ರಜನಿಕಾಂತ್- ಕಮಲ್ ಒಟ್ಟಿಗೆ ನಟಿಸೋ ಸಿನಿಮಾ ಘೋಷಣೆ; ನಿರ್ದೇಶಕ ಯಾರು? ಇಲ್ಲಿದೆ ಪ್ರೋಮೊ
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ದಶಕಗಳ ಬಳಿಕ ಒಟ್ಟಿಗೆ ನಟಿಸುವುದು ಖಚಿತವಾಗಿದೆ. ಕೆಲ ದಿನಗಳ ಹಿಂದೆಯೇ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಯಾರು ಸಿನಿಮಾ ನಿರ್ದೇಶನ ಮಾಡ್ತಾರೆ? ಕಥೆ ಏನು? ಎನ್ನುವ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಅದಕ್ಕೆಲ್ಲಾ ತೆರೆ ಬಿದ್ದಿದೆ. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ದಿಗ್ಗಜ ನಟರಿಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ.
ರೆಡ್ ಜೈಂಟ್ ಮೂವೀಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಈ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣ ಮಾಡಲಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಪಕ್ಕಾ ಆಗಿದೆ. 4 ಜನ ಸೇರಿ ಸ್ಪೆಷಲ್ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ವಿಭಿನ್ನವಾದ ಪ್ರೋಮೋ ರಿಲೀಸ್ ಆಗಿ ಸದ್ದು ಮಾಡ್ತಿದೆ. 47 ವರ್ಷಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಇದಾಗಿದೆ. ಸೆಟ್ಟೇರುವ ಮುನ್ನ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಈಗಾಗಲೇ 'ಜೈಲರ್' ಹಾಗೂ 'ಜೈಲರ್'-2 ಚಿತ್ರಗಳಲ್ಲಿ ರಜನಿಕಾಂತ್ ಅವರನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕಮಲ್ ಹಾಸನ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕ್ರೇಜಿ ಕಾಂಬಿನೇಷನ್ ಇನ್ನಿಲ್ಲದ ಕುತೂಹಲ ಮೂಡಿಸಿದೆ. ಡಾರ್ಕ್ ಕಾಮಿಡಿ ಹಾಗೂ ಆಕ್ಷನ್ ಸೇರಿಸಿ ಸಿನಿಮಾ ಮಾಡುವುದರಲ್ಲಿ ನೆಲ್ಸನ್ ನಿಸ್ಸೀಮರು. ಸ್ಟಾರ್ ನಟರಿಬ್ಬರನ್ನು ಒಟ್ಟಿಗೆ ಸೇರಿಸಿ ನಿರ್ದೇಶಕರು ಮತ್ತೆ ಅಂಥದ್ದೇ ಕಥೆ ಹೇಳಲು ಮುಂದಾಗಿರುವಂತೆ ಕಾಣ್ತಿದೆ.
ಸದ್ಯ ಬಿಡುಗಡೆ ಆಗಿರುವ ಪ್ರೋಮೊ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಇಬ್ಬರಲ್ಲಿ ಯಾರು ಗ್ರೇಟ್, ಯಾರು ಹೀರೊ, ಯಾರಿಗೆ ಮೊದಲ ಆದ್ಯತೆ ಎನ್ನುವ ಭಿನ್ನಾಭಿಪ್ರಾಯ ಇರುವಂತೆ ತಮಾಷೆಯಾಗಿ ಪ್ರೋಮೊ ಡಿಸೈನ್ ಮಾಡಿದ್ದಾರೆ. ಹೋಟೆಲ್‌ನಲ್ಲಿ ರಜನಿಕಾಂತ್ ಹಾಗೂ ಕಮಲ್ ಅವರ ರೂಮ್‌ಗಳಿಗೆ ಹೋಗಿ ಇಬ್ಬರನ್ನು ನೆಲ್ಸನ್ ಒಪ್ಪಿಸುವ ಕೆಲಸ ಮಾಡುತ್ತಾರೆ. ಸೂಟು, ಬೂಟು, ವಾಚ್, ಬೆಲ್ಟ್, ಸನ್ ಗ್ಲಾಸ್ ಎಲ್ಲವೂ ಎರಡೆರಡು ಇದೆ. ಯಾರಿಗೆ ಯಾವುದು, ಯಾರು ಇಷ್ಟಪಟ್ಟಿದ್ದು ಯಾರಿಗೆ ಬೇಡ ಹೀಗೆ ಒಂದಷ್ಟು ಕನ್‌ಫ್ಯೂಷನ್ ಬಳಿಕ ಇಬ್ಬರೂ ರೆಡಿಯಾಗಿ ಒಟ್ಟಿಗೆ ಸ್ಟೈಲಿಶ್ ಲುಕ್‌ನಲ್ಲಿ ಜೊತೆಯಾಗಿ ಹೊರ ಬರ್ತಾರೆ.
