Vettaiyan Box Office Day 2: 2ನೇ ದಿನ 'ವೆಟ್ಟೈಯಾನ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ದಾಖಲೆ ಬರೆಯುತ್ತಾ ಸಿನಿಮಾ?
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಸಿನಿಮಾ 'ವೆಟ್ಟೈಯಾನ್'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಜನಿಕಾಂತ್, ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಅಂತಹ ಜನಪ್ರಿಯ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ದೊಡ್ಡ ಸ್ಟಾರ್ ಕಾಸ್ಟ್ ಇರುವ ಸಿನಿಮಾ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದು ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು.
'ವೆಟ್ಟೈಯಾನ್' ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ, 'ಜೈಲರ್' ದಾಖಲೆಯನ್ನು ಬ್ರೇಕ್ ಮಾಡುವುದರಲ್ಲಿ ಹಿಂದೆ ಬಿದ್ದಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಆಗಿದ್ದು, ಎರಡನೇ ದಿನವೂ ಸಿನಿಮಾ ಗಳಿಕೆ ಉತ್ತಮವಾಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಕೊಟ್ಟಿದ್ದಾರೆ.

ಮೊದಲ ದಿನ ಹಿಂದಿ ಬೆಲ್ಟ್‌ನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅಮಿತಾಭ್ ಬಚ್ಚನ್ ಅಂತಹ ಮೆಗಾಸ್ಟಾರ್ 'ವೆಟ್ಟೈಯಾನ್' ನಟಿಸಿದ್ದರೂ ಹಿಂದಿ ಪ್ರೇಕ್ಷಕರು ಯಾಕೋ ಈ ಸಿನಿಮಾವನ್ನು ನೋಡುವ ಮನಸ್ಸು ಮಾಡಲಿಲ್ಲ. ಹೀಗಾಗಿ ಮೊದಲ ದಿನ ಕೇವಲ 6 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಹಾಗಿದ್ದರೆ ಎರಡನೇ ದಿನದ ಕಲೆಕ್ಷನ್ ಹೇಗಿದೆ? ತಿಳಿಯಲು ಮುಂದೆ ಓದಿ.
'ವೆಟ್ಟೈಯಾನ್' 2ನೇ ದಿನ ಕಲೆಕ್ಷನ್ ಎಷ್ಟು?
ರಜನಿಕಾಂತ್ 'ವೆಟ್ಟೈಯಾನ್' ಸಿನಿಮಾ ರಿಲೀಸ್ ಆಗಿ ಮೂರನೇ ದಿನ. ದಸರಾ ಹಬ್ಬದ ಸಂಭ್ರಮದಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನ 31.7 ಕೋಟಿ ರೂಪಾಯಿ (nett)ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಈ ಮಲ್ಟಿಸ್ಟಾರರ್ ಸಿನಿಮಾ 23.8 ಕೋಟಿ ರೂಪಾಯಿ (nett)ಕಲೆಕ್ಷನ್ ಮಾಡಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ Sacnilk ವರದಿ ಮಾಡಿದೆ. ತಮಿಳು ನಾಡು, ಆಂಧ್ರ, ತೆಲಂಗಾಣ, ಕರ್ನಾಟಕದಿಂದ ಹೆಚ್ಚು ಕಲೆಕ್ಷನ್ ಆಗಿದೆ.

ಎರಡು ದಿನಗಳ ಕಲೆಕ್ಷನ್ ಎಷ್ಟು?
ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ದಾಖಲೆ ಕಲೆಕ್ಷನ್ ಮಾಡಿತ್ತು. ಅದನ್ನು 'ವೆಟ್ಟೈಯಾನ್' ಹಿಂದಿಕ್ಕುತ್ತಾರೆ ಎನ್ನಲಾಗಿತ್ತು. ಆದರೆ, ಆ ಸಿನಿಮಾದ ನಿರೀಕ್ಷೆಯನ್ನು ಮುಟ್ಟಿಲ್ಲ. ಎರಡು ದಿನಗಳು ಸೇರಿ ಒಟ್ಟು 55.5 ಕಲೆಕ್ಷನ್ ಆಗಿದೆ. ಇನ್ನು ವಿದೇಶದಲ್ಲಿ ಈ ಸಿನಿಮಾ ಗಳಿಕೆ ಎಷ್ಟಾಗಿದೆ ಅನ್ನೋ ಮಾಹಿತಿ ಇನ್ನೂ ಹೊರಬೀಳಬೇಕಿದೆ. ಸದ್ಯಕ್ಕೆ ಭಾರತದಾದ್ಯಂತ ಎರಡು ದಿನಗಳು ಒಳ್ಳೆಯ ಕಲೆಕ್ಷನ್ ಮಾಡಿದೆ.
ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್?
'ವೆಟ್ಟೈಯಾನ್' ಚೆನ್ನೈನಲ್ಲಿ 1044 ಸ್ಕ್ರೀನ್‌ಗಳಲ್ಲಿ ಕಲೆಕ್ಷನ್ ಆಗಿತ್ತು. ಹಾಗೇ ಕರ್ನಾಟಕದಲ್ಲಿ 455 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಈ ಎರಡೂ ಕಡೆ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಕೇವಲ ತಮಿಳುನಾಡಿನಿಂದಲೇ ಎರಡು ದಿನಗಳಲ್ಲಿ ಈ ಸಿನಿಮಾ 49 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅದೇ ಕರ್ನಾಟಕದಲ್ಲಿ ಮೊದಲ ಎರಡು ದಿನಗಳಲ್ಲಿ 2 ರಿಂದ 3 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗಿದೆ..
ವೀಕೆಂಡ್‌ನಲ್ಲಿ ದಾಖಲೆ ಕಲೆಕ್ಷನ್ ಆಗುತ್ತಾ?
'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ ಜೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಮೊದಲ ಎರಡು ದಿನ ಅದು ಆಗಲಿಲ್ಲ. ಈ ವೀಕೆಂಡ್‌ನಲ್ಲಿ 'ವೆಟ್ಟೈಯಾನ್' ಸಿನಿಮಾ ದಾಖಲೆ ಕಲೆಕ್ಷನ್ ಆದರೆ, ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು. ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಎರಡನೇ ವಾರ ಎಷ್ಟು ಕಲೆಕ್ಷನ್ ಆಗಬಹುದು ಅನ್ನೋ ಕುತೂಹಲ ಮೂಡಿದೆ.


Click it and Unblock the Notifications











