'ವೆಟ್ಟೈಯಾನ್' ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು? ವಿಜಯ್ ಸಿನಿಮಾಗೆ ಟಕ್ಕರ್ ಕೊಡ್ತಾರಾ ಇಬ್ಬರು ಸೂಪರ್‌ಸ್ಟಾರ್?
ಇಬ್ಬರು ಸೂಪರ್ ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ಇದ್ಮೇಲೆ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸೋದು ಗ್ಯಾರಂಟಿ. ಅದರಲ್ಲೂ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿರಬೇಕಾದರೆ ಕಲೆಕ್ಷನ್ ಮೇಲೆ ನಿರೀಕ್ಷೆ ಇದ್ದೇ ಇರುತ್ತೆ. ಸದ್ಯ ಅಡ್ವಾನ್ಸ್ ಬುಕಿಂಗ್ ಕೂಡ ದಾಖಲೆ ಲೆಕ್ಕದಲ್ಲಿ ಆಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
'ವೆಟ್ಟೈಯಾನ್' ಸಿನಿಮಾ ಇದೇ ಅಕ್ಟೋಬರ್ 10ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಬಿಡುಗಡೆ ಇನ್ನೂ ಕೆಲವು ಗಂಟೆಗಳು ಬಾಕಿ ಇರುವಾಗಲೇ ರಜನಿಕಾಂತ್ ಸಿನಿಮಾ ಅಬ್ಬರಿಸುವುದಕ್ಕೆ ಶುರು ಮಾಡಿದೆ. ಟ್ರೈಲರ್ ನೋಡಿ ತಣ್ಣಗಾಗಿದ್ದ ಅಭಿಮಾನಿಗಳಿಗೆ ಅಡ್ವಾನ್ಸ್ ಬುಕಿಂಗ್ ಸುದ್ದಿ ಕೇಳಿ ಕಿವಿಗಳು ನೆಟ್ಟಗಾಗುತ್ತಿವೆ. ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಬಂದ್ಮೇಲೆ ಬಾಕ್ಸಾಫೀಸ್ ಚಿಂದಿನೇ ಅಂತ ಫ್ಯಾನ್ಸ್ ಚರ್ಚೆ ಆರಂಭಿಸಿದ್ದಾರೆ.

