21 ವರ್ಷಗಳ ಬಳಿಕ ಒಟ್ಟಿಗೆ ಶೂಟಿಂಗ್ ಸೆಟ್‌ನಲ್ಲಿ ಕಂಡ ರಜನಿಕಾಂತ್-ಕಮಲ್ ಹಾಸನ್
ಸೂಪರ್ ಸ್ಟಾರ್ ರಜನಿಕಾಂತ್, ಉಳಗನಾಯಗನ್ ಕಮಲ್ ಹಾಸನ್. ಭಾರತೀಯ ಚಿತ್ರರಂಗದ ದಿಗ್ಗಜರ ಕಲಾವಿದರು. ನೂರಾರು ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಸಿನಿರಸಿಕರ ಮನಗೆದ್ದ ತಾರೆಯರು. ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗ ಬಂದ ರಜನಿ- ಕಮಲ್ ಮುಂದೆ ಸೂಪರ್ ಸ್ಟಾರ್‌ಗಳಾಗಿ ಬೆಳೆದು ನಿಂತರು.
'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ರಜನಿಕಾಂತ್- ಕಮಲ್ ಮುಂದೆ ತಮ್ಮ ತಮ್ಮ ಹಾದಿಯಲ್ಲಿ ಬೆಳೆದು ಬಂದರು. ಕಮಲ್ ತಮ್ಮ ಅದ್ಭುತ ನಟನೆಯಿಂದ ಮೋಡಿ ಮಾಡಿದರೆ, ರಜನಿ ತಮ್ಮ ಸ್ಟೈಲ್ ಹಾಗೂ ಮ್ಯಾನರಿಸಂನಿಂದ ಹೆಚ್ಚು ಚಿತ್ರರಸಿಕರಿಗೆ ಹತ್ತಿರವಾದರು. ಕಮಲ್- ರಜನಿ ನಡುವೆ ಸ್ನೇಹ, ವೃತ್ತಿಪರ ಪೈಪೋಟಿ ಎರಡೂ ಇದೆ. 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಕಮಲ್ ಹೀರೊ ಆಗಿದ್ದರೆ ರಜನಿ ವಿಲನ್ ಆಗಿ ನಟಿಸಿದ್ದರು. ಮುಂದೆ ಹೀರೊ ಆಗಿ ತಲೈವಾನ ಕಮಲ್‌ನ ಮೀರಿಸಿಬಿಟ್ಟರು.

ಬಹಳ ವರ್ಷಗಳ ನಂತರ ರಜನಿಕಾಂತ್ ಕಮಲ್ ಹಾಸನ್ ಸಿನಿಮಾ ಸೆಟ್‌ನಲ್ಲಿ ಭೇಟಿ ಆಗಿದ್ದಾರೆ. ಬರೋಬ್ಬರಿ 21 ವರ್ಷಗಳ ಬಳಿಕ ಸೂಪರ್ ಸ್ಟಾರ್‌ಗಳಿಬ್ಬರು ಒಟ್ಟಿಗೆ ಕೆಲವೊತ್ತು ಸಿನಿಮಾ ಸೆಟ್‌ನಲ್ಲಿ ಕಾಲ ಕಳೆದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋ ವೈರಲ್ ಆಗುತ್ತಿದೆ. ಸದ್ಯ ರಜನಿಕಾಂತ್ ತಮ್ಮ 170ನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಕಮಲ್ ನಟನೆಯ 'ಇಂಡಿಯನ್ -2' ಚಿತ್ರದ ಶೂಟಿಂಗ್ ನಡೀತಿದೆ. ಒಂದೇ ಸ್ಟುಡಿಯೋದಲ್ಲಿ ಎರಡೂ ಸಿನಿಮಾ ಚಿತ್ರೀಕರಣ ಇದ್ದ ಕಾರಣ ಬಿಡುವಿನ ವೇಳೆಯಲ್ಲಿ ರಜನಿ- ಕಮಲ್ ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.
