ರಜನಿ 'ಜೈಲರ್ 2'ಗೆ ಸ್ಕ್ರಿಪ್ಟ್ ಬರೆಯಲು ಕೂತ ನೆಲ್ಸನ್: ಇರ್ತಾರಾ ಬಾಲಣ್ಣ- ಶಿವಣ್ಣ?
ಸೂಪರ್‌ಸ್ಟಾರ್ ರಜನಿಕಾಂತ್‌ಗೆ, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‌ಗೆ ಮತ್ತೆ ಸಕ್ಸಸ್ ಕೊಟ್ಟಿದ್ದು 'ಜೈಲರ್'. ಸೋಲಿನ ಸುಳಿಗೆ ಸಿಲುಕಿ ಕಂಗಾಲಾಗಿದ್ದ ಇವರಿಬ್ಬರಿಗೂ 'ಜೈಲರ್' ಕೊಟ್ಟ ಯಶಸ್ಸು ಇನ್ನೂ ಮೂರು ಸಿನಿಮಾಗಳಿಗೆ ಆಗುವಷ್ಟಿದೆ. ಇದೇ ಜೋಷ್‌ನಲ್ಲಿ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ 'ಜೈಲರ್ 2' ಅನ್ನು ಆರಂಭಿಸಿದ್ದರು.
'ಜೈಲರ್ 2' ಅನೌನ್ಸ್ ಮಾಡಿದ್ದೇ ಅಷ್ಟೇ ಬಂತು. ಆದರೆ, ಕೆಲವು ದಿನಗಳು ಈ ಬಗ್ಗೆ ಸುದ್ದಿನೇ ಇರಲಿಲ್ಲ. ಈಗ ಕಾಲಿವುಡ್‌ನಲ್ಲಿ 'ಜೈಲರ್ 2' ಬಗ್ಗೆ ಫ್ರೆಶ್ ಸುದ್ದಿಯೊಂದು ಹರಿದಾಡುತ್ತಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಇದೇ ತಿಂಗಳಲ್ಲಿ ಪ್ರೀ ಪ್ರೊಡಕ್ಷನ್ ಕೆಲಸ ಆರಂಭ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಕ್ರೇಜಿ ಪ್ರಾಜೆಕ್ಟ್ ಸಿನಿಮಾ ಮಂದಿಯಲ್ಲಿ ಕುತೂಹಲ ಹೆಚ್ಚಿಸಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ವರ್ಲ್ಡ್ ವೈಡ್ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂಪಾಯಿ ಲೂಟಿ ಮಾಡಿತ್ತು. ಸನ್ ಪಿಕ್ಚರ್ಸ್ ನಿರ್ಮಿಸಿದ್ದ ಈ ಸಿನಿಮಾದಿಂದ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಲಾಭ ಮಾಡಿತ್ತು. ಹೀಗಾಗಿ 'ಜೈಲರ್ 2' ಸ್ಕ್ರಿಪ್ಟ್‌ಗೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.
ಸದ್ಯ 'ಜೈಲರ್ 2' ಸ್ಕ್ರಿಪ್ಟ್ ಮುಗಿಯುತ್ತಿದ್ದಂತೆ ಇದೇ ವರ್ಷದ ಕೊನೆಯಲ್ಲಿ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗಿದೆ. 'ಜೈಲರ್' ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಮೀರಿಸುವಂತಹ ಸಿನಿಮಾ ಮಾಡಬೇಕು ಅಂತ ಚಿತ್ರತಂಡ ಸಾಕಷ್ಟು ಕಸರತ್ತು ಮಾಡುತ್ತಿದೆ. 'ಜೈಲರ್'ನಲ್ಲಿ ರಜನಿಕಾಂತ್ ರಮ್ಯಾ ಕೃಷ್ಣನ್, ವಸಂತ ರವಿ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್ ಅಂತಹ ಮೇರು ನಟರು ನಟಿಸಿದ್ದರು.

ರಜನಿ 'ಜೈಲರ್' ಅವತಾರದಲ್ಲಿ ಫುಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಕನ್ನಡದಲ್ಲಿಯೇ ಸುಮಾರು 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ, ಕನ್ನಡದ ವಿತರಕರಿಗೆ ಭಾರಿ ಲಾಭ ತಂದುಕೊಟ್ಟಿತ್ತು.
ಇನ್ನು 'ಜೈಲರ್' ಸಿನಿಮಾದಲ್ಲಿ ಕೇವಲ 10 ನಿಮಿಷ ಕಾಣಿಸಿಕೊಂಡಿದ್ದರೂ, ಶಿವಣ್ಣ ಸೂಪರ್‌ಸ್ಟಾರ್ ರಜನಿಯಷ್ಟೇ ಮಿಂಚಿದ್ದರು. ಶಿವಣ್ಣನ ಖದರ್‌ಗೆ ತಮಿಳು ಸಿನಿಪ್ರಿಯರ ಕಳೆದು ಹೋಗಿದ್ದರು. ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನೆಲ್ಸನ್ ದಿಲೀಪ್ ಕುಮಾರ್ ಇದೇ ತಿಂಗಳು ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಆರಂಭಿಸಲಿದ್ದಾರೆ. ಅಲ್ಲದೆ ಸಿನಿಮಾಗೆ 'ಹುಕುಂ' ಎಂದು ಟೈಟಲ್ ಇಡಲಾಗಿದೆ ಅಂತ ತಮಿಳಿ ವೆಬ್ ಸೈಟ್‌ಗಳು ವರದಿ ಮಾಡಿವೆ. ಇದರೊಂದಿಗೆ ತೆಲುಗಿನಿಂದ ಬಾಲಯ್ಯ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಹಾಗೇ ಶಿವಣ್ಣ ಪಾರ್ಟ್ 2ನಲ್ಲೂ ಇರುತ್ತಾರಾ? ಅನ್ನೋದು ಸದ್ಯಕ್ಕೆ ಕುತೂಹಲ.
ಇನ್ನೊಂದು ಕಡೆ ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಸಿನಿಮಾ ಇನ್ನೇನು ಆರಂಭ ಆಗಬೇಕಿದೆ. ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ ಈ ಸಿನಿಮಾ ಇದೇ ತಿಂಗಳು 10ರಿಂದ ಚಿತ್ರೀಕರಣ ಆರಂಭ ಆಗಲಿದೆ. ಹಿಮಾಲಯಕ್ಕೆ ಆಧ್ಯಾತ್ಮ ಪ್ರವಾಸಕ್ಕೆ ಹೋಗಿದ್ದ ರಜನಿಕಾಂತ್ ಚೆನ್ನೈಗೆ ಹಿಂತಿರುಗಿದ್ದಾರೆ. ಜೂನ್ 10 ರಿಂದ 'ಕೂಲಿ' ಸಿನಿಮಾದ ಶೂಟಿಂಗ್ ಕೂಡ ಆರಂಭಿಸಲಿದ್ದಾರೆ. ಈ ಗ್ಯಾಪ್‌ನಲ್ಲೇ 'ಜೈಲರ್ 2' ಬಗ್ಗೆನೂ ಸುದ್ದಿ ಓಡಾಡುತ್ತಿದೆ.


Click it and Unblock the Notifications











