ಈ ಸಲ 'ಇಂಡಿಯನ್' ಕನ್ನಡ ಮಾತಾಡಲ್ವಾ?; ನೆಟ್ಟಿಗರ ಆಕ್ರೋಶ
ಉಳಗ ನಾಯಗನ್ ಕಮಲ್ ಹಾಸನ್ ನಟನೆಯ 'ಇಂಡಿಯನ್'-2 ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. 90ರ ದಶಕದ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಇದು. ಮತ್ತೆ ಶಂಕರ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ಭಾರೀ ಕುತೂಹಲ ಮೂಡಿಸಿದೆ. ಭ್ರಷ್ಟಾಚಾರದ ವಿರುದ್ಧ ಮತ್ತೆ ಸೇನಾಪತಿ ತಾತನ ಹೋರಾಟ ನಡೆಯಲಿದೆ.
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ 'ಇಂಡಿಯನ್-2' ಸಿನಿಮಾ ನಿರ್ಮಾಣವಾಗಿದೆ. ಕಾರಣಾಂತರಗಳಿಂದ ಸಿನಿಮಾ ತಡವಾಯಿತು. ಚಿತ್ರೀಕರಣದ ನಡುವೆ ನಡೆದ ದುರಂತದಿಂದ ಸಿನಿಮಾ ನಿಂತೇ ಹೋಗಿತ್ತು. ಬಳಿಕ ಮತ್ತೆ ಶೂಟಿಂಗ್ ಆರಂಭಿ 2 ಭಾಗಗಳಾಗಿ ಸಿನಿಮಾ ಸೆರೆಹಿಡಿಯಲಾಗಿದೆ. ಹೌದು ಇಂಡಿಯನ್ -2 ಮಾತ್ರವಲ್ಲ ಪಾರ್ಟ್- 3 ಕೂಡ ಸಿದ್ಧವಾಗಿದೆ.

1996ರಲ್ಲಿ ಬಂದಿದ್ದ 'ಇಂಡಿಯನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕಮಲ್ ಹಾಸನ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇಂಡಿಯನ್ ನ್ಯಾಷನಲ್ ಆರ್ಮಿ ಸದಸ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಪಾತ್ರದಲ್ಲಿ ಕಮಲ್ ಹಾಸನ್ ಅಭಿನಯ ಮೋಡಿ ಮಾಡಿತ್ತು. ಮುಳ್ಳನ್ನು ಮಳ್ಳಿನಿಂದಲೇ ತೆಗೆಯಬೇಕು ಎಂದು ನಿರ್ಧರಿಸಿ ದೇಶದಲ್ಲಿರುವ ಭ್ರಷ್ಟಾಚಾರದ ವಿರುದ್ಧ ತನ್ನದೇ ಮಾರ್ಗದಲ್ಲಿ ಹೋರಾಡುವ ನಾಯಕನಾಗಿ ಕಮಲ್ ಮಿಂಚಿದ್ದರು. ಕೊನೆಗೆ ತನ್ನ ಮಗನೇ ತಪ್ಪಿತಸ್ಥ ಎಂದು ಗೊತ್ತಾದಾಗ ಆತನಿಗೂ ತಕ್ಕ ಬುದ್ಧಿ ಕಲಿಸುವ ಕಥೆ ಪ್ರೇಕ್ಷಕರ ಮನಗೆದ್ದಿತ್ತು.
ಭಾರತ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅನ್ಯಾಯದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿದುಕೊಂಡ ಸೇನಾಪತಿ ಹಾಂಗ್ ಕಾಂಗ್‌ನಿಂದ ವಾಪಸ್ ಆಗಿ ಏನೆಲ್ಲಾ ಮಾಡ್ತಾನೆ ಎನ್ನುವುದನ್ನು ಸೀಕ್ವೆಲ್‌ನಲ್ಲಿ ಹೇಳಲಾಗುತ್ತಿದೆ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿದೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುತ್ತಿದ್ದಾರೆ. 'ಇಂಡಿಯನ್-2' ಚಿತ್ರ ಕನ್ನಡದಲ್ಲಿ ಬರುತ್ತಾ? ಇಲ್ವಾ? ಎನ್ನುವ ಗೊಂದಲ ಶುರುವಾಗಿದೆ.
