ಯಾಮಾರಿದ್ರೆ ಜೀವ ಕಳೆದುಕೊಳ್ತಿದ್ದ ರಜನಿ ಬದುಕಿದ್ದೇ ಪವಾಡ; ಆ ಘಟನೆ ಬಿಚ್ಚಿಟ್ಟ ಸೂಪರ್‌ಸ್ಟಾರ್
ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಕ್ಸಸ್ ಮೂಡಿನಲ್ಲಿಯೇ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜ್ಞಾನವೇಲು ನಿರ್ದೇಶಿಸುತ್ತಿರುವ 'ವೆಟ್ಟೈಯಾನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ 171ನೇ ಸಿನಿಮಾಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 73ನೇ ವಯಸ್ಸಿನಲ್ಲಿ ಇಷ್ಟೊಂದು ಬ್ಯುಸಿಯಾಗಿದ್ದರೂ, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇಂದು (ಮಾರ್ಚ್ 20) ಸೂಪರ್‌ಸ್ಟಾರ್ ರಜನಿಕಾಂತ್ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ರಜನಿ ತಮ್ಮ ಆರೋಗ್ಯದ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಕಾವೇರಿ ಆಸ್ಪತ್ರೆಯಲ್ಲಿ ರಜನಿಗೆ ಸಿಕ್ಕ ಚಿಕಿತ್ಸೆ ಬಗ್ಗೆ ರಿವೀಲ್ ಮಾಡಿದ್ದಾರೆ.

ರಜನಿಕಾಂತ್ ಚೆನ್ನೈನಲ್ಲಿರುವ ಹೊಸ ಕಾವೇರಿ ಆಸ್ಪತ್ರೆ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಬಂದಿದ್ದಕ್ಕೆ ಕಾರಣ ಕೂಡ ಇದೇನೇ. ಇದೇ ಸಂದರ್ಭದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ತನ್ನನ್ನು ವೈದ್ಯರು ಬದುಕಿಸಿದ್ದೇಗೆ? ಆಪರೇಷನ್ ಆದ ಆ ಘಳಿಗೆ ಹೇಗಿತ್ತು? ಅನ್ನೋದನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ.
"ಕಾರ್ಯಕ್ರಮಕ್ಕೆ ಹೋಗುವುದನ್ನೇ ನಿಲ್ಲಿಸಿದ್ದೆ"
ರಜನಿಕಾಂತ್ ಹಲವು ವರ್ಷಗಳಿಂದ ಉದ್ಘಾಟನಾ ಸಮಾರಂಭಕ್ಕೆ ಹೋಗುವುದನ್ನು ನಿಲ್ಲಿಸಿದ್ದರು. ಈಗ ಬಹಳ ದಿನಗಳ ಬಳಿಕ ಆಸ್ಪತ್ರೆ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅದ್ಯಾಕೆ ಹೋಗುತ್ತಿರಲಿಲ್ಲ ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಾನು ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನಾನು ಯಾವುದೇ ಕಾಲೇಜಿನ ಉದ್ಘಾಟನೆಗೆ ಹೋದರೆ, ಅದರಲ್ಲಿ ನನ್ನದೂ ಶೇರ್ ಇದೆ. ಬೇನಾಮಿ ಹೆಸರಲ್ಲಿ ಮಾಡಿದ್ದಾರೆ ಅಂತೆಲ್ಲ ಹೇಳುತ್ತಾರೆ. ಈ ಕಾರಣಕ್ಕಾಗಿಯೇ ನಾನು ಯಾವುದೇ ಉದ್ಘಾಟನಾ ಸಮಾರಂಭಕ್ಕೆ ಹೋಗುವುದಿಲ್ಲ" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

"ನನ್ನ ದೇಹ ಹಲವು ಆಸ್ಪತ್ರೆಗಳನ್ನು ನೋಡಿದೆ"
ಕಾವೇರಿ ಆಸ್ಪತ್ರೆ ಉದ್ಘಾಟನೆ ಬಳಿಕ "ನನ್ನ ದೇಹ ವಿಜಯ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ಅಪೋಲೊ, ರಾಮಚಂದ್ರ, ಸಿಂಗಾಪುರದ ಎಲಿಜಬೆತ್ ಹಾಗೂ ಅಮೆರಿಕದ ಆಸ್ಪತ್ರೆಯನ್ನು ಕಂಡಿದೆ. ಹೀಗಾಗಿ ನನಗೆ ವೈದ್ಯರು ಹಾಗೂ ನರ್ಸ್‌ಗಳ ಬಗ್ಗೆ ವಿಶೇಷ ಗೌರವವಿದೆ. ನಾನು ಇನ್ನೂ ಬದುಕಿದ್ದೇನೆ ಅಂದರೆ, ಅದಕ್ಕೆ ಅವರೇ ಕಾರಣ" ಎಂದು ರಜನಿ ಹೇಳಿದ್ದಾರೆ.
ಆರೋಗ್ಯದ ಬಗ್ಗೆ ಹೇಳಿದ್ದೇನು?
ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಗಂಭೀರ ಸ್ಥಿತಿಯಲ್ಲಿ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ವೈದ್ಯರಿಗೆ ಕರೆ ಮಾಡಿದಾಗ ಕೂಡಲೇ ಪ್ರತಿಕ್ರಿಯಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಂದು ವೈದ್ಯರು ರಜನಿಕಾಂತ್ ಸ್ಥಿತಿಯನ್ನು ನೋಡಿ ಇನ್ನು ಕೆಲವೇ ಗಂಟೆಗಳ ಒಳಗೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದರು. ಆ ಘಳಿಗೆಯನ್ನು ರಜನಿಕಾಂತ್ ಹೇಳಿಕೊಂಡಿದ್ದಾರೆ.
ಒಂದು ಪರ್ಸೆಂಟ್ ಅನುಮಾನ
ರಜನಿಕಾಂತ್ ಅದ್ಯಾವ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು ಅನ್ನೋದನ್ನು ರಿವೀಲ್ ಮಾಡಿಲ್ಲ. ಆದರೆ, ಅಂದು ವೈದ್ಯರು 99 ಪರ್ಸೆಂಟ್ ಗ್ಯಾರಂಟಿ ಕೊಟ್ಟಿದ್ದರು. ಆದರೆ, ಒಂದು ಪರ್ಸೆಂಟ್ ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದರು. ಆ ವೇಳೆ ರಜನಿ ತಮ್ಮ ಅನುಭವ ಹೇಗಿತ್ತು? ಅನ್ನುವುದನ್ನು ಹೇಳಿಕೊಂಡಿದ್ದಾರೆ. "ಐಷಾರಾಮಿ ಬಂಗಲೆ ಕೊಟ್ಟು ಅದರಲ್ಲಿ ಹಾವು ಬಿಟ್ಟಿದ್ದೇವೆ ಎಂದು ಹೇಳಿದರೆ ಹೇಗಿರುತ್ತೋ ಅನುಭವ ಆಗಿತ್ತು. ಆಪರೇಷನ್ ಬಳಿಕ ಸಕ್ಸಸ್ ಅಂತ ಬಂದಾಗ ನಿರಾಳ ಆಗಿತ್ತು" ಎಂದು ರಜನಿಕಾಂತ್ ಉದ್ಘಾಟನಾ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











