Padayappa 2:ಒಂದ್ಕಡೆ 'ಪಡೆಯಪ್ಪ' ರಿ-ರಿಲೀಸ್.. ಇನ್ನೊಂದ್ಕಡೆ ಪಡೆಯಪ್ಪ 2 ಅನೌನ್ಸ್; ರಜನಿಯ ಈ ಕಥೆ ಎಲ್ಲಿಂದ ಶುರು?
ಇದೇ ತಿಂಗಳು ಸೂಪರ್‌ಸ್ಟಾರ್ ರಜನಿಕಾಂತ್ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಲೈವಾ ಬರ್ತ್‌ಡೇ ಅಂದರೆ ಸುಮ್ಮನೆನಾ? ಅಭಿಮಾನಿಗಳು ಈಗಾಗಲೇ ಸೆಲೆಬ್ರೇಷನ್ ಆರಂಭ ಮಾಡಿದ್ದಾರೆ. ಇನ್ನು ಫ್ಯಾನ್ಸ್ ಇಷ್ಟು ಉತ್ಸಾಹದಲ್ಲಿ ಇರಬೇಕಾದರೆ, ರಜನಿ ಸುಮ್ಮನೆ ಕೂರುವುದಕ್ಕೆ ಹೇಗೆ ಸಾಧ್ಯ? ಅದಕ್ಕೆ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅದುವೇ 'ಪಡೆಯಪ್ಪ' ಹಾಗೂ 'ಪಡೆಯಪ್ಪ 2'.
ರಜನಿಕಾಂತ್ ಹುಟ್ಟುಹಬ್ಬದ (ಡಿಸೆಂಬರ್ 12) ಈ ವಿಶೇಷ ದಿನದಂದು ಅವರ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾ 'ಪಡೆಯಪ್ಪ' ಮರು ಬಿಡುಗಡೆಯಾಗುತ್ತಿದೆ. ಹೀಗಾಗಿ ರಜನಿಕಾಂತ್ ಸುಮಾರು 36 ನಿಮಿಷಗಳ ಪ್ರಮೋಷನಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ 'ಪಡೆಯಪ್ಪ' ಸಿನಿಮಾದ ಬಗೆಗಿನ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

'ಪಡೆಯಪ್ಪ' ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದ ಸಿನಿಮಾ. ಈ ಸಿನಿಮಾವನ್ನು ಸ್ವತ: ರಜನಿಕಾಂತ್ ಅವರೇ ನಿರ್ಮಾಣ ಮಾಡಿದ್ದರು. ವಿಶೇಷ ಅಂದರೆ, ಈ ಸಿನಿಮಾದ ಹಕ್ಕುಗಳನ್ನು ಯಾರಿಗೂ ಕೊಟ್ಟಿಲ್ಲ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಇನ್ನೂ ಯಾರಿಗೂ ಕೊಟ್ಟಿಲ್ಲ. ಸನ್ ಟಿವಿಗೆ ಕೇವಲ ಎರಡು ಬಾರಿ ಮಾತ್ರ ಪ್ರಸಾರಕ್ಕೆ ಅವಕಾಶ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ. ಇದೇ ವೇಳೆ 'ಪಡೆಯಪ್ಪ 2' ಸಿನಿಮಾ ಬಗ್ಗೆನೂ ಅಭಿಮಾನಿಗಳಿಗೆ ಸುಳಿವನ್ನು ನೀಡಿದ್ದಾರೆ.
ರಜನಿಕಾಂತ್ ಹಂಚಿಕೊಂಡಿರುವ ವಿಡಿಯೋದಲ್ಲಿ 'ಪಡೆಯಪ್ಪ' ಬಗ್ಗೆ ಹಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ರಜನಿ 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯನ್ನು ಓದಿದ ಬಳಿಕ 'ಪಡೆಯಪ್ಪ' ಸಿನಿಮಾದ ಕಲ್ಪನೆ ಹೊಳೆದಿತ್ತೆಂದು ಹೇಳಿಕೊಂಡಿದ್ದಾರೆ. ಈ ಸಿನಿಮಾದ ಜನಪ್ರಿಯ ನೀಲಾಂಬರಿ ಪಾತ್ರಕ್ಕಾಗಿ ಮೊದಲ ಐಶ್ವರ್ಯಾ ರೈ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಅವರ ಕಾಲ್‌ಶೀಟ್‌ಗಾಗಿ ಮೂರು ತಿಂಗಳು ಕಾದಿದ್ದರಂತೆ. ಆದರೆ, ಐಶ್ವರ್ಯಾ ರೈ ಆ ಪಾತ್ರದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿರಲಿಲ್ಲ. ಹೀಗಾಗಿ ನಿರ್ದೇಶಕ ಕೆ.ಎಸ್.ರವಿಕುಮಾರ್ ಬೇರೆ ನಟಿಯನ್ನು ಹುಡುಕುವುದಕ್ಕೆ ಆರಂಭಿಸಿದ್ದರು.
ನೀಲಾಂಬರಿ ಪಾತ್ರಕ್ಕೆ ರಮ್ಯಾ ಕೃಷ್ಣ ಅವರೇ ಸರಿ ಹೊಂದುತ್ತಾರೆಂದು ಕೆ.ಎಸ್.ರವಿಕುಮಾರ್ ಹೇಳಿದಾಗ, ರಜನಿಕಾಂತ್ ಅರೆ ಮನಸ್ಸಿನಿಂದ ಒಪ್ಪಿಕೊಂಡಿದ್ದರು. ಆದರೆ, ಸಿನಿಮಾ ಶೂಟಿಂಗ್ ವೇಳೆ ರಮ್ಯಾ ಕೃಷ್ಣ ಅವರ ನಟನೆಯನ್ನು ನೋಡಿ ನೀಲಾಂಬರಿ ಪಾತ್ರಕ್ಕೆ ಅವರೇ ಸೂಕ್ತವೆಂದು ಮನವರಿಕೆ ಆಯ್ತು ಎಂದು ಸೂಪರ್‌ಸ್ಟಾರ್ ರಜನಿಕಾಂತ್ ನೆನಪಿಸಿಕೊಂಡಿದ್ದಾರೆ.

