ರಜನಿಕಾಂತ್ ಜೊತೆ ಸಿನಿಮಾ ಘೋಷಿಸಿದ ಕಮಲ್ ಹಾಸನ್; ಟ್ವಿಸ್ಟ್ ಏನಪ್ಪಾ ಅಂದ್ರೆ?
ದಶಕಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಹಾಸನ್ ಜೊತೆಯಾಗುತ್ತಿದ್ದಾರೆ. ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದಿದ್ದ ಇವರಿಬ್ಬರೂ ಬಳಿಕ ಸೂಪರ್ ಸ್ಟಾರ್‌ಗಳಾಗಿ ಮೆರೆದರು. ಇವತ್ತಿಗೂ ದಿಗ್ಗಜರಿಬ್ಬರ ಕ್ರೇಜ್ ಕಮ್ಮಿ ಆಗಿತ್ತು. ಕೆಲ ವರ್ಷಗಳ ಕಾಲ ಒಟ್ಟಿಗೆ ತೆರೆಹಂಚಿಕೊಂಡಿದ್ದ ಜೋಡಿ ಬಳಿಕ ದೂರಾಗಿದ್ದರು. 50 ವರ್ಷಗಳ ಬಳಿಕ ಇಬ್ಬರೂ ಜೊತೆಯಾಗಿದ್ದಾರೆ.
ರಜನಿ ಹಾಗೂ ಕಮಲ್ ಒಟ್ಟಿಗೆ ನಟಿಸುವ ಸಿನಿಮಾ ಈಗಾಗಲೇ ಘೋಷಣೆಯಾಗಿದೆ. ಈ ನಡುವೆ ತಲೈವಾ ಜೊತೆ ಮತ್ತೊಂದು ಚಿತ್ರದ ಬಗ್ಗೆ ಕಮಲ್ ಅಧಿಕೃತವಾಗಿ ಮಾಹಿತಿ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ನಟನೆಯ 173ನೇ ಚಿತ್ರವನ್ನು ತಮ್ಮ ರಾಜ್‌ಕಮಲ್ ಇಂಟರ್‌ನ್ಯಾಷನಲ್ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸುಂದರ್ ಸಿ ಆಕ್ಷನ್ ಕಟ್ ಹೇಳಲಿದ್ದಾರೆ.

ಹೀರೊ ಆಗಿ ಮಾತ್ರವಲ್ಲದೇ ಕಮಲ್ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಇದೀಗ ರಜನಿಕಾಂತ್ ನಟನೆಯ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ತಲೈವಾ ಜೊತೆ ಕಮಲ್ ನಟಿಸುತ್ತಿಲ್ಲ. ಬದಲಿಸಿ ನಿರ್ಮಾಣ ಜವಾಬ್ದಾರಿ ಮಾತ್ರ ತೆಗೆದುಕೊಂಡಿದ್ದಾರೆ. 'ಕೂಲಿ' ಬಳಿಕ ರಜನಿಕಾಂತ್ 'ಜೈಲರ್ -2' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು ರಜನಿಕಾಂತ್ ಹಾಗೂ ಕಮಲ್ ಒಟ್ಟಿಗೆ ನಟಿಸುವ ಚಿತ್ರವನ್ನು ನೆಲ್ಸನ್ ಅಥವಾ ಅಟ್ಲಿ ನಿರ್ದೇಶನ ಮಾಡುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ. ರಜನಿಕಾಂತ್ ಪುತ್ರಿ ಹಾಗೂ ಕಮಲ್ ಪುತ್ರಿ ಆ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣ ಮಾಡಬಹುದು ಎನ್ನಲಾಗ್ತಿದೆ. "ಸುಂದರ್ ಸಿ ನಿರ್ದೇಶನದಲ್ಲಿ ಕಮಲ್ ಹಾಸನ್ ಅವರ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ತಲೈವಾ 173 ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎಂದು ಚಿತ್ರತಂಡ ಮಾಹಿತಿ ನೀಡಿದೆ.
"ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಕಮಲ್ ಹಾಸನ್ ನಡುವಿನ ಐದು ದಶಕಗಳ ಸ್ನೇಹ ಮತ್ತು ಸಹೋದರತ್ವವನ್ನು ಆಚರಿಸುತ್ತದೆ ಈ ಸಿನಿಮಾ ಆಚರಿಸುತ್ತದೆ. ಇದು ಕಲಾವಿದರು ಮತ್ತು ಪ್ರೇಕ್ಷಕರ ಪೀಳಿಗೆಗೆ ಸ್ಫೂರ್ತಿ ನೀಡುವ ಬಂಧವಾಗಿದೆ. ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ನ 44 ವರ್ಷಗಳ ಸಂಭ್ರಮದಲ್ಲೇ ಈ ಸಿನಿಮಾ ನಿರ್ಮಾಣವಾಗುತ್ತಿದೆ. 2027ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ತಿಳಿಸಿದ್ದಾರೆ. ಅಂದಹಾಗೆ ದಶಕಗಳ ಹಿಂದೆ ರಜನಿಕಾಂತ್ ನಟನೆಯ 'ಅರುಣಾಚಲಂ' ಚಿತ್ರವನ್ನು ಸುಂದರ್ ಸಿ ಕಟ್ಟಿಕೊಟ್ಟಿದ್ದರು.
175 ಸಿನಿಮಾಗಳ ಬಳಿಕ ರಜನಿಕಾಂತ್ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಎನ್ನಲಾಗ್ತಿದೆ. ಕಮಲ್ ಜೊತೆ ನಟಿಸುವ ಸಿನಿಮಾವೇ ಕೊನೆ, ಆ ಬಳಿಕ ಯಾವುದೇ ಚಿತ್ರದಲ್ಲಿ ಬಣ್ಣ ಹಚ್ಚಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇನ್ನು 'ಜೈಲರ್- 2' ಚಿತ್ರದ 80% ರಷ್ಟು ಚಿತ್ರೀಕರಣ ಮುಗಿದಿದೆ.
1995ರಲ್ಲಿ 'ಮುರೈ ಮಾಮನ್' ಸಿನಿಮಾ ಮೂಲಕ ಸುಂದರ್ ಸಿ ನಿರ್ದೇಶಕರಾಗಿ ಪರಿಚಿತರಾಗಿದ್ದರು. 'ಅರುಣಾಚಲಂ' ಚಿತ್ರಕ್ಕಾಗಿ ತಮಿಳುನಾಡು ರಾಜ್ಯಪ್ರಶಸ್ತಿ ಕೂಡ ಪಡೆದಿದ್ದರು. ಬಳಿಕ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಹೀರೊ ಆಗಿ ನಟಿಸಿ ಗೆದ್ದಿದ್ದರು. ಇತ್ತೀಚೆಗೆ 'ಅರನ್ಮಣೈ' ಸರಣಿ ಸಿನಿಮಾಗಳಿಂದ ಸುಂದಲ್ ಕಮಾಲ್ ಮಾಡುತ್ತಿದ್ದಾರೆ. ಸದ್ಯ 'ಮೂಕುಟ್ಟಿ ಅಮ್ಮನ್- 2' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಸದ್ಯ ಕಮಲ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸುವ ಸಿನಿಮಾ ಘೋಷಣೆ ಆಗಿದೆ. ಅವರಿಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳುವ ಸಿನಿಮಾ ಯಾವಾಗ ಶುರುವಾಗುತ್ತದೆ? ಯಾರು ನಿರ್ದೇಶಕರು? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇನ್ನು ತಲೈವಾ 173 ಚಿತ್ರವನ್ನು ರೆಡ್ ಜೈಂಟ್ ಸಂಸ್ಥೆ ವಿತರಣೆ ಮಾಡಲಿದೆ.


Click it and Unblock the Notifications











