"ವಿಜಯ್ ತುಂಬಾ ಬುದ್ಧಿವಂತ.. ಅವರ ಎದುರು ಸ್ಪರ್ಧಿಸುವುದು ನನಗೆ ಇಷ್ಟ"; ಕ್ರೇಜಿಸ್ಟಾರ್ ನಾಯಕಿ ನಮಿತಾ
ತಮಿಳಿನ ಜನಪ್ರಿಯ ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಕಟ್ಟಿರುವುದು ಗೊತ್ತೇ ಇದೆ. ಇತ್ತೀಚೆಗೆ 'ತಮಿಳಗ ವೆಟ್ರಿ ಕಳಗಂ' ಅನ್ನುವ ತಮ್ಮದೇ ಸ್ವಂತ ರಾಜಕೀಯ ಪಕ್ಷವನ್ನು ಅನೌನ್ಸ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಆರಂಭಕ್ಕೂ ಮುನ್ನ ಪಕ್ಷ ಘೋಷಣೆ ಮಾಡಿದ್ದರೂ, ಈ ಬಾರಿ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.
2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ದಳಪತಿಗಳು ಸ್ಪರ್ಧೆ ಮಾಡುವುದಾಗಿ ದಳಪತಿ ವಿಜಯ್ ಈಗಾಗಲೇ ಹೇಳಿಕೊಂಡಿದ್ದಾರೆ. ವಿಜಯ್ ಪಕ್ಷ ಅನೌನ್ಸ್ ಆದಲ್ಲಿಂದ ಅಲ್ಲಿ ಪ್ರಾದೇಶಿಕ ಪಕ್ಷಗಳು ತಲೆ ಕೆಡಿಸಿಕೊಂಡಿವೆ. ಈ ಮಧ್ಯೆ ವಿಜಯ್‌ಗೆ ಎದುರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಕಾಂಪಿಟೇಟರ್ ಒಬ್ಬರು ಹುಟ್ಟಿಕೊಂಡಿದ್ದಾರೆ.

ಅದು ಮತ್ಯಾರೂ ಅಲ್ಲ ಬಹುಭಾಷಾ ಗ್ಲಾಮರಸ್ ನಟಿ, ಕ್ರೇಜಿಸ್ಟಾರ್ ನೀಲಕಂಠ ಸಿನಿಮಾದ ನಟಿ ನಮಿತಾ. ಇತ್ತೀಚೆಗೆ ನಟಿ ನಮಿತಾ ಸಂದರ್ಶನವೊಂದನ್ನು ನೀಡಿದ್ದರು. ಆ ವೇಳೆ ದಳಪತಿ ವಿಜಯ್ ಎದುರು ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ ಮಾಡ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ದಳಪತಿ ವಿಜಯ್ ಬಗ್ಗೆ ಸಂದರ್ಶನದಲ್ಲಿ ನಮಿತಾ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ..
ತಮಿಳುನಾಡಿನಲ್ಲಿ ದಳಪತಿ ವಿಜಯ್ ಇರುವ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದಳಪತಿ ವಿಜಯ್ ಸಿನಿಮಾ ಅಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಥಿಯೇಟರ್‌ಗಳ ಮುಂದೆ ಅವರ ಸಂಭ್ರಮಕ್ಕೆ ಮಿತಿಯೇ ಇರುವುದಿಲ್ಲ. ಈ ಮಟ್ಟಿಗೆ ಕ್ರೇಜ್ ಇರುವ ನಟ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಿದೆ. ಇನ್ನು ಎರಡೇ ಸಿನಿಮಾಗಳಲ್ಲಿ ನಟಿಸುವುದಾಗಿ ವಿಜಯ್ ಹೇಳಿಕೊಂಡಿದ್ದಾರೆ. ಹೀಗಾಗಿ ಇನ್ನೆರಡು ವರ್ಷಗಳಲ್ಲಿ ತಮಿಳುನಾಡು ಪಾಲಿಟಿಕ್ಸ್‌ನಲ್ಲಿ ಏನೆಲ್ಲ ಬದಲಾವಣೆ ಆಗಬಹುದೆಂದು ರಾಜಕೀಯ ವಿಶ್ಲೇಷಕರು ಎದುರು ನೋಡುತ್ತಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಎದುರು ಯಾರೆಲ್ಲ ಪೈಪೋಟಿ ಕೊಡಬಹುದು ಎಂದು ಲೆಕ್ಕಾಚಾರ ಹಾಕುತ್ತಿರುವಾಗಲೇ ಬಹುಭಾಷಾ ನಟಿ, ಗ್ಲಾಮರ್ ಡಾಲ್ ನಮಿತಾ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸಂದರ್ಶನದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ದಳಪತಿ ವಿಜಯ್ ಎದುರು ಸ್ಪರ್ಧೆ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ನಟಿ ನಮಿತಾ ತಮಿಳುನಾಡಿನ ಬಿಜೆಪಿ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿದ್ದಾರೆ. ಸದ್ಯ 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಕ್ಟಿವ್ ಆಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಮಂತ್ರಿ ತಮಿಳುನಾಡಿನ ಎಲ್ ಮುರುಗನ್ ಪರ ಕ್ಯಾಂಪೇನ್ ಮಾಡಿದ್ದಾರೆ. ನೀಲಗಿರೀಸ್ ಕ್ಷೇತ್ರದಿಂದ ಎಲ್ ಮುರುಗನ್ ಸ್ಪರ್ಧೆ ಮಾಡುತ್ತಿದ್ದು, ನಮಿತಾ ನೋಡುವುದಕ್ಕೆ ಜನರು ಕಿಕ್ಕಿರಿದು ಸೇರಿದ್ದರು.
ತಮಿಳುನಾಡಿನಲ್ಲಿ ನಮಿತಾಗೆ ಕಮ್ಮಿ ಫ್ಯಾನ್ ಫಾಲೋವಿಂಗ್ ಇಲ್ಲ. ಈ ನಟಿ ಬಗ್ಗೆ ಅಲ್ಲಿಗೆ ಜನರಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಅದಕ್ಕಾಗಿಯೇ ಫ್ಯಾನ್ಸ್ ನಮಿತಾಗಾಗಿ ಗುಡಿಯನ್ನೇ ಕಟ್ಟಿ ಅಭಿಮಾನ ಮೆರೆದಿದ್ದಾರೆ. ಹೀಗಾಗಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನಮಿತಾ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಅದಕ್ಕೇ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ದಳಪತಿ ವಿಜಯ್ ಎದುರು ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ದಳಪತಿ ವಿಜಯ್ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆ ಮಾಡಲಾಗಿತ್ತು. ಈ ವೇಳೆ ನಮಿತಾ " ವಿಜಯ್ ಬಹಳ ಬುದ್ಧಿವಂತರು. ಇಂತಹ ಸಮಯದಲ್ಲಿ ನಾನು ಸ್ಪರ್ಧೆ ಮಾಡಬೇಕು. ರಾಜಕೀಯದಲ್ಲಿ ಬುದ್ದಿವಂತ ಎದುರಾಳಿಯ ಎದುರು ಸ್ಪರ್ಧಿಸಬೇಕು. ಅವರ ರಾಜಕೀಯ ಪಕ್ಷಕ್ಕೆ ಹಾಗೂ ಬೆಳವಣಿಗೆಗೆ ನನ್ನ ಶುಭಾಶಗಳು" ಎಂದು ನಮಿತಾ ಪರೋಕ್ಷವಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತಾಡಿದ್ದಾರೆ.


Click it and Unblock the Notifications