ಇನ್ನೂ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲು ಯೋಚಿಸಿದ್ದರಿಂದ ತಂದೆಯ ಪಾತ್ರಕ್ಕೆ ಶಿವಾಜಿ ಗಣೇಶನ್ ಅವರನ್ನು ಪರಿಗಣಿಸಿದ್ದರು. ಆದರೆ, ಆ ವೇಳೆ ಶಿವಾಜಿ ಗಣೇಶನ್ ಅವರು ಹೆಚ್ಚು ಸಂಭಾವನೆಯನ್ನು ಕೇಳಿದ್ದರು. ಆದರೂ ಪರ್ವಾಗಿಲ್ಲ ಎಂದು ಅವರು ಕೇಳಿದಷ್ಟು ಹಣವನ್ನು ಕೊಟ್ಟಿದ್ದಾಗಿ ರಜನಿ ನೆನಪಿಸಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ವೇಳೆ "ನಾನು ಸತ್ತರೆ.. ನನ್ನ ದೇಹವನ್ನು ಹೊರುತ್ತೀಯಾ?" ಎಂದು ಕೇಳಿದ್ದರಂತೆ. ಮುಂದೊಂದು ದಿನ ಶಿವಾಜಿ ಗಣೇಶನ್ ತೀರಿಕೊಂಡಾಗ, ಅವರ ಮಕ್ಕಳಾದ ಪ್ರಭು ಹಾಗೂ ರಾಮ್ ಕುಮಾರ್ ಅವರ ಜೊತೆ ರಜನಿ ಕೂಡ ಹೆಗಲು ನೀಡಿದ್ದರು. " ನಾನು ಬೇರೆ ಯಾರ ಮೃತದೇಹದೊಂದಿಗೆ ಹೋಗಿಲ್ಲ. ಪ್ರಭು ಹಾಗೂ ರಾಮ್‌ಕುಮಾರ್ ಜೊತೆ ನಾನೂ ಹೆಗಲು ಕೊಟ್ಟಿದ್ದೆ" ಎಂದು ರಜನಿಕಾಂತ್ ನೆನಪಿಸಿಕೊಂಡು ಭಾವುಕರಾಗಿದ್ದಾರೆ.
'ಪಡೆಯಪ್ಪ' ರಿ-ರಿಲೀಸ್ ಖುಷಿಯನ್ನು ಹಂಚಿಕೊಂಡರೆ, ಇನ್ನೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. 'ಪಡೆಯಪ್ಪ 2' ಕಥೆಯನ್ನು ಸಿದ್ಧಪಡಿಸುತ್ತಿರುವುದಾಗಿ ರಜನಿಕಾಂತ್ ರಿವೀಲ್ ಮಾಡಿದ್ದಾರೆ. "ಎಷ್ಟು ಜನ್ಮ ಎತ್ತಿದರೂ ನಿನ್ನ ವಿರುದ್ಧ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಹೇಳಿ ನೀಲಾಂಬರಿ ಸಾವನ್ನಪ್ಪುತ್ತಾಳೆ. ಅಲ್ಲಿಂದ 'ಪಡೆಯಪ್ಪ 2' ಕಥೆ ಆರಂಭ ಆಗುತ್ತೆ. ಕಥೆ ಸರಿಯಾಗಿ ಮೂಡಿ ಬಂದರೆ, 'ಪಡೆಯಪ್ಪ 2' ಖಂಡಿತಾ ಬರುತ್ತೆ" ಎಂದು ರಜನಿ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.


Click it and Unblock the Notifications











