ಆಸ್ಪತ್ರೆ ಬೆಡ್ ಮೇಲೆ ಪ್ರಜ್ವಲ್ ದೇವರಾಜ್ ಸಿನಿಮಾದ ನಟಿ ಸುನೈನಾ: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
ಬಹುಭಾಷಾ ನಟಿ ಸುನೈನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮದೇ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಬಹುತೇಕ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರೂ, 'ಗಂಗೆ ಬಾರೆ ತುಂಗೆ ಬಾರೆ' ಸಿನಿಮಾದ ಮೂಲಕ 2008ರಲ್ಲಿ ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು.
ಸುನೈನಾ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ 'ರೆಜಿನಾ' ಅನ್ನೋ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಬಿಡುಗಡೆಯಾಗಿತ್ತು. 2005ರಲ್ಲಿ 'ಕುಮಾರ್ Vs ಕುಮಾರಿ' ಅನ್ನೋ ತೆಲುಗು ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆ.

ಕನ್ನಡ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ, ತಮಿಳು ಚಿತ್ರರಂಗದಲ್ಲಿ ಸೆಟೆಲ್ ಆಗಿದ್ದಾರೆ. 2008ರಿಂದ ತಮಿಳು ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ನಟಿ ಆಸ್ಪತ್ರೆಗೆ ದಾಖಲಾಗಿರುವ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಆಕೆಯ ಅಭಿಮಾನಿಗಳನ್ನು ಗೊಂದಲದಲ್ಲಿ ಇರಿಸಿವೆ.
ಸುನೈನಾ ಆಸ್ಪತ್ರೆಗೆ ಯಾವ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದಾರೆ ಅನ್ನೋದನ್ನು ತಿಳಿಸಿಲ್ಲ. ಆದರೆ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. "ಸ್ವಲ್ಪ ಸಮಯ ಕೊಡಿ.. ಶೀಘ್ರದಲ್ಲಿಯೇ ಮರಳಿ ಬರುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳು ಅಭಿಮಾನಿಗಳನ್ನು ಆತಂಕದಲ್ಲಿರುವಂತೆ ಮಾಡಿದೆ.
2008ರಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದ 'ಗಂಗೆ ಬಾರೆ ತುಂಗೆ ಬಾರೆ' ಸಿನಿಮಾ ಮೂಲಕ ಸುನೈನಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ಗಂಗೆಯ ಪಾತ್ರದಲ್ಲಿ ಸುನೈನಾ ನಟಿಸಿದ್ದರು. ಆದರೆ, 'ಗಂಗೆ ಬಾರೆ ತುಂಗೆ ಬಾರೆ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಮತ್ತೆ ಕನ್ನಡದ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ.
ಈ ಮಧ್ಯೆ 2006ರಲ್ಲಿ 'ಬೆಸ್ಟ್ ಫ್ರೆಂಡ್ಸ್' ಸಿನಿಮಾ ಮೂಲಕ ಮಲಯಾಳಂಗೆ ಎಂಟ್ರಿ ಕೊಟ್ಟಿದ್ದರು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅತೀ ಕಡಿಮೆ ಸಮಯದಲ್ಲಿಯೇ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಲ್ಲಿಯೂ ನಟಿಸಿದ್ದರು. ತಮಿಳಿನಲ್ಲಿ ನಟಿಸಿದ್ದ 'ನೀರ್‌ಪಾರವೈ' ಸಿನಿಮಾ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಸಿನಿಮಾದ ನಟನೆಗಾಗಿ ಸುನೈನಾಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು.
ಸುನೈನಾ ಇತ್ತೀಚೆಗೆ ನಟಿಸಿದ 'ರೆಜಿನಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಇದರ ಹಿಂದೆನೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಆಕೆಯ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸುನೈನಾ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೇಗ ಗುಣಮುಖರಾಗಲಿ ಎಂದು ಹೇಳುತ್ತಿದ್ದಾರೆ.


Click it and Unblock the Notifications











