ರಜನಿಕಾಂತ್ ಹಾಗೂ ಕಮಲ್ ಹಾಸನ್ ಮಲ್ಟಿಸ್ಟಾರರ್ ಚಿತ್ರದಲ್ಲಿ ನೀವು ನಟಿಸ್ತೀರಾ? ಶಿವಣ್ಣ ಪ್ರತಿಕ್ರಿಯೆ
ಶಿವರಾಜ್‌ಕುಮಾರ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರ್ತಿಸಿಕೊಂಡಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಅತಿಥಿ ಪಾತ್ರ ಮಾತ್ರವಲ್ಲ ಹೀರೊ ಆಗಿ ಕೂಡ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಶಿವಣ್ಣ ನಟನೆಯ 'ಪೆದ್ದಿ' ಸಿನಿಮಾ ಈ ವಾರ ಬಿಡುಗಡೆ ಆಗ್ತಿದೆ.
ತಮಿಳಿನಲ್ಲಿ ಶಿವಣ್ಣ ನಟನೆಯ ಮತ್ತೊಂದು ಸಿನಿಮಾ ಶುರುವಾಗಿದೆ. ಇನ್ನು ಹೆಸರಿಡದ ಚಿತ್ರದ ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ಮತ್ತೊಮ್ಮೆ ನರಸಿಂಹನಾಗಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಇನ್ನು ರಜನಿಕಾಂತ್ ಹಾಗೂ ಕಮಲ್ ಹಾಸನ್ ನಟನೆಯ ಮಲ್ಟಿಸ್ಟಾರರ್ ಚಿತ್ರದಲ್ಲಿ ನಟಿಸ್ತೀರಾ ಎನ್ನುವ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದಾರೆ. Cinema Express ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ದಶಕಗಳ ಬಳಿಕ ಕಮಲ್ ಹಾಸನ್ ಹಾಗೂ ರಜನಿಕಾಂತ್ ಒಟ್ಟಿಗೆ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ನೆಲ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಸಣ್ಣ ಪ್ರೋಮೊ ಸಮೇತ ಸಿನಿಮಾ ಘೋಷಣೆ ಆಗಿದೆ. ರೆಡ್‌ಜೈಂಟ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುವುದು ಖಚಿತವಾಗಿದೆ.
ರಜನಿಕಾಂತ್ ಹಾಗೂ ಕಮಲ್ ಅಂದ್ರೆ ಶಿವಣ್ಣಗೆ ಬಹಳ ಇಷ್ಟ. ಅವರಿಬ್ಬರ ದೊಡ್ಡ ಅಭಿಮಾನಿ ಶಿವಣ್ಣ. ಹಾಗಾಗಿ ಅವರಿಬ್ಬರ ಜೊತೆ ನಟಿಸೋ ಅವಕಾಶ ಸಿಕ್ಕರೆ ನಟಿಸ್ತೀರಾ ಎನ್ನುವ ಪ್ರಶ್ನೆಗೆ ಖಂಡಿತ ಎಂದು ಹೇಳಿದ್ದಾರೆ. "ದಶಕಗಳ ಬಳಿಕ ಅವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ. ಅದನ್ನು ತೆರೆಮೇಲೆ ನೋಡುವುದು ಅದ್ಭುತ. ನಾನು ಕೂಡ ಆ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದೀನಿ" ಎಂದು ಹೇಳಿದ್ದಾರೆ.
ಅವರಿಬ್ಬರ ಜೊತೆ ನೀವು ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ ಎನ್ನುವ ಮಾತಿಗೆ "ಇಬ್ಬರು ದಿಗ್ಗಜರ ನಡುವೆ ನಾನು ಹೋದರೆ ಚೆನ್ನಾಗಿರಲಿಲ್ಲ. ಸುಖಾಸುಮ್ಮನೆ ನನ್ನ ಪಾತ್ರ ಸೇರಿಸಿದ್ರೆ, ಚೆನ್ನಾಗಿರಲ್ಲ. ಇಬ್ಬರು ಸೂಪರ್ ಸ್ಟಾರ್ ನಡುವೆ ಸುಮ್ಮನೆ ಇನ್ನೊಬ್ರು ಬರಬೇಕು ಅಂದ್ರೆ ಅದಕ್ಕೆ ಏನಾದರೂ ಕಾರಣ ಇರಬೇಕು. ಎಲ್ಲಾ ಕೂಡಿ ಬರಬೇಕು, ನಿರ್ದೇಶಕ ನೆಲ್ಸನ್‌ಗೆ ಎಲ್ಲಾ ಗೊತ್ತು. ನಿಜಕ್ಕೂ ಅಂತಹ ಅವಕಾಶ ಸಿಕ್ಕರೆ ಅದಕ್ಕಿಂತ ಮತ್ತೇನುಬೇಕು" ಎಂದು ಹೇಳಿದ್ದಾರೆ.
ಕನ್ನಡದಲ್ಲಿ 'ಡ್ಯಾಡ್', '666 ಆಪರೇಷನ್ ಡ್ರೀಮ್ ಥಿಯೇಟರ್', 'ಬೇಲ್' ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಆಗಸ್ಟ್ ಕೊನೆ ವಾರದಲ್ಲಿ 'ಬೇಲ್' ಸಿನಿಮಾ ಬಿಡುಗಡೆ ಆಗುವುದಾಗಿ ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ 'ಜೈಲರ್'-2 ಸಿನಿಮಾ ಕೂಡ ತೆರೆಗೆ ಬರುವ ಸಾಧ್ಯತೆಯಿದೆ. ತೆಲುಗಿನಲ್ಲಿ 'ಪೆದ್ದಿ' ಜೊತೆಗೆ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದಾರೆ.
'ಪೆದ್ದಿ' ಚಿತ್ರದ ಗೌರ್ನಾಯ್ಡು ಪಾತ್ರ ಬಹಳ ವಿಶೇಷ ಎಂದು ಶಿವಣ್ಣ ಹೇಳಿದ್ದಾರೆ. ರಾಮ್‌ಚರಣ್ ನೋಡಿದರೆ ನನ್ನ ತಮ್ಮನನ್ನು ನೋಡಿದಂತೆ ಅನಿಸುತ್ತದೆ. ನನ್ನ ತಮ್ಮನ ಜೊತೆ ನಟಿಸಿದಂತ ಭಾಸವಾಗುತ್ತದೆ. ಬುಚ್ಚಿಬಾಬು ಒಳ್ಳೆ ಕಥೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರಕ್ಕೂ ಬಹಳ ಮಹತ್ವ ಇದೆ ಎಂದು ತಿಳಿಸಿದ್ದಾರೆ. ಚಿತ್ರದಲ್ಲಿ ರಾಮ್‌ಚರಣ್ ಕುಸ್ತಿ ಪೈಲ್ವಾನ್ ಪೆದ್ದಿಬಾಬು ಆಗಿ ನಟಿಸಿದ್ದು ಆತನ ಗುರುವಿನ ಪಾತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದಾರೆ.


Click it and Unblock the Notifications