ್ಚಲು ಸಿದ್ದ ಅನ್ನುವುದು ನಯನತಾರಾ ಮೊದಲಿಂದ ಪಾಲಿಸಿಕೊಂಡು ಬಂದ ಪಾಲಿಸಿ. ಈ ಪಾಲಿಸಿಯನ್ನೇ ನಯನತಾರಾ ಸದ್ಯಕ್ಕೆ ಫಾಲೋ ಮಾಡ್ತಿದ್ದಾರೆ. ಓಕೆ. 'ಮನ್ನಂಗಟ್ಟಿ: ಸಿನ್ಸ್ 1960' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಸಿದ್ಧಾರ್ಥ್, ತ್ರಿಶಾ ಮತ್ತು ಆರ್ ಮಾಧವನ್ ಅಭಿನಯದ ಚಿತ್ರದಲ್ಲಿ ಕೂಡ ನಟಿಸುತ್ತಿರುವ ನಯನತಾರಾ. ನಿರ್ಮಾಪಕ ಶಶಿಕಾಂತ್ ನಿರ್ದೇಶನದ ಮೊದಲ ಚಿತ್ರಕ್ಕೂ . ನಾಯಕಿ.
ಒಟ್ನಲ್ಲಿ ಜವಾನ್ ಚಿತ್ರದ ಬಗ್ಗೆ ಅನೇಕರಲ್ಲಿ ಇದ್ದ ಗೊಂದಲಗಳಿಗೆ, ಜವಾನ್ ಚಿತ್ರದ ಬಗ್ಗೆ ಮಾತನಾಡುವುದರ ಮೂಲಕ ನಯನತಾರಾ ಉತ್ತರವನ್ನ ಕೊಟ್ಟಿದ್ದಾರೆ. ಜವಾನ್ ಚಿತ್ರ ಒಪ್ಪಿಕೊಳ್ಳಲು ಪ್ರಮುಖವಾದ ಕಾರಣ ಶಾರುಖ್ ಖಾನ್ ಎಂದಿದ್ದಾರೆ. ಭವಿಷ್ಯದಲ್ಲಿ ಹಿಂದಿ ಚಿತ್ರರಂಗದಲ್ಲಿ ಉತ್ತಮ ಪಾತ್ರ ಸಿಕ್ಕರೆ ಮಾಡುವುದಾಗಿಯೂ ಕೂಡ ನಯನತಾರಾ ಹೇಳಿದ್ದಾರೆ.


Click it and Unblock the Notifications












