ನಿರ್ದೇಶಕ ಭಾರತಿರಾಜಾ ನಿಧನ; ರಜನಿಕಾಂತ್, ಕಮಲ್ ಹಾಸನ್, ವಿಜಯ್ ಅಂತಿಮ ದರ್ಶನ
ಖ್ಯಾತ ಸಿನಿಮಾ ನಿರ್ದೇಶಕ ಭಾರತಿರಾಜಾ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಇಂದು (ಜೂನ್ 10) ಅವರು ಕೊನೆಯುಸಿರೆಳೆದಿದ್ದು ಸಾಕಷ್ಟು ಗಣ್ಯರು, ತಾರೆಯರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ನಟರಾದ ಕಮಲ್ ಹಾಸನ್, ರಜನಿಕಾಂತ್, ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್, ನಟಿ ಕೀರ್ತಿ ಸುರೇಶ್ ಸೇರಿದಂತೆ ಹಲವರು ನಿರ್ದೇಶಕರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ.
ಭಾರತೀರಾಜ ಅಗಲಿಕೆಗೆ ಸಿಎಂ ವಿಜಯ್ ದುಃಖ ವ್ಯಕ್ತಪಡಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ತಮಿಳು ಚಿತ್ರರಂಗಕ್ಕೆ ಭಾರತೀರಾಜ ಸೇವೆಯನ್ನು ಗುರ್ತಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ವಿಚಾರ ಗೊತ್ತಾಗುತ್ತದ್ದಂತೆ ಟ್ವೀಟ್ ಮಾಡಿದ್ದ ವಿಜಯ್ "ಭಾರತಿರಾಜ ಅಗ್ರಾಮೀಣ ಜೀವನದ ರೋಮಾಂಚಕ ಸಾರವನ್ನು ತುಂಬಿದ ಹಲವಾರು ಯಶಸ್ವಿ ಚಲನಚಿತ್ರಗಳನ್ನು ರಚಿಸಿದರು. ತಮಿಳು ಸಿನಿಮಾ ಜಗತ್ತಿನಲ್ಲಿ ಅವರಿಗೆ ಅನನ್ಯವಾದ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ. ತಮ್ಮ ಸಿನಿಮಾಗಳಿಗಾಗಿ ರಾಷ್ಟ್ರದ ಅತ್ಯುನ್ನತ ಗೌರವವಾದ ಪದ್ಮಶ್ರೀ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಕೊಡುಗೆಗಳು ತಮಿಳು ಸಿನಿಮಾ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಚಲನಚಿತ್ರೋದ್ಯಮಕ್ಕೆ ಅವರು ನೀಡಿದ ಕೊಡುಗೆಗಳಿಗೆ ಗೌರವ ಸಲ್ಲಿಸುವ ಸಲುವಾಗಿ, ಅಂತಿಮಯಾತ್ರೆ ಸಮಯದಲ್ಲಿ ರಾಜ್ಯ ಗೌರವಗಳನ್ನು ಸಲ್ಲಿಸಲಾಗುವುದು" ಎಂದು ಬರೆದುಕೊಂಡಿದ್ದಾರೆ.

ಭಾರತಿರಾಜಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕಮಲ್ ಹಾಸನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ಒಬ್ಬ ಜಂಟಲ್‌ಮನ್ ಹೊರಟು ಹೋದರು. ಆದರೆ ಅವರ ಸ್ನೇಹ ಮುಂದುವರಿಯುತ್ತದೆ, ಅವರ ಕಲೆ ಉಳಿಯುತ್ತದೆ. ಅವರ ಅಗಲಿಕೆಯ ನಷ್ಟವನ್ನು ನಾನು ಲೆಕ್ಕಾ ಹಾಕುವುದಿಲ್ಲ, ಅವರಿಂದ ಏನೆಲ್ಲಾ ಲಾಭ ಆಯ್ತು ಎನ್ನುವುದು ಮುಖ್ಯ. ಅವರು ನನ್ನೊಂದಿಗೆ ಸಿನಿಮಾಗಳನ್ನು ಮಾಡಿದ್ದರು, ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದು ತಿಳಿಸಿದ್ದಾರೆ.
50 ವರ್ಷಗಳ ಸ್ನೇಹಿತ. ಅವರ ಪ್ರತಿಭೆ, ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತು. ಚಿತ್ರರಂಗಕ್ಕೆ ಸಾಕಷ್ಟು ಕಲಾವಿದರು, ನಿರ್ದೇಶಕರನ್ನು ಭಾರತಿರಾಜಾ ಪರಿಚಯಿಸಿದವರು. ಯಾರಿಗೆ ಸಮಸ್ಯೆ ಅಂದ್ರು ಮೊದಲು ದನಿ ಎತ್ತುತ್ತಿದ್ದರು. ಎಷ್ಟೇ ವರ್ಷ ಕಳೆದರೂ ಅವರ ಸಿನಿಮಾಗಳನ್ನು ಜನ ಮರೆಯುವುದಿಲ್ಲ. ಮಗುವಿನ ಮನಸ್ಸು ಅವರದ್ದು. ಇದ್ದಿದ್ದು ಇದ್ದಂತೆ ಹೇಳುತ್ತಿದ್ರು. ನನ್ನ ಬಗ್ಗೆ ಟೀಕಿಸುತ್ತಿದ್ರು. ನೀನು ಅಂದ್ರೆ ನನಗಿಷ್ಟ. ಆದ್ರೆ ನಿನ್ನ ನಟನೆ ಇಷ್ಟವಿಲ್ಲ ಎನ್ನುತ್ತಿದ್ರು.. ಅವ್ರು ಓಪನ್ ಆಗಿ ಯಾರು ಮಾತಾಡಲ್ಲ. ಅದಕ್ಕೆ ಶಿವಾಜಿ, ಎಂಜಿಆರ್, ಕರುಣಾನಿಧಿ ಎಲ್ಲರಿಗೂ ಭಾರತೀರಾಜ ಆಪ್ತರಾಗಿದ್ದದ್ರು ಎಂದು ನಟ ರಜನಿಕಾಂತ್ ಹೇಳಿದ್ದಾರೆ.
ಭಾರತಿರಾಜಾ ಆರೋಗ್ಯದಲ್ಲಿ ಏರುಪೇರು ಆಗಿದ್ದಾಗ ಭೇಟಿ ಮಾಡಬೇಕು ಎಂದುಕೊಂಡಿದ್ದೆ. ಇಲ್ಲ ಅವ್ರು ಚೇತರಿಸಿಕೊಳ್ತಾರೆ ಆಮೇಲೆ ಬನ್ನಿ ಎನ್ನುತ್ತಿದ್ರು. ಆದ್ರೆ ಅವ್ರು ಜೀವಂತವಾಗಿ ಇರುವಾಗ ನೋಡಲು ಸಾಧ್ಯವಾಗಲೇ ಇಲ್ಲ. ಅವ್ರು ನನ್ನ ಹೃದಯದಲ್ಲಿ ಸದಾ ಇರ್ತಾರೆ. ಅವ್ರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ.
ತಮಿಳುನಾಡು ಸಿಎಂ ವಿಜಯ್ ತಂದೆ ನಿರ್ದೇಶಕ ಎಸ್.ಎ ಚಂದ್ರಶೇಖರ್, ನಿರ್ದೇಶಕ ಶಂಕರ್, ನಟ ಸೂರ್ಯ, ದಿವಂಗತ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ಸೇರಿದಂತೆ ಸಾಕಷ್ಟು ಗಣ್ಯರು ಭಾರತಿರಾಜಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿದ್ದಾರೆ.


Click it and Unblock the Notifications