'ತಲೈವಾ 170' ಹಾಗೂ 'ಇಂಡಿಯನ್ -2' ಎರಡೂ ಚಿತ್ರಗಳನ್ನು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸೂಪರ್ ಸ್ಟಾರ್‌ಗಳಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೊ, ವಿಡಿಯೋ ಹಂಚಿಕೊಂಡಿದೆ. ಚೆನ್ನೈ ಪ್ರಸಾದ್ ಸ್ಟುಡಿಯೋದಲ್ಲಿ ಎರಡೂ ಚಿತ್ರಗಳ ಚಿತ್ರೀಕರಣ ನಡೀತಿದೆ. ಅಂದಹಾಗೆ 2002ರಲ್ಲಿ ರಜನಿಕಾಂತ್ 'ಬಾಬಾ' ಚಿತ್ರದಲ್ಲಿ ನಟಿಸುತ್ತಿದ್ದರು. ಅದೇ ಸಮಯದಲ್ಲಿ ಕಮಲ್ 'ಪಂಚತಂತಿರಂ' ಚಿತ್ರೀಕರಣದಲ್ಲಿದ್ದರು. ಇದೇ ಪ್ರಸಾದ್ ಸ್ಟುಡಿಯೋದಲ್ಲಿ ಒಟ್ಟಿಗೆ ಅಂದು ಸಿನಿಮಾ ಚಿತ್ರೀಕರಣ ನಡೆದಿತ್ತು.
ಜ್ಞಾನವೇಲ್ ನಿರ್ದೇಶನದ 'ತಲೈವಾ 170' ಚಿತ್ರದಲ್ಲಿ ರಜನಿಕಾಂತ್ ಜೊತೆ ಅಮಿತಾಬ್ ಬಚ್ಚನ್, ರಾಣ ದಗ್ಗುಬಾಟಿ ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. 'ಜೈಲರ್' ಸಕ್ಸಸ್ ಸಂಭ್ರಮದಲ್ಲಿ ತಲೈವಾ ಮುಂದಿನ ಸಿನಿಮಾಗಳಲ್ಲಿ ಬಹಳ ಜೋಶ್‌ನಿಂದ ನಟಿಸುತ್ತಿದ್ದಾರೆ. ಇನ್ನು 'ವಿಕ್ರಂ' ಸಿನಿಮಾ ಸಕ್ಸಸ್ ಅಲೆಯಲ್ಲಿ ಕಮಲ್ ಮುಂದಿನ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ನಿಂತೇ ಹೋಗಿದ್ದ 'ಇಂಡಿಯನ್'-2 ಮತ್ತೆ ಜೀವ ಪಡೆದುಕೊಂಡಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ.
90ರ ದಶಕದ ಸೂಪರ್ ಹಿಟ್ 'ಇಂಡಿಯನ್' ಸಿನಿಮಾ ಸೀಕ್ವೆಲ್ ಈಗ ನಿರ್ಮಾಣವಾಗುತ್ತಿದೆ. ಕಾಜಲ್ ಅಗರ್‌ವಾಲ್, ಸಿದ್ದಾರ್ಥ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಮತ್ತೊಮ್ಮೆ ಕಮಲ್ ಸೇನಾಪತಿಯಾಗಿ ಭ್ರಷ್ಟಾಚಾರದ ವಿರುದ್ಧ ಸಮರಕ್ಕೆ ಇಳಿಯುತ್ತಿದ್ದಾರೆ. ಮಣಿರತ್ನಂ ಜೊತೆಗೆ ಕಮಲ್ ಹಾಸನ್ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ. 'ಥಗ್ ಲೈಫ್' ಟೈಟಲ್‌ನಲ್ಲಿ ಇತ್ತೀಚೆಗೆ ಟೀಸರ್ ಸಹ ರಿಲೀಸ್ ಆಗಿತ್ತು.

ರಜನಿಕಾಂತ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಂಕ್ರಾಂತಿಗೆ ತಲೈವಾ ವಿಶೇಷ ಪಾತ್ರದಲ್ಲಿ ನಟಿಸಿರುವ 'ಲಾಲ್ ಸಲಾಂ' ಸಿನಿಮಾ ತೆರೆಗೆ ಬರ್ತಿದೆ. ಐಶ್ವರ್ಯ ರಜನಿಕಾಂತ್ ನಿರ್ದೇಶನದ ಈ ಚಿತ್ರವನ್ನು ಸಹ ಲೈಕಾ ಸಂಸ್ಥೆ ನಿರ್ಮಿಸಿದೆ. ಇನ್ನು ಜ್ಞಾನವೇಲ್ ನಿರ್ದೇಶನದ ಸಿನಿಮಾ ಬಳಿಕ ಲೋಕೇಶ್ ಕನಕರಾಜ್ ಸಾರಥ್ಯದ ಚಿತ್ರಕ್ಕೆ ಸೂಪರ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications










