ರಜನಿಕಾಂತ್, ಕಮಲ್ ಚಿತ್ರದಿಂದ ಹೊರಬಂದಿದ್ದೇಕೆ? ಕೊನೆಗೂ ಮೌನ ಮುರಿದ ಖುಷ್ಬೂ ಪತಿ
ದಶಕಗಳ ಬಳಿಕ ಕಮಲ್ ಹಾಸನ್ ಹಾಗೂ ರಜನಿಕಾಂತ್ ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ತಲೈವಾ ನಟನೆಯ 173ನೇ ಚಿತ್ರವನ್ನು ಕಮಲ್ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದು ಮಲ್ಟಿಸ್ಟಾರರ್ ಚಿತ್ರದಲ್ಲಿ ತೆರೆಹಂಚಿಕೊಳ್ಳಲಿದ್ದಾರೆ. ಆದರೆ ರಜನಿಕಾಂತ್ ನಟನೆಯ ಚಿತ್ರಕ್ಕೆ ಪದೇ ಪದೆ ಸಮಸ್ಯೆ ಎದುರಾಗುತ್ತಿದೆ.
ತಲೈವಾ 173 ಚಿತ್ರವನ್ನು ಸುಂದರ್ ಸಿ ನಿರ್ದೇಶನ ಮಾಡಬೇಕಿತ್ತು. ಸಿನಿಮಾ ಅಧಿಕೃತವಾಗಿ ಘೋಷಣೆ ಆಗಿತ್ತು. ಆದರೆ ಒಂದೇ ವಾರದಲ್ಲಿ ಭಿನ್ನಾಭಿಪ್ರಾಯಗಳಿಂದ ಸುಂದರ್ ಸಿನಿಮಾ ಬಿಟ್ಟು ಹೊರ ಬಂದಿದ್ದರು. ಸುದೀರ್ಘವಾಗಿ ಪೋಸ್ಟ್ ಮಾಡಿ ಈ ಬಗ್ಗೆ ಮ ಮಾಹಿತಿ ಹಂಚಿಕೊಂಡಿದ್ದರು. ಆದರೆ ಭಿನ್ನಾಭಿಪ್ರಾಯಕ್ಕೆ ಕಾರಣ ತಿಳಿಸಿರಲಿಲ್ಲ. ಬಹಳ ದಿನಗಳ ಬಳಿಕ ಈ ಬಗ್ಗೆ ಅವರು ಮಾತನಾಡಿದ್ದಾರೆ. Behindwoods TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕಳೆದ 15-16 ವರ್ಷಗಳಲ್ಲಿ ನನ್ನಿಷ್ಟದಂತೆ ಸಿನಿಮಾಗಳನ್ನು ಮಾಡುತ್ತಾ ಬಂದೆ. ಆದರೆ ಈ ಸಿನಿಮಾ ಬಗ್ಗೆ ನನಗೆ ಬಹಳ ಒತ್ತಡ ಇತ್ತು ಎಂದು ಸುಂದರ್ ಸಿ ಹೇಳಿದ್ದಾರೆ. "ನನಗೆ ಮಾಡುವ ಕಥೆಗಳು ಕಮರ್ಷಿಯಲ್ ಆಗಿ ಚೆನ್ನಾಗಿರುತ್ತದೆ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ, ಸಿನಿಮಾ ಗೆಲ್ಲುತ್ತದೆ, ಅಂತ ಸಿನಿಮಾಗಳನ್ನು ಮಾಡ್ತಿನಿ. ಆದ್ರೆ ಆ ಕಥೆಯನ್ನು ಒಬ್ಬರಿಗೆ ಹೇಳಿ ಒಪ್ಪಿಸುವಂತಹ ಸಾಮರ್ಥ್ಯ ನನಗೆ ಇಲ್ಲ ಅನ್ನಿಸುತ್ತೆ. ನನಗೆ ಕಥೆ ಹೇಳಲು ಬರಲ್ಲ.. ಅದು ನನ್ನ ನ್ಯೂನ್ಯತೆ.. ನನ್ನ ಸೂಪರ್ ಹಿಟ್ ಸಿನಿಮಾ ಕಥೆ ನಿಮಗೆ ಹೇಳಿದ್ರು, ನಿಮಗೆ ಅರ್ಥವಾಗಲ್ಲ. ನನಗೆ ಯಾರಾದರೂ ಬಂದು ಸಲಹೆ ಕೊಟ್ಟರೆ ಕಾಂಪ್ರಮೈಸ್ ಆಗಿ ಬಿಡ್ತೀನಿ.. ಹಾಗಾಗಿ ನನಗೆ ಬೇಕಾದಂತ ಸಿನಿಮಾ ಮಾಡ್ತಿದ್ದೆ.. ಆದ್ರೆ ಇಷ್ಟು ದೊಡ್ಡ ಸಿನಿಮಾ ಮಾಡುವಾಗ ನನ್ನಿಷ್ಟಕ್ಕೆ ಮಾಡೋಕೆ ಆಗಲ್ಲ.. ಹಾಗಾಗಿ ಬಹಳ ಒತ್ತಡ ಎನಿಸಿ.. ತಲೈವರ್ 173 ಚಿತ್ರದಿಂದ ಹೊರಬಂದೆ" ಎಂದಿದ್ದಾರೆ.
