ರಜನಿಕಾಂತ್ 'ಪಡೆಯಪ್ಪ' ರಿ-ರಿಲೀಸ್; ದಾಖಲೆ ಲೆಕ್ಕದಲ್ಲಿ ಟಿಕೆಟ್ ಸೇಲ್; ವಿಜಯ್ 'ಗಿಲ್ಲಿ' ದಾಖಲೆ ಮುರಿಯುತ್ತಾ?
ನಾಳೆ (ಡಿಸೆಂಬರ್ 12) ಸೂಪರ್‌ಸ್ಟಾರ್ ರಜನಿಕಾಂತ್ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದಲ್ಲಿ ರಜನಿಕಾಂತ್ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಯಶಸ್ಸು ಕೊಟ್ಟ ಸಿನಿಮಾಗಳಲ್ಲಿ ಒಂದಾದ 'ಪಡೆಯಪ್ಪ' ರಿ-ರಿಲೀಸ್ ಆಗುತ್ತಿದೆ. ಹೀಗಾಗಿ ರಜನಿ ಅಭಿಮಾನಿಗಳಿಗೆ ಡಬಲ್ ಧಮಾಕಾ. ಈ ಸಂಭ್ರಮದಲ್ಲಿ ಮುಳುಗಿ ಏಳುವುದಕ್ಕೆ ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
ರಜನಿಕಾಂತ್‌ಗೆ ನಾಳೆ (ಡಿಸೆಂಬರ್ 12) ಎರಡೆರಡು ಸಂಭ್ರಮ. ಒಂದ್ಕಡೆ 75ನೇ ಹುಟ್ಟುಹಬ್ಬವಾದರೆ, ಇನ್ನೊಂದು ಕಡೆ ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳನ್ನು ಪೂರೈಸಿದ್ದಾರೆ. ಈ ಎರಡು ಸಂಭ್ರಮವನ್ನು ಅವರೇ ನಿರ್ಮಿಸಿದ್ದ 'ಪಡೆಯಪ್ಪ' ಸಿನಿಮಾವನ್ನು ರಿ-ರಿಲೀಸ್ ಮಾಡುವ ಮೂಲಕ ಆಚರಿಸುವುದಕ್ಕೆ ರಜನಿಕಾಂತ್ ನಿರ್ಧರಿಸಿದ್ದಾರೆ.

1999ರಲ್ಲಿ ರಿಲೀಸ್ ಆಗಿದ್ದ 'ಪಡೆಯಪ್ಪ' ಸಿನಿಮಾಗೆ ಸೂಪರ್‌ಸ್ಟಾರ್ ರಜನಿಕಾಂತ್ ಅವರೇ ಕಥೆ ಬರೆದು, ನಿರ್ಮಾಣ ಮಾಡಿದ್ದರು. 'ಪೊನ್ನಿಯಿನ್ ಸೆಲ್ವನ್' ಕಥೆಯನ್ನು ಓದುವಾಗ ರಜನಿಗೆ ಈ ಸಿನಿಮಾದ ಕಥೆ ಹೊಳೆದಿತ್ತು. ಕೆ.ಎಸ್.ರವಿಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಇದು ರಜನಿಕಾಂತ್ ವೃತ್ತಿ ಬದುಕಿನಲ್ಲೇ ದೊಡ್ಡ ಮೈಲಿಗಲ್ಲಾಗಿತ್ತು. ಈ ಸಿನಿಮಾ 25 ವರ್ಷಗಳ ಬಳಿಕ ಮತ್ತೆ ರಿ-ರಿಲೀಸ್ ಆಗಿತ್ತಿದ್ದು, ಅಡ್ವಾನ್ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಅದೇನು ಅಂತ ನೋಡುವುದಕ್ಕೆ ಮುಂದೆ ಓದಿ.
ಸೂಪರ್‌ಸ್ಟಾರ್ ಸಿನಿಮಾಗಳು ರಿ-ರಿಲೀಸ್ ಆಗೋದು ಹೊಸ ವಿಷಯವೇನೂ ಅಲ್ಲ. ಆಗಾಗ ವಿಶೇಷ ಸಂದರ್ಭಗಳಲ್ಲಿ ಸಿನಿಮಾಗಳು ಮರುಬಿಡುಗಡೆಯಾಗುತ್ತಲೇ ಇರುತ್ತವೆ. ಆದರೆ, ಅವರಲ್ಲಿ ಕೆಲ ಸ್ಟಾರ್ ನಟರ ಸಿನಿಮಾಗಳು ರಿ-ರಿಲೀಸ್ ಅಂದರೆ, ಅದರ ಖದರ್ ಬೇರೆನೇ ಇರುತ್ತೆ. ಹೊಚ್ಚ ಹೊಸ ಸಿನಿಮಾ ರಿಲೀಸ್ ಆದಷ್ಟೇ ಸಂಭ್ರಮ ಮನೆ ಮಾಡಿರುತ್ತೆ. ಈಗ 'ಪಡೆಯಪ್ಪ' ಸಿನಿಮಾಗೂ ಕೂಡ ಅದೇ ಆಗಿದೆ.
ಇಲ್ಲಿವರೆಗೂ 'ಪಡೆಯಪ್ಪ' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರುತ್ತಿದ್ದಾರೆ. ಇಲ್ಲಿವರೆಗೂ ಸುಮಾರು 15 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟ ಆಗಿವೆ ಎನ್ನಲಾಗಿದೆ. ಚೆನ್ನೈನ ಜನಪ್ರಿಯ ರೋಹಿಣೀ ಥಿಯೇಟರ್‌ನ ಆಡಳಿತ ಸಿಬ್ಬಂದಿಗಳು ಈ ಬಗ್ಗೆ ಮಾಹಿತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿವೆ. ಹೀಗಾಗಿ ರಜನಿಕಾಂತ್ ಸಿನಿಮಾ ತಮಿಳುನಾಡು ಬಾಕ್ಸಾಫೀಸ್‌ನಲ್ಲಿ ಹೊಸ ಸಾಧನೆ ಮಾಡಬಹುದೆಂಬ ನಿರೀಕ್ಷೆಯಿದೆ.

ತಮಿಳು ಚಿತ್ರರಂಗದ ಇತಿಹಾಸದಲ್ಲಿ ದಳಪತಿ ವಿಜಯ್ ನಟಿಸಿದ 'ಗಿಲ್ಲಿ' ಸಿನಿಮಾ ದಾಖಲೆ ಬರೆದಿದೆ. ಬಾಕ್ಸಾಫೀಸ್‌ನಲ್ಲಿ ಸುಮಾರು ₹25 ಕೋಟಿ ಕಲೆಕ್ಷನ್ ಮಾಡುವ ಮೂಲಕ ರೆಕಾರ್ಡ್ ಮಾಡಿತ್ತು. ಇದು ರಿ-ರಿಲೀಸ್ ಆದವುಗಳಲ್ಲಿ ಪೈಕಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಮಾಡಿದೆ. ಈ ದಾಖಲೆಯನ್ನು ರಜನಿಕಾಂತ್ ಸಿನಿಮಾ 'ಪಡೆಯಪ್ಪ' ಮುರಿಯುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ತಮಿಳುನಾಡಲ್ಲಿ 'ಪಡೆಯಪ್ಪ' ರಿಲೀಸ್ ಆಗಲಿದೆ. ಸದ್ಯಕ್ಕೆ ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಆದರೆ, 'ಪಡೆಯಪ್ಪ'ಗೆ ಟಿಕೆಟ್‌ಗಳ ದರ ₹100 ರಿಂದ ₹190ರ ವರೆಗೆ ನಿಗದಿ ಪಡಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ 'ಪಡೆಯಪ್ಪ' ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ವಿದೇಶದಲ್ಲಿಯೂ ಈ ಸಿನಿಮಾ ರಿಲೀಸ್ ಆದರೆ, ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಧೂಳೆಬ್ಬಿಸುವುದು ಗ್ಯಾರಂಟಿ. ಇವೆಲ್ಲದಕ್ಕೂ ನಾಳೆ ತಮಿಳು ನಾಡಿನ ಜನರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತೆ ಅನ್ನೋದು ತಿಳಿಯಲಿದೆ.


Click it and Unblock the Notifications











