ಮಾಲಿವುಡ್, ಬಾಲಿವುಡ್ ಬಳಿಕ ಕಾಲಿವುಡ್‌ ಎಂಟ್ರಿ; ಕಮಲ್ ಹಾಸನ್ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಾಜ್‌ ಬಿ ಶೆಟ್ಟಿ ಈಗ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಮಮ್ಮುಟಿ ಜೊತೆ 'ಟರ್ಬೊ' ಚಿತ್ರದಲ್ಲಿ ರಾಜ್ ಅಬ್ಬರಿಸಿದ್ದರು. ಬಾಲಿವುಡ್‌ನಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಈಗ ತಮಿಳಿನಲ್ಲಿ ಕಮಲ್ ಹಾಸನ್ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಜ್‌ ಬಿ ಶೆಟ್ಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅವರ ಮುಂದಿನ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಸಿಗುತ್ತಿದೆ. ಇದೆಲ್ಲದರ ನಡುವೆ ತಮಿಳಿನ 'ಸೆಯೋನ್' ಚಿತ್ರತಂಡ ಸ್ಪೆಷಲ್ ಪೋಸ್ಟರ್ ಮೂಲಕ ಶೆಟ್ರಿಗೆ ಶುಭಾಶಯ ಕೋರಿದ್ದಾರೆ. ಶಿವಕಾರ್ತಿಕೇಯನ್ ನಟನೆಯ ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಶಿವಕುಮಾರ್ ಮುರುಗೇಶನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Seyon team welcomes Raj B Shetty Kannada actor joins shoot of Kamal Haasan s next

ಮಧುರೈ ಹಳ್ಳಿಯೊಂದರ ಹಿನ್ನೆಲೆಯಲ್ಲಿ 'ಸೆಯೋನ್' ಸಿನಿಮಾ ಮೂಡಿ ಬರಲಿದೆ. ಅಲ್ಲಿನ ಹಬ್ಬಗಳು, ಸಂಸ್ಕೃತಿ, ನಂಬಿಕೆ ಮತ್ತು ಸ್ಥಳೀಯ ಜಾನಪದ ವಿಚಾರಗಳು ಸಿನಿಮಾದಲ್ಲಿ ಇರಲಿದೆ. ಸುಬ್ರಮಣ್ಯ ಸ್ವಾಮಿಯ ಮತ್ತೊಂದು ಹೆಸರು 'ಸೆಯೋನ್'. ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳು ಚಿತ್ರದಲ್ಲಿ ಇರಲಿದೆ. ಭಾಗ್ಯಶ್ರೀ ಬ್ರೋಸ್ ನಾಯಕಿಯಾಗಿ ನಟಿಸುತ್ತಿದ್ದು ಅರುಳ್ ದಾಸ್, ಬಾಲ ಸರವಣನ್, ಸಿಂಗಂಪುಲಿ, ರಚೆಲ್ ರೆಬೆಕಾ ಚಿತ್ರದ ತಾರಾಗಣದಲ್ಲಿದ್ದಾರೆ.

ರಾಜ್‌ ಬಿ ಶೆಟ್ಟಿ ಪೋಸ್ಟರ್ ನೋಡ್ತಿದ್ರೆ ಸಿಕ್ಕಾಪಟ್ಟೆ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಾಗುತ್ತಿದೆ. ಸುತ್ತ ಬೆಂಕಿ.. ನಡುವೆ ಸಿಗರೇಟ್ ಸೇದುತ್ತಾ ನಿಂತ ಶೆಟ್ರ ಮಸುಕು ಮಸುಕಾದ ಪೋಸ್ಟರ್ ನೋಡಬಹುದು. 'ಸು ಫ್ರಂ ಸೋ' ಸಿನಿಮಾ ನಿರ್ಮಿಸಿ ನಟಿಸಿ ಗೆದ್ದ ರಾಜ್ ಇದೀಗ ಬೇರೆ ಬೇರೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೇ ವರ್ಷ ಬಂದ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಜಡೇಶ್ ಹಂಪಿ ನಿರ್ದೇಶನದ ಚಿತ್ರದಲ್ಲಿ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.