ಕಾರ್ ಗ್ಯಾರೇಜ್‌ಗೆ ಸ್ಟೈಲಿಶ್ ಆಗಿ ಇಬ್ಬರೂ ನಡೆದು ಬಂದು ಒಂದೇ ಕಾರ್ ಏರಿ ಕೂರುತ್ತಾರೆ. ಡ್ರೈವರ್ ಸೀಟ್‌ನಲ್ಲಿ ಕಮಲ್, ಪಕ್ಕದಲ್ಲಿ ರಜನಿಕಾಂತ್ ಆಸೀನರಾಗುತ್ತಾರೆ. ಹಿಂದಿನ ಸೀಟ್‌ನಲ್ಲಿ ನೆಲ್ಸನ್, ಅನಿರುದ್ಧ್ ಕೂರುತ್ತಾರೆ. ಒಳ್ಳೆ ಥೀಮ್ ಮ್ಯೂಸಿಕ್ ಇದೆ ಕೇಳೋಣ ಎಂದು ಅನಿರುದ್ಧ್ ಕೇಳ್ತಾರೆ. ಅದೆಲ್ಲಾ ಇರಲಿ, ಮೊದಲು ಯಾರು ಸಿನಿಮಾ ಹೀರೊ ಹೇಳಿ ಎಂದು ಕಮಲ್ ಪ್ರಶ್ನೆ ಕೇಳುತ್ತಾರೆ. ಹೇಳ್ರಪ್ಪ ಯಾರು ಹೀರೊ ಎಂದು ರಜನಿಕಾಂತ್ ಅದೇ ಪ್ರಶ್ನೆ ಪುನರುಚ್ಚರಿಸಿತ್ತಾರೆ. ಆ ಸಸ್ಪೆನ್ಸ್ ಜೊತೆಗೆ ಪ್ರೋಮೊ ಕಂಪ್ಲೀಟ್ ಆಗುತ್ತದೆ.
ಇಷ್ಟು ವರ್ಷಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಒಟ್ಟಿಗೆ ನಟಿಸುತ್ತಾರೆ ಎನ್ನುವುದೇ ಸಿನಿರಸಿಕರ ಸಂತಸಕ್ಕೆ ಕಾರಣವಾಗಿದೆ. ಒಂದೇ ಸಮಯದಲ್ಲಿ ಇಬ್ಬರೂ ಚಿತ್ರರಂಗ ಪ್ರವೇಶಿಸಿದ್ದರು. ಆರಂಭದಲ್ಲಿ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ ದಿಢೀರನೆ ಇಬ್ಬರೂ ತೆರೆಹಂಚಿಕೊಳ್ಳುವುದು ಬೇಡ ಎಂದು ನಿರ್ಧರಿಸಿದ್ದರು. ಬಳಿಕ ಇಬ್ಬರ ಸೈದ್ಧಾಂತಿಕ ನಿಲುವುಗಳು ಬೇರೆ ಎನ್ನುವ ಕಾರಣಕ್ಕೆ ದೂರಾಗಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಿಜವಾದ ಕಾರಣ ಏನು ಎನ್ನುವುದನ್ನು ಕೆಲ ದಿನಗಳ ಹಿಂದೆ ಕಮಲ್ ವಿವರಿಸಿದ್ದರು.
'ಅಲ್ಲಾವುದ್ದೀನುಮ್ ಅಲ್ಭೂತ ವಿಲಕ್ಕುಮ್' ಚಿತ್ರದಲ್ಲಿ ಕಮಲ್ ಹಾಗೂ ರಜನಿಕಾಂತ್ ಕೊನೆಯದಾಗಿ ಒಟ್ಟಿಗೆ ನಟಿಸಿದ್ದರು. 'ಅಪೂರ್ವ ರಾಗಂಗಲ್' (1975), 'ಮೂಂಡ್ರು ಮುಡಿಚು' (1976), '16 ವಯತಿನಿಲೆ' (1977), 'ಆಡು ಪುಲಿ ಅಟ್ಟಂ' (1977), 'ಇಳಮೈ ಊಂಜಲ್ ಆಡುಕಿರತ್ತು' (1978), ಮತ್ತು 'ಅವಳ್ ಅಪ್ಪಡಿತಾನ್' (1978) ಇಬ್ಬರೂ ಒಟ್ಟಿಗೆ ನಟಿಸಿದ್ದ ಸಿನಿಮಾಗಳು.


Click it and Unblock the Notifications











