"ಕರ್ಮ ಬಡ್ಡಿ ಸಮೇತ ಮುಂದೊಂದು ದಿನ ಬರುತ್ತೆ"; ಧನುಷ್ ಡಿವೋರ್ಸ್‌ಗೆ ನಯನತಾರಾ ಟೀಕೆ?
ಚೆನ್ನೈ: ಧನುಷ್ ಹಾಗೂ ನಯನತಾರಾ ವಿವಾದ ಸದ್ಯಕ್ಕೆ ಬಗೆ ಹರಿಯುವ ಹಾಗೆ ಕಾಣಿಸುತ್ತಿಲ್ಲ. ಇಬ್ಬರೂ ತಮ್ಮ ನಡುವಿನ ವೈಮನಸ್ಸನ್ನು ವೈಯಕ್ತಿವಾಗಿ ತೆಗೆದುಕೊಂಡಂತೆ ಇದೆ. ಇತ್ತೀಚೆಗೆ ಧನುಷ್ ವಿರುದ್ಧ ನಯನತಾರಾ ಬಹಿರಂಗವಾಗಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಗೊತ್ತೇ ಇದೆ. ಅಲ್ಲಿಂದ ಈ ವೈಮನಸ್ಸು ಬೆಳೆಯುತ್ತಲೇ ಇದೆ.
ಇನ್ನೊಂದು ಕಡೆ ಧನುಷ್ ವೈಯಕ್ತಿಕ ವಿಚಾರಕ್ಕೂ ಕೂಡ ಸುದ್ದಿಯಲ್ಲಿ ಇದ್ದರು. ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಇಬ್ಬರು ಕೆಲವು ವರ್ಷಗಳ ಹಿಂದೆ ಬೇರೆಯಾಗಿದ್ದರು. ಹಿರಿಯರರು ಇವರನ್ನು ಒಂದು ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದರೂ ಅದೂ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಧನುಷ್ ಹಾಗೂ ಐಶ್ವರ್ಯಾಗೆ ಕೋರ್ಟ್ ವಿಚ್ಛೇದನವನ್ನು ಮಂಜೂರು ಮಾಡಿತ್ತು.

ಧನುಷ್ ಡಿವೋರ್ಸ್ ಮಂಜೂರಾದ ಬೆನ್ನಲ್ಲೇ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಪೋಸ್ಟ್ ಧನುಷ್ ಎದುರು ಇಟ್ಟುಕೊಂಡೇ ಮಾಡಿದ್ದು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ನಯನತಾರಾ ಪೋಸ್ಟ್‌ನಲ್ಲಿ ಅಂತಹದ್ದೇನಿದೆ? ವಿಚ್ಛೇದನದ ವಿಷಯವನ್ನು ಇಟ್ಟುಕೊಂಡೇ ಟಾಂಗ್ ಕೊಟ್ಟರೇ?
ಚಿತ್ರರಂಗದಲ್ಲಿ ಬೆಳೆಯುತ್ತಿರುವ ಕಾಲದಲ್ಲಿ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಇಬ್ಬರೂ 'ಯಾರಡಿ ನೀ ಮೋಹಿನಿ' ಅನ್ನುವ ಸಿನಿಮಾದಲ್ಲಿಯೂ ನಟಿಸಿದ್ದರು. ಅಲ್ಲಿಂದ ಇವರ ಸ್ನೇಹ ಉತ್ತಮವಾಗಿಯೇ ಇತ್ತು. ಆದರೆ, 'ನಾನುಂ ರೌಡಿ ಧನ್' ಸಿನಿಮಾದ ಬಳಿಕ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿದೆ. ಒಬ್ಬರನ್ನು ಒಬ್ಬರಿಗೆ ಆಗುತ್ತಿಲ್ಲ. ಆ ಮಟ್ಟಿಗೆ ದ್ವೇಷವನ್ನ ಕಾರುತ್ತಿದ್ದಾರೆ.
ಇದು ಸ್ಪೋಟಗೊಂಡಿದ್ದು ಇತ್ತೀಚೆಗೆ. ನಯನತಾರಾ ತಮ್ಮ ಕುರಿತಾದ ಡಾಕ್ಯೂಮೆಂಟರಿಯನ್ನು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಮಾಡುವುದಕ್ಕೆ ಮುಂದಾದಾಗ ಧನುಷ್ ತಡೆಯೊಡ್ಡಿದ್ದರು. ನಯನತಾರಾ ಅವರ ಧನುಷ್ ನಿರ್ಮಾಣ ಮಾಡಿದ 'ನಾನು ರೌಡಿ ಧನ್' ಚಿತ್ರದ ದೃಶ್ಯಗಳನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಿರಲಿಲ್ಲ. 37 ಸೆಕೆಂಡುಗಳ ತೆರೆ ಹಿಂದಿನ ದೃಶ್ಯವನ್ನು ಬಳಸಿಕೊಂಡಿದ್ದಕ್ಕೆ 10 ಕೋಟಿ ರೂಪಾಯಿ ಪರಿಹಾರ ಕೇಳಿದ್ದರು. ಇದನ್ನು ಖಂಡಿಸಿ ನಯನತಾರಾ ಧನುಷ್ ವಿರುದ್ಧ ಬಹಿರಂಗವಾಗಿ ಪೋಸ್ಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.

ಈ ಪೋಸ್ಟ್ ಬಳಿಕ ನಯನತಾರಾ, ವಿಘ್ನೇಶ್ ಶಿವನ್ ಹಾಗೂ ನೆಟ್‌ಫ್ಲಿಕ್ಸ್ ವಿರುದ್ಧ ಧನುಷ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೊಂದು ಕಡೆ ನಡೆಯುತ್ತಿರುವಾಗಲೇ ಧನಷ್ ಹಾಗೂ ನಯನತಾರಾ ತಮಿಳು ನಿರ್ಮಾಪಕರ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಬಹುಶ: ಇಲ್ಲಿಗೆ ದ್ವೇಷವನ್ನು ಮರೆತು ಮತ್ತೆ ಒಂದಾಗಬಹುದು ಎಂದು ನೆಟ್ಟಿಗರು ನಿರೀಕ್ಷೆಯನ್ನು ಮಾಡಿದ್ದರು. ಆದರೆ, ಹಾಗಾಗಲಿಲ್ಲ.
ಕೆಲವೇ ದಿನಗಳ ಹಿಂದಷ್ಟೇ ಧನುಷ್ ಹಾಗೂ ಐಶ್ವರ್ಯಾ ಇಬ್ಬರಿಗೂ ಕೋರ್ಟ್ ವಿಚ್ಛೇದನ ಮಂಜೂರು ಮಾಡಿತ್ತು. ಈ ಬೆನ್ನಲ್ಲೇ ನಯನತಾರಾ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ನಿಮ್ಮ ಸುಳ್ಳುಗಳಿಂದ ಯಾವಾಗ ಇನ್ನೊಬ್ಬರ ಜೀವನವನ್ನು ಹಾಳು ಮಾಡಿದರೆ, ಅದನ್ನು ಸಾಲ ಎಂದು ಪರಿಗಣಿಸಿ. ಅದು ಬಡ್ಡಿ ಸಮೇತ ನಿಮ್ಮ ಬಳಿಗೆ ಬರುತ್ತೆ." ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು ಧನುಷ್ ಅವರಿಗೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆಂದು ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.


Click it and Unblock the Notifications










