ಕಮಲ್ ಹಾಸನ್ ಮಾಡಿದ ಎಡವಟ್ಟಿನಿಂದ ಕರ್ನಾಟಕದಲ್ಲಿ ರಜನಿಕಾಂತ್ ದಂಡ ತೆರಬೇಕಾ?
'ಕೂಲಿ' ಬಳಿಕ ರಜಿನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಾಧ್ಯವಾದಷ್ಟು ಬೇಗ ಮತ್ತಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ. ಸ್ಟಾರ್ ನಿರ್ದೇಶಕರು ಕೂಡ ತಲೈವಾ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಮತ್ತೊಂದು ಕಡೆ ಕಮಲ್ ಹಾಸನ್ ಜೊತೆ ಸಿನಿಮಾ ಮಾಡಲು ರಜನಿಕಾಂತ್ ಒಪ್ಪಿದ್ದಾರೆ.
ಒಂದ್ಕಾಲದಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟೊಟ್ಟಿಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಬಳಿಕ ಇದ್ದಕ್ಕಿದಂತೆ ತೆರೆ ಹಂಚಿಕೊಳ್ಳುವುದು ನಿಲ್ಲಿಸಿದ್ದರು. ಇದೀಗ ದಶಕಗಳ ನಂತರ ಜೊತೆಯಾಗಿ ನಟಿಸಲು ಒಲವು ತೋರುತ್ತಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈಗಾಗಲೇ ಒಂದು ಸಿನಿಮಾ ಕೂಡ ಘೋಷಣೆಯಾಗಿದೆ.

ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿರುವುದು ಗೊತ್ತೇಯಿದೆ. ಕಮಲ್ ನಟಿಸಿದ 'ಥಗ್ ಲೈಫ್' ಸಿನಿಮಾ ಕೊನೆಗೂ ಕರ್ನಾಟಕದಲ್ಲಿ ಬಿಡುಗಡೆ ಆಗಲೇ ಇಲ್ಲ.
ಸುಪ್ರೀಂ ಕೋರ್ಟ್‌ನಲ್ಲಿ ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕರೂ ಕೂಡ ತೆರೆಗೆ ಬರಲಿಲ್ಲ. ಕಮಲ್ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಇತ್ತೀಚೆಗೆ 'ನಾಯಗನ್' ಸಿನಿಮಾ ಬಿಡುಗಡೆಗೂ ಬೆಂಗಳೂರಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೆಲ್ಲದರ ನಡುವೆ ರಜನಿಕಾಂತ್ ಹಾಗೂ ಕಮಲ್ ಮುಂದಿನ ಸಿನಿಮಾಗೂ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ರಜನಿಕಾಂತ್ ಸಿನಿಮಾಗಳು ಕರ್ನಾಟಕದಲ್ಲಿ ಸಖತ್ ಸದ್ದು ಮಾಡುತ್ತವೆ. ಮೊದಲ ದಿನವೇ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತದೆ. ನೂರಾರು ಸ್ಕ್ರೀನ್‌ಗಳಲ್ಲಿ ಭರ್ಜರಿ ಓಪನಿಂಗ್ ಪಡೆಯುತ್ತದೆ. ಇತ್ತೀಚೆಗೆ ಬಂದ 'ಜೈಲರ್' ಹಾಗೂ 'ಕೂಲಿ' ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ತಲೈವಾಗೆ ಇರುವ ಕರ್ನಾಟಕ ಮಾರ್ಕೆಟ್ ಅನ್ನು ನಿರ್ಮಾಪಕರು ಗಂಭೀರವಾಗಿ ಪರಿಗಣಿಸುತ್ತಾರೆ. ಇಲ್ಲಿ ಟಿಕೆಟ್ ದರ ಹೆಚ್ಚಾಗಿರುವುದು ಕೂಡ ಪ್ಲಸ್ ಆಗುತ್ತದೆ. ಆದರೆ ಕಮಲ್- ರಜನಿ ಕಾಂಬಿನೇಷನ್ ಚಿತ್ರಕ್ಕೆ ವಿರೋಧ ವ್ಯಕ್ತವಾಗುವ ನಿರೀಕ್ಷೆ ದಟ್ಟವಾಗಿದೆ.
ಕಮಲ್ ಹಾಸನ್ ಒಡೆತನದ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಹೊಸ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸುಂದರ್ ಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ರಜನಿಕಾಂತ್ ನಟನೆಯ 173ನೇ ಸಿನಿಮಾ ಎನ್ನುವುದು ವಿಶೇಷ. ಇತ್ತೀಚೆಗೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿದೆ. 2027ರ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಕಮಲ್ ನಿರ್ಮಾಣದ ಸಿನಿಮಾ ಆಗಿರುವುದರಲ್ಲಿ ಕರ್ನಾಟಕದಲ್ಲಿ ಬಿಡುಗಡೆಗೆ ಅಡ್ಡಿ ಉಂಟಾಗುವ ಸಾಧ್ಯತೆಯಿದೆ.
ಈ ಹಿಂದೆ ಕಾವೇರಿ ಗಲಾಟೆ ಸಮಯದಲ್ಲಿ ರಜನಿಕಾಂತ್ ನೀಡಿದ್ದ ಹೇಳಿಕೆ ಇದೇ ರೀತಿ ವಿವಾದ ಸೃಷ್ಟಿಸಿತ್ತು. 'ಕುಚೇಲನ್' ಸಿನಿಮಾ ಬಿಡುಗಡೆಗೆ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಅಡ್ಡಿಪಡಿಸಿದ್ದವು. ತಪ್ಪಿನ ಅರಿವಾಗಿ ರಜನಿಕಾಂತ್ ಕ್ಷಮೆ ಕೇಳುವ ಪ್ರಯತ್ನ ಮಾಡಿದ್ದರು. ನೇರವಾಗಿ ಕ್ಷಮೆ ಕೇಳದೇ ಇದ್ದರೂ ವಿಷಾದದ ಮಾತಾಡಿ ಸಂಕಷ್ಟದಿಂದ ಪಾರಾಗಿದ್ದರು. 'ಕುಚೇಲನ್' ಬಿಡುಗಡೆ ಆಗಿತ್ತು.
ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಚಿತ್ರದ ಈವೆಂಟ್‌ನಲ್ಲಿ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಕನ್ನಡಿಗರನ್ನು ಕೆರಳಿಸಿತ್ತು. ತಮಿಳಿನಿಂದ ಹುಟ್ಟಿದ ಭಾಷೆ ಕನ್ನಡ ಎಂದು ಅವರು ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕರ್ನಾಟಕದಲ್ಲಿ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಹಿನ್ನಡೆ ಆಗಿತ್ತು. ಆದರೆ ತಮ್ಮ ಹೇಳಿಕೆಗೆ ಕಮಲ್ ಕ್ಷಮೆ ಕೇಳಲೇ ಇಲ್ಲ. ನಾನು ಪ್ರೀತಿಯಿಂದ ಹೇಳಿದ ಮಾತಿಗೆ ಕ್ಷಮೆ ಕೇಳುವ ಮಾತೇ ಇಲ್ಲ ಎಂದುಬಿಟ್ಟರು. ಹಾಗಾಗಿ ವಿವಾದ ಇನ್ನು ತಣ್ಣಗಾಗಿಲ್ಲ.
ಸದ್ಯ ಕಮಲ್ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಮುಂದೆ ಇಬ್ಬರೂ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಆ ಸಿನಿಮಾ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿಲ್ಲ.


Click it and Unblock the Notifications











