ಮೊದಲ ದಿನವೇ ರಜನಿಯ 'ರಾಣಾ' ಸಿನಿಮಾ ನಿಂತು ಹೋಯ್ತು; ಮತ್ತೆ ನಟಿಸೋ ಮನಸ್ಸು ಮಾಡಿಲ್ಲ ಯಾಕೆ ಗೊತ್ತಾ?
ರಜನಿಕಾಂತ್ ಕರಿಯರ್‌ನಲ್ಲಿ ಕೆಲವು ಸಿನಿಮಾಗಳು ನಿಂತು ಹೋಗಿವೆ. ಆದರೆ, ಇದೊಂದು ಸಿನಿಮಾದಲ್ಲಿ ರಜನಿಗೆ ನಟಿಸೋದೇ ಬೇಡ ಅಂತ ಅನಿಸಿತ್ತು. ಸಿನಿಮಾವೇನೋ ಅದ್ಧೂರಿಯಾಗಿ ಸೆಟ್ಟೇರಿತ್ತು. ಸ್ಟಾರ್ ನಿರ್ದೇಶಕ ಕೆ ಎಸ್ ರವಿಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದರು. ಆದರೆ, ಮೊದಲ ದಿನವೇ ಈ ಸಿನಿಮಾ ನಿಂತು ಹೋಯ್ತು. ಮತ್ತೆಂದೂ ಶುರುವಾಗಲೇ ಇಲ್ಲ.
ಆ ಸಿನಿಮಾ ಮತ್ಯಾವುದೂ ಅಲ್ಲ 'ರಾಣಾ'. ಈ ಸಿನಿಮಾ ಅದ್ಯಾಕೋ ರಜನಿಕಾಂತ್ ಆಗಿ ಬರಲೇ ಇಲ್ಲ. ಈ ಸಿನಿಮಾ ಆರಂಭಕ್ಕೂ ಮುನ್ನವೇ ಕೆಲವು ಅಡೆ ತಡೆಗಳು ಎದುರಾಗಿದ್ದವು. ಆದರೂ, ರಜನಿಕಾಂತ್ ಈ ಸಿನಿಮಾಗೆ ಮುಂದಾಗಿದ್ದರು. ಸಿನಿಮಾವನ್ನೂ ಸೆಟ್ಟೇರಿಸಿದ್ದರು. ಕೊನೆಗೆ ರಜನಿಗೆ ಈ ಸಿನಿಮಾ ಮಾಡೋದು ಬೇಡ ಅಂತ ಅನಿಸಿತ್ತು.

'ರಾಣಾ' ಸಿನಿಮಾ ಮಾಡಬೇಕು ಅಂದು ನಿರ್ಧರಿಸಿದಾಗಲೆಲ್ಲ ಏನಾದರೂ ತೊಡಕುಗಳು ಎದುರಾಗುತ್ತಲೇ ಇತ್ತು. ಮೊದಲು ಆನಿಮೇಷನ್ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದರು. ಆದರೆ, ಸ್ವತ: ರಜನಿಕಾಂತ್ ಬೇಡ ಸಿನಿಮಾವನ್ನೇ ಶೂಟ್ ಮಾಡೋಣ ಅಂತ ಹೇಳಿದ್ದರು ಎಂದು ನಿರ್ದೇಶಕ ಕೆ ಎಸ್ ರವಿಕುಮಾರ್ ಹೇಳಿಕೊಂಡಿದ್ದಾರೆ. ಆದರೂ, 'ರಾಣಾ' ನಿಲ್ಲುವುದಕ್ಕೆ ಕಾರಣವೇನು? ಅನ್ನೋದನ್ನು ನಿರ್ದೇಶಕ ಕೆ ಎಸ್ ರವಿಕುಮಾರ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಕಮಲ್ ಹಾಸನ್ 'ದಶಾವತಾರಂ' ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿತ್ತು. ಕಮಲ್‌ಗೆ ಹೊಸ ಇಮೇಜ್ ಕೊಟ್ಟಿತ್ತು. ಈ ಸಿನಿಮಾ ಕಮಲ್ ಕಥೆ ಬರೆದಿದ್ದರೂ, ಆಕ್ಷನ್ ಕಟ್ ಹೇಳಿದ್ದು ಕೆ ಎಸ್ ರವಿಕುಮಾರ್. ಇತ್ತ ರಜನಿಯ 'ಎಂದಿರನ್' ಮೆಗಾ ಹಿಟ್ ಆಗಿತ್ತು. ಹೀಗಾಗಿ ರಜನಿಕಾಂತ್‌ಗೆ ಮತ್ತೊಂದು ಅದ್ಭುತ ಸಿನಿಮಾ ಬೇಕಿತ್ತು. ಆಗ ಹುಟ್ಟಿದ್ದೇ 'ರಾಣಾ'. ಕೆ ಎಸ್ ರವಿಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುವುದಕ್ಕೂ ರೆಡಿಯಾಗಿದ್ದರು.
