ಸೇನಾಪತಿ ವರ್ಮ ಕಲೆಯಿಂದ 'ಇಂಡಿಯನ್'ಗೆ ಸಂಕಷ್ಟ ಶುರು; ದೂರು ದಾಖಲು
ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇಂತಹ ಸಮಯದಲ್ಲಿ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರತಂಡದ ವಿರುದ್ಧ ರಾಜೇಂದ್ರನ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಾರ ಕಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
28 ವರ್ಷಗಳ ಹಿಂದಿನ 'ಇಂಡಿಯನ್' ಚಿತ್ರಕ್ಕೆ ಈಗ ಸೀಕ್ವೆಲ್ ಬರ್ತಿದೆ. ಮತ್ತೊಮ್ಮೆ ಸೇನಾಪತಿಯಾಗಿ ಕಮಲ್ ಹಾಸನ್ ಅಬ್ಬರಿಸಲಿದ್ದಾರೆ. ಘಟನಾಘಟಿ ಕಲಾವಿದರು ಸಾಥ್ ಕೊಟ್ಟಿದ್ದಾರೆ. ಜುಲೈ 12ಕ್ಕೆ ಸಿನಿಮಾ ತೆರೆಗೆ ಬರಬೇಕಿದೆ. ಈಗಾಗಲೇ ಸಿನಿಮಾ ಪ್ರಚಾರ ಶುರುವಾಗಿದೆ. ಈ ಬಾರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಇತ್ತೀಚೆಗೆ ಬಿಡುಗಡೆಯಾದ 'ಇಂಡಿಯನ್-2' ಟ್ರೈಲರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. 'ಇಂಡಿಯನ್-2' ಮಾತ್ರವಲ್ಲ ಸರಣಿಯ ಮತ್ತೊಂದು ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ. ಒಟ್ಟಿಗೆ ಎರಡೂ ಭಾಗವನ್ನು ಶಂಕರ್ ಚಿತ್ರೀಕರಿಸಿದ್ದಾರೆ. ಸಿದ್ಧಾರ್ಥ್, ಕಾಜಲ್ ಅಗರ್‌ವಾಲ್ ಹಾಗೂ ರಕುಲ್ ಪ್ರೀತ್ ಸಿಂಗ್ ಚಿತ್ರದ ತಾರಾಗಣದಲ್ಲಿದ್ದಾರೆ.
ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿಯಾಗಿ ಕಮಲ್ ಮತ್ತೆ ರಂಜಿಸಲು ಬರುತ್ತಿದ್ದಾರೆ. ಮತ್ತೊಮ್ಮೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿದ್ದಾರೆ. ಇನ್ನು 'ಇಂಡಿಯನ್' ಚಿತ್ರದಲ್ಲಿ ವಯಸ್ಸಾದ ಸೇನಾಪತಿ ತನ್ನ ವರ್ಮ ಕಲೈ ಹಾಗೂ ಮಾರ್ಷಲ್ ಆರ್ಟ್ಸ್ ಸಹಾಯದಿಂದ ದುಷ್ಟರಿಗೆ ಸಿಂಹಸ್ವಪ್ನನಾಗುತ್ತಾನೆ.
ಕೇರಳದ ಸಾಂಪ್ರದಾಯಿಕ ಕಲೆಗಳಲ್ಲಿ ವರ್ಮ ಕಲೈ ಒಂದು. ಕೇವಲ ಕೈ ಬೆರಳುಗಳ ಸಹಾಯದಿಂದ ಎದುರಾಳಿಗಳನ್ನು ಮಣ್ಣು ಮುಕ್ಕಿಸುವ ಕಲೆ ಅದು. 'ಇಂಡಿಯನ್' ಚಿತ್ರಕ್ಕಾಗಿ ರಾಜೇಂದ್ರನ್ ಎಂಬುವವರು ಈ ಕಲೆಯ ಕೆಲ ಸಂಗತಿಗಳನ್ನು ಕಮಲ್ ಹಾಸನ್‌ಗೆ ಕಲಿಸಿದ್ದರು. ಅದೇ ವಿದ್ಯೆಯನ್ನು ಇದೀಗ ಸೀಕ್ವೆಲ್‌ನಲ್ಲಿ ಸಹ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ನನ್ನ ಅನುಮತಿ ಪಡೆದಿಲ್ಲ ಎಂದು ರಾಜೇಂದ್ರನ್ ಆರೋಪಿಸಿದ್ದಾರೆ.

"1996ರಲ್ಲಿ 'ಇಂಡಿಯನ್' ಸಿನಿಮಾ ಸೆಟ್‌ನಲ್ಲಿ ನಾನು ಕಮಲ್ ಹಾಸನ್‌ಗೆ ವರ್ಮ ಕಲೆಗೆ ಸಂಬಂಧಿಸಿದ ಕೆಲ ಮುದ್ರೆಗಳನ್ನು ಕಲಿಸಿದ್ದೆ. ಕೆಲ ಆಕ್ಷನ್ ಸನ್ನಿವೇಶಗಳಿಗೆ ಬೇಕಾದ ವಿದ್ಯೆಯನ್ನು ನನ್ನಿಂಧ ಕಲಿತಿದ್ದರು. ವರ್ಮ ಕಲೆ ಕೇರಳದ ಶಾಸ್ತ್ರೀಯ ಪದ್ಧತಿ ಎಂದ ನಾನು ನಿರ್ದೇಶಕ ಶಂಕರ್, ಬರಹಗಾರ ಸುಜಾತಾ ಅವರಿಗೆ ತಿಳಿಸಿದ್ದೆ. ಆಗ ಚಿತ್ರತಂಡದ ಪಟ್ಟಿಯಲ್ಲಿ ನನ್ನ ಹೆಸರು ಇತ್ತು"
ಇದೀಗ 'ಇಂಡಿಯನ್' ಸೀಕ್ವೆಲ್ ಬರ್ತಿದೆ. ಟ್ರೈಲರ್ ನೋಡಿದರೆ ನಾನು ಕಲಿಸಿದ ವರ್ಮ ಕಲೆ ಬಳಸಿಕೊಂಡಿರುವುದು ಗೊತ್ತಾಗುತ್ತಿದೆ. ಆದರೆ ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ನನ್ನ ಹೆಸರಿಲ್ಲ. ಆಗ ನನ್ನಿಂದ ಕಲಿತ ವಿದ್ಯೆಯನ್ನೇ ಕಮಲ್ ಈಗ ಕೂಡ ಬಳಸಿರುವುದರಿಂದ ಯಾಕೆ ನನ್ನ ಹೆಸರು ಹಾಕಲಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ನಿಷೇಧಿಸಬೇಕು ಎಂದು ರಾಜೇಂದ್ರನ್ ಮನವಿ ಮಾಡಿದ್ದಾರೆ.


Click it and Unblock the Notifications