ಅಂದ್ಹಾಗೆ, 'ವೆಟ್ಟೈಯಾನ್' ಸಿನಿಮಾ ಬಾಲಿವುಡ್ ಮೆಗಾಸ್ಟಾರ್‌ಗೆ ಮೊದಲ ತಮಿಳು ಸಿನಿಮಾ. ಸೂಪರ್‌ಸ್ಟಾರ್ ಸಿನಿಮಾ ಮೂಲಕವೇ ಬಿಗ್ ಬಿ ಕೂಡ ಕಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಹಾಗಿದ್ದರೆ, ಇಬ್ಬರು ಸೂಪರ್‌ಸ್ಟಾರ್‌ಗಳು ಸೇರಿಕೊಂಡು ದಳಪತಿ ವಿಜಯ್ ನಟಿಸಿದ ಗೋಟ್ (GOAT)ಸಿನಿಮಾದ ದಾಖಲೆಯನ್ನು ಮುರಿಯಬಹುದೇ? ಮೊದಲ ದಿನ ರಜನಿ ಅಮಿತಾಭ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು? ತಿಳಿಯಲು ಮುಂದೆ ಓದಿ.
'ವೆಟ್ಟೈಯಾನ್' ಅಡ್ವಾನ್ಸ್ ಬುಕಿಂಗ್ ಹೇಗಿದೆ?
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ವೆಟ್ಟೈಯಾನ್' ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚೆನ್ನೈ ಹಾಗೂ ಬೆಂಗಳೂರು ನಗರಗಳಲ್ಲಿ ಟಿಕೆಟ್ ಬುಕಿಂಗ್ ಜೋರಾಗಿದೆ. ಹಾಗೇ ದೇಶಾದ್ಯಂತ ಟಿಕೆಟ್ ಖರೀದಿ ಮಾಡುತ್ತಿರುವವರ ಸಂಖ್ಯೆ ಕೂಡ ಏರಿಕೆಯಾಗಿದೆ. ಸಿನಿಮಾ ಬಿಡುಗಡೆ ಇನ್ನೂ ಒಂದೂವರೆ ದಿನ ಬಾಕಿ ಇರುವ ವೇಳೆಗೆ 5 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ ಎನ್ನಲಾಗಿದೆ. ಇದರಲ್ಲಿ ಕೇವಲ ಚೆನ್ನೈ ಹಾಗೂ ಬೆಂಗಳೂರಿನಲ್ಲಿ 1.60 ಲಕ್ಷ ಟಿಕೆಟ್‌ಗಳು ಸೇಲ್ ಆಗುವೆ.
ಎಷ್ಟು ಶೋ ಹೌಸ್‌ಫುಲ್?
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಕಾಂಬಿನೇಷನ್ ಸಿನಿಮಾ ಸುಮಾರು 5240 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಇದರಲ್ಲಿ ಸುಮಾರು 950 ಶೋಗಳು ಈಗಾಗಲೇ ಹೌಸ್‌ಫುಲ್ ಆಗಿವೆ ಎಂದು ವರದಿಯಾಗಿದೆ. ರಜನಿ, ಅಮಿತಾಭ್ ಜೊತೆ ಫಹಾದ್ ಫಾಸಿಲ್ ಹಾಗೂ ರಾಣಾ ದಗ್ಗುಬಾಟಿ ಕೂಡ ನಟಿಸಿದ್ದಾರೆ. ಹೀಗಾಗಿ ಮೊದಲ ದಿನ ಸಿನಿಮಾ ಮಸ್ತ್ ಕಲೆಕ್ಷನ್ ಆಗೋದು ಗ್ಯಾರಂಟಿ.

ಮೊದಲ ದಿನ ಅಂದಾಜು ಲೆಕ್ಕವೆಷ್ಟು?
'ವೆಟ್ಟೈಯಾನ್' ಅಡ್ವಾನ್ಸ್ ಬುಕಿಂಗ್‌ನಲ್ಲಿ ದಿಢೀರನೇ ಏರಿಕೆಯಾಗಿದೆ. ಶೇ.110ರಷ್ಟು ಟಿಕೆಟ್ ಬುಕಿಂಗ್‌ನಲ್ಲಿ ಏರಿಕೆಯಾಗಿದೆ ಎಂದು ವರದಿಯಾಗಿವೆ. ಹೀಗಾಗಿ ಮೊದಲ ದಿನ ಅಂದಾಜು 70 ಕೋಟಿಯಿಂದ 80 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ. ಇನ್ನೂ ಒಂದೂವರೆ ದಿನಗಳಲ್ಲಿ ಟಿಕೆಟ್ ಖರೀದಿಯಲ್ಲಿ ಗಣನೀಯ ಏರಿಕೆಯಾದರೆ, ಮತ್ತಷ್ಟು ಏರಿಕೆ ಆಗುತ್ತೆ.
ವಿಜಯ್ ಸಿನಿಮಾ ಹಿಂದಿಕ್ಕುತ್ತಾ?
ದಳಪತಿ ವಿಜಯ್ ನಟಿಸಿದ 'ಗೋಟ್' (GOAT) ಸಿನಿಮಾ ಮೊದಲ ದಿನ ಸುಮಾರು 120 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. 2024ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ದಾಖಲೆಯನ್ನು ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರು ಸೂಪರ್‌ಸ್ಟಾರ್‌ಗಳು ಸೇರಿ ಮುರಿಯುತ್ತಾರಾ? ಅನ್ನೋ ಪ್ರಶ್ನೆ ಎದ್ದಿದೆ. ಆದರೆ, ಮೂಲಗಳ ಪ್ರಕಾರ 100 ಕೋಟಿ ರೂಪಾಯಿ ದಾಟುವುದು ಅನುಮಾನ ಎನ್ನಲಾಗಿದೆ.


Click it and Unblock the Notifications