14ನೇ ವಯಸ್ಸಿಗೆ ಎಂಟ್ರಿ, 16ಕ್ಕೆ ಸ್ಟಾರ್ ಪಟ್ಟ, 22ನೇ ವಯಸ್ಸಿಗೆ ದುರಂತ ಸಾವು: ರಜನಿಯ ಈ ಫೇವರಿಟ್ ನಟಿ ಯಾರು?
'ರಾಣಾ' ಸೆಟ್ಟಿರಿದ ಮೊದಲ ದಿನವೇ ರಜನಿ ಆರೋಗ್ಯ ತಪ್ಪಿತ್ತು. ಇನ್ನೇನು ರಜನಿಕಾಂತ್ ಮುಗಿದೇ ಹೋಯ್ತು ಅನ್ನುವ ಮಟ್ಟಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೀಗಾಗಿ ಅವರನ್ನು ಹೆಚ್ಚಿನ ಸಿಂಗಾಪುರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಒಂದಿಷ್ಟು ದಿನ ಚಿಕಿತ್ಸೆ ಪಡೆದು ಗುಣ ಮುಖರಾಗಿ ಚೆನ್ನೈಗೆ ಹಿಂತಿರುಗಿದ್ದರು. ಇನ್ನೇನು ಮತ್ತೆ ಸಿನಿಮಾ ಶುರು ಮಾಡಬಹುದು ಎಂದು ಅಂದುಕೊಂಡಿದ್ದರು. ಆದರೆ, ಒಂದು ವರ್ಷ ಸಿನಿಮಾದಲ್ಲಿ ನಟಿಸದಂತೆ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ 'ರಾಣಾ' ಮತ್ತೆ ಆರಂಭ ಆಗಲಿಲ್ಲ.

ಇನ್ನೊಂದು ಕಡೆ ರಜನಿಗೆ 'ರಾಣಾ' ಯಾಕೋ ಸರಿ ಹೋಗುತ್ತಿಲ್ಲ ಅನಿಸಿತ್ತು. 'ರಾಣಾ' ಸಿನಿಮಾ ಶುರುವಾದ ವೇಳೆನೇ ಆರೋಗ್ಯ ಕೈ ಕೊಟ್ಟಿದ್ದರಿಂದ ಮತ್ತೆ ಆ ಸಿನಿಮಾ ಮಾಡುವುದಕ್ಕೆ ಮನಸ್ಸು ಮಾಡಲಿಲ್ಲ. ಹೀಗಾಗಿ ಕೆ ಎಸ್ ರವಿಕುಮಾರ್ ಅವರ ಮತ್ತೊಂದು ಕಥೆ 'ಕೋಚಡಯಾನ್' ಅನ್ನು ಅನಿಮೇಷನ್ ರೂಪದಲ್ಲಿ ತೆರೆಮೇಲೆ ತರುವುದಕ್ಕೆ ನಿರ್ಧರಿಸಿದ್ದರು. ಆದರೆ, ಈ ಸಿನಿಮಾ ಹೀನಾಯವಾಗಿ ಸೋತಿತ್ತು.
ರಜನಿ ಆರೋಗ್ಯ ಸರಿ ಹೋದ ಮೇಲಾದರೂ 'ರಾಣಾ' ಸೆಟ್ಟೇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ರಜನಿ ಮನಸ್ಸು ಮಾಡಲಿಲ್ಲ. ಇನ್ನೂ 'ರಾಣಾ' ಸ್ಕ್ರಿಪ್ಟ್ ಕೆ ಎಸ್ ರವಿಕುಮಾರ್ ಆಫೀಸ್‌ನಲ್ಲಿ ಹಾಗೇ ಉಳಿದಿದೆ. ರಜನಿ ಹಾಗೂ ಅಜಿತ್ ಇಮೇಜ್ ಇರುವವರು ಮಾತ್ರ ಈ ಸಿನಿಮಾ ಮಾಡುವುದಕ್ಕೆ ಸಾಧ್ಯವೆಂದು ರವಿಕುಮಾರ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











