ಸಮಂತಾ ತಂದೆ ವಿಧಿವಶ; "ಅಪ್ಪ ಮತ್ತೊಮ್ಮೆ ಭೇಟಿಯಾಗುವವರೆಗೆ" ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ
ಬಹುಭಾಷಾ ನಟಿ ಸಮಂತಾ ರುಥ್ ಪ್ರಭು ಬಾಳಲ್ಲಿ ಮತ್ತೊಂದು ದು:ಖದ ಸನ್ನಿವೇಶ ಎದುರಾಗಿದೆ. ನಟಿ ತಂದೆ ಜೋಸೆಫ್ ಪ್ರಭು ನಿಧನರಾಗಿರುವ ಸುದ್ದಿ ಹೊರಬಿದ್ದಿದೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಮಂತಾ ಭಾವನಾತ್ಮಕ ಪೋಸ್ಟ್ ಮೂಲಕ ವಿಷಯವನ್ನು ಹಂಚಿಕೊಂಡಿದ್ದಾರೆ.
ಸಮಂತಾ ರುಥ್ ಪ್ರಭು ತಂದೆ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಸೆಲೆಬ್ರೆಟಿಗಳು ನಟಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಜೋಸೆಫ್ ಪ್ರಭು ಅವರ ನಿಧನಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಕ್ಯಾಮರಾದಿಂದ ಸದಾ ದೂರವೇ ಇರುತ್ತಿದ್ದ ಜೋಸೆಫ್ ಪ್ರಭು ಮಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದರು.

ಸಮಂತಾ ರುಥ್ ಪ್ರಭು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ "ಮತ್ತೆ ನಾವು ಭೇಟಿಯಾಗುವವರೆಗೆ" ಎಂದು ಬರೆದು ಒಡೆದು ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಸಮಂತಾ ತಂದೆಯ ನಿಧನದ ಸುದ್ದಿ ಹೊರ ಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಚಿತ್ರರಂಗ ಸಂತಾಪವನ್ನು ಸೂಚಿಸಿದೆ.
ಸಮಂತಾ ತಂದೆಯ ದಿಢೀರ್ ನಿಧನದ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬೀಳಬೇಕಿದೆ. ಜೋಸೆಫ್ ಪ್ರಭು ಪತ್ನಿ ನಿನೆಟ್ ಪ್ರಭು ಹಾಗೂ ಸಮಂತಾ ಪ್ರಭು, ಜೊನಥನ್ ಪ್ರಭು, ಡೇವಿಡ್ ಪ್ರಭು ಮೂವರು ಮಕ್ಕಳನ್ನು ಅಗಲಿದ್ದಾರೆ. ಸಮಂತಾ ಸಿನಿಮಾ ರಂಗದಲ್ಲಿ ಜನಪ್ರಿಯತೆ ಗಳಿಸಿದ್ದರೆ, ಇತ್ತ ಇಬ್ಬರು ಸಹೋದರು ಚಿತ್ರರಂಗದಿಂದ ದೂರ ಉಳಿದಿದ್ದಾರೆ.
ಜೋಸೆಫ್ ಪ್ರಭು ಮಕ್ಕಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಅವರಿಗೆ ಸಿನಿಮಾ ಇಂಡಸ್ಟ್ರಿಯಿಂದ ಅಂತರವನ್ನು ಕಾಯ್ದುಕೊಂಡಿದ್ದರೂ, ಸಮಂತಾ ಜರ್ನಿಗೆ ಸದಾ ಸಲಹೆಗಳನ್ನು ನೀಡುತ್ತಿದ್ದರು. ಸಮಂತಾ ಭವಿಷ್ಯದ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದ್ದರು. ಸಮಂತಾ ವಿಚ್ಛೇದನ ಅವರಿಗೆ ಸಿಕ್ಕಾಪಟ್ಟೆ ನೋವು ಕೊಟ್ಟಿತ್ತು. ಅದನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹೊರ ಹಾಕಿದ್ದರು.

2021ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನವನ್ನು ಘೋಷಿಸಿದ ಬಳಿಕ ಜೋಸೆಫ್ ಪ್ರಭು ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಕಿಡಿ ಕಾರಿದ್ದರು. " ಒಂದಾನೊಂದು ಕಾಲದಲ್ಲಿ ಒಂದು ಕಥೆಯಿತ್ತು. ಅದು ಈಗ ಮಾಯವಾಗಿದೆ. ಈ ಕಾರಣಕ್ಕೆ ಹೊಸ ಕಥೆಯನ್ನು ಶುರುಮಾಡೋಣ" ಎಂದು ಪರೋಕ್ಷವಾಗಿ ಆಕ್ರೋಶವನ್ನು ಹೊರ ಹಾಕಿದ್ದರು. ಇಷ್ಟೇ ಅಲ್ಲದೆ ಮಗಳು ಎರಡನೇ ಮದುವೆಯಾಗಿ ಸುಖವಾಗಿ ಬಾಳಬೇಕು ಎಂದು ಬಯಸಿದ್ದರು. ಆದರೆ, ಅದು ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.
ಇನ್ನು ಸಮಂತಾ ಕೂಡ ಈ ಹಿಂದೆ ತಮ್ಮ ತಂದೆಯ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದರು. ತನ್ನ ತಂದೆ ಬಾಲ್ಯದಲ್ಲಿ ಸಖತ್ ಸ್ಟ್ರಿಕ್ಟ್ ಆಗಿದ್ದರು. ಮಗಳನ್ನು ಸ್ಟ್ರಾಂಗ್ ಆಗಿ ಬೆಳೆಸುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಕೆಲವೊಮ್ಮೆ ಇದು ಸಮಂತಾಗೆ ಬೇಸರ ಹುಟ್ಟಿಸುತ್ತಿತ್ತು ಎಂದಿದ್ದಾರೆ. ವಿಚ್ಛೇದನ, ಮಯೋಸೈಟಿಸ್ ಖಾಯಿಲೆ ಈಗ ತಂದೆಯನ್ನು ಕಳೆದುಕೊಂಡ ದು:ಖದಲ್ಲಿ ಇದ್ದಾರೆ. ಸಮಂತಾಗೆ ಸೆಲೆಬ್ರಿಟಿಗಳು ಹಾಗೂ ಆಪ್ತರು ಸಂತಾಪವನ್ನು ಸೂಚಿಸುತ್ತಿದ್ದಾರೆ.


Click it and Unblock the Notifications