ನಾನು ರಜನಿಕಾಂತ್ ಸರ್ ಜೊತೆ ಈಗಾಗಲೇ ಸಿನಿಮಾ ಮಾಡಿದ್ದೀನಿ. ಆ ಬಳಿಕ ಕೂಡ ಒಂದಷ್ಟು ಸಿನಿಮಾಗಳನ್ನು ಮಾಡಬೇಕಿತ್ತು. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ ಎಂದು ಸುಂದರ್ ಸಿ ತಿಳಿಸಿದ್ದಾರೆ. "ಅರುಣಾಚಲಂ ಸಿನಿಮಾ ಮಾಡುವಾಗ ನಾನು, ರಜನಿ ಸರ್ ಪ್ರತಿದಿನ ಒಟ್ಟಿಗೆ ಕೂತು ಮಾತನಾಡುತ್ತಿದ್ದೆವು.. ಈಗ 30 ವರ್ಷ ಕಳೆದಿದೆ. ಈಗ ನಮ್ಮಿಬ್ಬರ ಸಿನಿಮಾ ಮಾಡುವ ಶೈಲಿ ಬದಲಾಗಿದೆ. ಕಮಲ್ ಸರ್ ಚಿತ್ರದ ಕ್ರಿಯೇಟಿವ್ ವಿಚಾರದಲ್ಲಿ ಮೂಗು ತೂರಿಸಲಿಲ್ಲ. ರಜನಿ ಸರ್ ಕೂಡ ಮುಂದಿನ ಸಿನಿಮಾ ಮಾಡೋಣ ಅಂತಾರೆ.. ಅವರಿಬ್ಬರಿಂದ ಯಾವುದೇ ಸಮಸ್ಯೆ ಆಗಲಿಲ್ಲ" ಎಂದು ವಿವರಿಸಿದ್ದಾರೆ.
ಅವತ್ತು ರಜನಿ ಸರ್ ಬಳಿ ಈ ಬಗ್ಗೆ ಮಾತನಾಡಿ ಪರಸ್ಪರ ಒಪ್ಪಿಗೆ ಮೇರೆಗೆ ನಾನು ಚಿತ್ರದಿಂದ ಹೊರಬರುವುದಾಗಿ ಘೋಷಣೆ ಮಾಡಿದ್ದೆ.. "ರಜನಿಕಾಂತ್ ನಟನೆಯಲ್ಲಿ ಸುಂದರ್ ಸಿ ನಿರ್ದೇಶನದ ಸಿನಿಮಾ ಆಗಬೇಕಿತ್ತು.. ನನ್ನದೇ ಶೈಲಿಯ ಕಥೆ ಅದು.. ರಜನಿ ಸರ್ ಇತ್ತೀಚೆಗೆ ಗಂಭೀರ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಒಂದು ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾ ಮಾಡೋಣ ಅಂದುಕೊಂಡು ಈ ಪ್ರಾಜೆಕ್ಟ್ ಆರಂಭಿಸಿದ್ದು" ಎಂದು ಸುಂದರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಸುಂದರ್ ಸಿ ಹೊರ ಬಂದ ಬಳಿಕ ತಲೈವಾ 173 ಚಿತ್ರಕ್ಕೆ ಹೊಸ ನಿರ್ದೇಶಕರು ಆಯ್ಕೆ ಆಗಿಲ್ಲ. ಸಿಬಿ ಚಕ್ರವರ್ತಿ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗಿತ್ತು. ಕಾರಣಾಂತರಗಳಿಂದ ಅವರು ಆಕ್ಷನ್ ಕಟ್ ಹೇಳುವುದು ಅನುಮಾನ ಎನ್ನಲಾಗ್ತಿದೆ. 'ಮೊರೈ ಮಾಮನ್' ಎಂಬ ಸಿನಿಮಾ ಮೂಲಕ ಸುಂದರ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಬಳಿಕ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಅರಣ್ಮನೆ' ಸರಣಿ ಚಿತ್ರಗಳನ್ನು ಕಟ್ಟಿಕೊಟ್ಟು ಗೆದ್ದಿದ್ದಾರೆ. ನಟಿ ಖುಷ್ಬೂ ಅವರನ್ನು ಮದುವೆ ಆಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


Click it and Unblock the Notifications