ಮಗಳೇ ನಿರ್ದೇಶಿಸಿದ ಸಿನಿಮಾಗೆ ತಲೈವಾ ಪಡೆದ ಸಂಭಾವನೆ ಏಷ್ಟು? ಪ್ರತಿ ನಿಮಿಷಕ್ಕೆ ರಜನಿ ಜೇಬು ಸೇರಿದ್ದೆಷ್ಟು?
'ಜೈಲರ್' ಯಶಸ್ಸಿನ ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ತನ್ನ ಪವರ್ ಏನು? ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. 73ನೇ ವಯಸ್ಸಿನಲ್ಲೂ ಸೂಪರ್‌ಸ್ಟಾರ್ ಪಟ್ಟವನ್ನು ಹಾಗೇ ಉಳಿಸಿಕೊಂಡಿರೋ ರಜನಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳು ಹೆಚ್ಚಾಗುತ್ತಲೇ ಇದ್ದಾರೆ. ಇದೀಗ ರಜನಿ ಪುತ್ರಿ ಐಶ್ವರ್ಯಾ ನಿರ್ದೇಶಿಸಿದ 'ಲಾಲ್ ಸಲಾಂ' ಸಿನಿಮಾದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಲೈಕಾ ಪ್ರೊಡಕ್ಷನ್ ನಿರ್ಮಿಸಿರುವ 'ಲಾಲ್ ಸಲಾಂ' ಸಿನಿಮಾ ಇದೇ ಫೆಬ್ರವರಿ 9ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ವಿಚ್ಛೇದನದ ಬಳಿಕ ಐಶ್ವರ್ಯಾ ರಜನಿಕಾಂತ್ ಮತ್ತೆ ನಿರ್ದೇಶನಕ್ಕೆ ಮರಳಿದ್ದು, ರಜನಿಕಾಂತ್ ಅಭಿಮಾನಿಗಳು 'ಲಾಲ್ ಸಲಾಂ' ಸಿನಿಮಾ ಬಗ್ಗೆ ದುಪ್ಪಟ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಜೈಲರ್' ಮಗಾ ಹಿಟ್ ಕೊಟ್ಮೇಲೆ ಅತಿಥಿ ಪಾತ್ರದಲ್ಲಿ ನಟಿಸಬಾರದಿತ್ತು ಅನ್ನೋ ಅಭಿಪ್ರಾಯಗಳು ಆರಂಭದಲ್ಲಿ ಬಂದಿದ್ದವು.

ಈ ಸಿನಿಮಾದಲ್ಲಿ ರಜನಿಕಾಂತ್ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊಯ್ದೀನ್ ಭಾಯ್ ಪಾತ್ರದಲ್ಲಿ ಸೂಪರ್‌ಸ್ಟಾರ್ ಕಂಡು ಅವರ ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಸೂಪರ್‌ಸ್ಟಾರ್ ಸಂಭಾವನೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಹಾಗಿದ್ರೆ, ಮಗಳೇ ನಿರ್ದೇಶಿಸಿದ ಸಿನಿಮಾ ರಜನಿಕಾಂತ್ ಪಡೆದ ಸಂಭಾವನೆ ಏಷ್ಟು?
'ಜೈಲರ್' ಎಫೆಕ್ಟ್?
ಸೂಪರ್‌ಸ್ಟಾರ್ ಜಮಾನ ಮುಗೀತು ಅಂದುಕೊಂಡಾಗಲೇ 'ಜೈಲರ್' ಅಂತಹ ಮೆಗಾ ಹಿಟ್ ಕೊಟ್ಟು ಅಚ್ಚರಿ ಮೂಡಿಸಿದ್ದರು. 73 ವರ್ಷ ನಟ ನೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆಂದರೆ ಅದು ಸಾಮಾನ್ಯ ಸಾಧನೆ ಏನಲ್ಲ. ರಜನಿಕಾಂತ್ ಯಾವುದೇ ಅವತಾರವೆತ್ತಿ ಬರಲಿ, ಅದನ್ನು ನೋಡುವುದಕ್ಕೆ ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿರುತ್ತಾರೆ. ಇವರಿಗೆ ಫ್ಯಾನ್ಸ್ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶಗಳಲ್ಲೂ ನೆಲೆಸಿದ್ದಾರೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ರಜನಿ ಲೆಕ್ಕನೇ ಬೇರೆ ಇರುತ್ತೆ.
'ಜೈಲರ್' ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದು ರಜನಿ ಕರಿಯರ್‌ನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಈಗ ಅತಿಥಿ ಪಾತ್ರದಲ್ಲಿ ನಟಿಸಿದ್ದರೂ 'ಲಾಲ್ ಸಲಾಂ' ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕ ಹಾಕುವುದಕ್ಕೂ ಮುನ್ನ ರಜನಿ ಪಡೆದ ಸಂಭಾವನೆ ಟ್ರೆಂಡಿಂಗ್‌ನಲ್ಲಿದೆ.

ನಿಮಿಷಕ್ಕೆ ಒಂದು ಕೋಟಿ?
ಮಗಳೇ 'ಲಾಲ್ ಸಲಾಂ' ನಿರ್ದೇಶಕಿಯಾಗಿದ್ದರಿಂದ ರಜನಿಕಾಂತ್ ಸಂಭಾವನೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿರಬಹುದು ಅನ್ನೋ ಅನುಮಾನವಿತ್ತು. ಆದರೆ, ರಜನಿಕಾಂತ್ ಸಂಭಾವನೆ ಬಗ್ಗೆ ಕಾಲಿವುಡ್‌ನಲ್ಲಿ ಕ್ರೇಜಿ ಸುದ್ದಿಯೊಂದು ಓಡಾಡುತ್ತಿದೆ. ಟ್ರ್ಯಾಕ್ ಟಾಲಿವುಡ್ ವರದಿ ಮಾಡಿರೋ ಪ್ರಕಾರ, ಸೂಪರ್‌ಸ್ಟಾರ್ ರಜನಿಕಾಂತ್ ನಿಮಿಷಕ್ಕೆ ಒಂದು ಕೋಟಿಯಂತೆ ಸಂಭಾವನೆ ಪಡೆದಿದ್ದಾರೆ.
ತಮಿಳು ಮಾಧ್ಯಮಗಳ ವರದಿ ಪ್ರಕಾರ, 'ಲಾಲ್ ಸಲಾಂ' ಸಿನಿಮಾದಲ್ಲಿ ರಜನಿಕಾಂತ್ ಸುಮಾರು 40 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡರೆ, ಸೂಪರ್‌ಸ್ಟಾರ್ ರಜನಿಕಾಂತ್ ಸುಮಾರು 35 ರಿಂದ 40 ಕೋಟಿ ರೂಪಾಯಿ ಸಂಭಾವನೆ ಪಡೆದಿರಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಐಶ್ವರ್ಯಾ ರಜನಿಕಾಂತ್ ಬರೋಬ್ಬರಿ 9 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ ಆರ್ ರೆಹಮಾನ್ ಸಂಗೀತ ನೀಡಿದ್ದು, ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಹಾಗೇ ಉದಯನಿಧಿ ಸ್ಟ್ಯಾಲಿನ್ ಸಂಸ್ಥೆ ರೆಡ್ ಜೈಂಟ್ ಮೂವೀಸ್ ಸಿನಿಮಾವನ್ನು ವಿತರಣೆ ಮಾಡುತ್ತಿದೆ.


Click it and Unblock the Notifications