'ರಕ್ಕಸಪುರದೋಳ್' ಚಿತ್ರದ ಲೀಡ್‌ ರೋಲ್‌ನಲ್ಲಿ ಶೆಟ್ರು ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಸಿನಿಮಾ ಕೂಡ ಗೆದ್ದಿತ್ತು. ಇದೀಗ ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಜುಲೈ 24ರಂದು ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲೂ ಅವರ ಪಾತ್ರದ ಬಗ್ಗೆ ನಿರೀಕ್ಷೆಯಿದೆ. ನಟರಾಗಿ ರಾಜ್ ಹೆಚ್ಚು ಬ್ಯುಸಿಯಾಗುತ್ತಿದ್ದಾರೆ. ಅವರ ನಿರ್ದೇಶನದ ಸಿನಿಮಾ ನೋಡಲು ಅಭಿಮಾನಿಗಳು ಕಾಯುವಂತಾಗಿದೆ.

ಒಂದು ಮೊಟ್ಟೆಯ ಕಥೆ ಸಿನಿಮಾ ನಿರ್ದೇಶಿಸಿ ನಟಿಸಿ ರಾಜ್ ಸಕ್ಸಸ್ ಕಂಡಿದ್ದರು. 'ಗರುಡ ಗಮನ ವೃಷಣ ವಾಹನ' ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿತ್ತು. 'ಸ್ವಾತಿಮುತ್ತಿನ ಮಳೆಹನಿಯೆ' ಚಿತ್ರ ನಿರ್ದೇಶಿಸಿ ನಟಿಸಿದ್ದರು. ಬಳಿಕ ಯಾವುದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿಲ್ಲ. 'ಸು ಫ್ರಂ ಸೋ' ಸಿನಿಮಾ ಮೂಲಕ ನಿರ್ಮಾಪಕರು ಆಗಿದ್ದರು. ಮುಂದೆ ಅವರ ಬತ್ತಳಿಕೆಯಿಂದ ಮತ್ತಷ್ಟು ಸಿನಿಮಾಗಳನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಹೀರೊ ಆಗಿ ಮಾತ್ರವಲ್ಲದೇ ಪೋಷಕ ಪಾತ್ರಗಳತ್ತ ರಾಜ್ ಗಮನ ಹರಿಸಿದ್ದಾರೆ. ಒಳ್ಳೆ ಪಾತ್ರ ಆಗಿದ್ದರೆ ಸಾಕು. ಹೀರೊ ಆಗಿ ಎರಡೂವರೆ ಗಂಟೆ ತೆರೆಮೇಲೆ ಕಾಣಿಸಿಕೊಳ್ಳುವ ಆಸೆಯಿಲ್ಲ. ಇದ್ದಷ್ಟು ಹೊತ್ತು ಪ್ರೇಕ್ಷಕರನ್ನು ರಂಜಿಸಬೇಕು ಎನ್ನುವ ಲೆಕ್ಕಾಚಾರ ಅವರದ್ದು. ನಿಧಾನವಾಗಿ ಪರಭಾಷಾ ಫಿಲ್ಮ್ ಮೇಕರ್ಸ್ ಕಣ್ಣಿಗೆ ಶೆಟ್ರು ಬಿದ್ದಿದ್ದಾರೆ. ಹಾಗಾಗಿ ಹಿಂದಿ, ಮಲಯಾಳಂ ಬಳಿಕ ಈಗ ತಮಿಳು ಸಿನಿಮಾ ಅವಕಾಶ ಸಿಕ್ಕಿದೆ. ಅಕ್ಟೋಬರ್‌ನಲ್ಲಿ 'ಸೆಯೋನ್' ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಚಿತ್ರದಲ್ಲಿ ಅವರು ವಿಲನ್ ಆಗಿ ನಟಿಸಿರಬಹುದು ಎನ್ನಲಾಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X