5 ಭಾಷೆಗಳಲ್ಲಿ ಒಟ್ಟಿಗೆ 'ಇಂಡಿಯನ್-2' ತೆರೆಗೆ ತರುವುದಾಗಿ ಹಿಂದೆ ಘೋಷಣೆ ಮಾಡಲಾಗಿತ್ತು. ಕನ್ನಡದಲ್ಲಿ ಟೀಸರ್ ಸಹ ಬಿಡುಗಡೆ ಆಗಿತ್ತು. ಆದರೆ ಹೊಸ ಪೋಸ್ಟರ್‌ನಲ್ಲಿ ಕೇವಲ 3 ಭಾಷೆಗಳಲ್ಲಿ ಮಾತ್ರ ಸಿನಿಮಾ ರಿಲೀಸ್ ಎಂದು ಘೋಷಿಸಲಾಗಿದೆ. ಕೆಲವರು ಕನ್ನಡದಲ್ಲಿ ಯಾಕೆ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.

ಕನ್ನಡಕ್ಕೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವ ವಿಚಾರದಲ್ಲಿ ಪದೇ ಪದೆ ಇದೇ ರೀತಿ ಮಾಡಲಾಗುತ್ತಿದೆ. ಕೆಲವರು ನೇರವಾಗಿ ತಮ್ಮ ಭಾಷೆಯಲ್ಲೇ ಕರ್ನಾಟಕದಲ್ಲೂ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದ್ಕಾಲದಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ. ಆದರೆ ಈಗ ಇದೆ. ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಬೇಕು ಎಂದು ಕೆಲವರು ಆಗ್ರಹಿಸುತ್ತಾ ಬರುತ್ತಿದ್ದಾರೆ.
ಜೂನ್ 13ಕ್ಕೆ 'ಇಂಡಿಯನ್'-2 ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಎಸ್. ಜೆ ಸೂರ್ಯ, ಕಾಜಲ್ ಅಗರ್‌ವಾಲ್, ಸಿದ್ದಾರ್ಥ್, ರಕುಲ್ ಪ್ರೀತ್‌ಸಿಂಗ್, ವಿವೇಕ್, ಬಾಬಿ ಸಿಂಹ ಸೇರಿದಂತೆ ದೊಡ್ಡ ತಾರಾಗಣ ಈ ಸೀಕ್ವೆಲ್ ಚಿತ್ರದಲ್ಲಿದೆ. 2020 ಫೆಬ್ರವರಿ 19ರಂದು ಶೂಟಿಂಗ್ ಸೆಟ್ ಮೇಲೆ ದೊಡ್ಡ ಕ್ರೇಜ್ ಬಿದ್ದು ದುರಂತ ಸಂಭವಿಸಿತ್ತು. ಈ ದುರಂತದಲ್ಲಿ ಮೂವರು ಮೃತಪಟ್ಟಿದ್ದರು.
ದುರಂತದ ಬಳಿಕ ನಿರ್ದೇಶಕ ಶಂಕರ್ 'ಇಂಡಿಯನ್'-2 ಕೈಬಿಟ್ಟು ತೆಲುಗು ಸಿನಿಮಾ ಆರಂಭಿಸಿದರು. ಮತ್ತೆ ಈ ಸಿನಿಮಾ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ ನಿರ್ಮಾಪಕರು ಪಟ್ಟು ಹಿಡಿದು ಸಿನಿಮಾ ಮುಗಿಸುವಂತೆ ಮಾಡಿದರು. ಅಂತೂ ಇಂತೂ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೀತಿದೆ. ಚುನಾವಣೆ ಬಳಿಕ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











