Breaking News: ಒಂದೇ ವಾರಕ್ಕೆ ನಿಂತು ಹೋಯ್ತು ರಜನಿಕಾಂತ್ ಹೊಸ ಸಿನಿಮಾ; ನಿರ್ದೇಶಕ ಕ್ಷಮೆ
ನೂರಾರು ಕೋಟಿ ಸುರಿದು ಸಿನಿಮಾ ಮಾಡುವುದು ಅಷ್ಟು ಸುಲಭ ಅಲ್ಲ. ಇನ್ನು ದೊಡ್ಡ ನಿರ್ದೇಶಕ, ನಟ ಒಟ್ಟಿಗೆ ಕೈಜೋಡಿಸಿದರೆ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹುಟ್ಟಾಕುತ್ತದೆ. ಇತ್ತೀಚೆಗೆ ರಜನಿಕಾಂತ್ ತಮ್ಮ 173ನೇ ಸಿನಿಮಾವನ್ನು ಇತ್ತೀಚೆಗೆ ಘೋಷಿಸಿದ್ದರು. ಆದರೆ ಒಂದೇ ವಾರಕ್ಕೆ ನಿರ್ದೇಶಕ ಸಿನಿಮಾದಿಂದ ಹೊರಬಂದಿದ್ದಾರೆ.
ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟನೆಯ ಚಿತ್ರಕ್ಕೆ ಸುಂದರ್ ಸಿ. ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಅವರು ತಲೈವಾ 173 ಸಿನಿಮಾದಿಂದ ಹೊರ ಬಂದಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ಯಾವುದೇ ಕಾರಣ ಹೇಳದೇ ಇಂತಾದೊಂದು ಅವಕಾಶ ಮಿಸ್ ಮಾಡಿಕೊಳ್ಳುತ್ತಿದ್ದೀನಿ, ದಯವಿಟ್ಟು ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ತಿಳಿಸಿದ್ದಾರೆ.

ಖ್ಯಾತ ನಟಿ ಖುಷ್ಬೂ ಪತಿಯಾಗಿರುವ ಸುಂದರ್ ಸಿ. ಈ ಹಿಂದೆ ಕೆಲ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ರಜನಿಕಾಂತ್ ನಟನೆಯ 'ಅರುಣಾಚಲಂ' ಚಿತ್ರವನ್ನು ದಶಕಗಳ ಹಿಂದೆ ಕಟ್ಟಿಕೊಟ್ಟು ಗೆದ್ದಿದ್ದರು. ಹಾಗಾಗಿ ಸಹಜವಾಗಿಯೇ ತಲೈವಾ 173 ಚಿತ್ರದ ಬಗ್ಗೆ ನಿರೀಕ್ಷೆ ಮೂಡಿತ್ತು. ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಅಧಿಕೃತವಾಗಿ ಸಿನಿಮಾ ಘೋಷಿಸಿದ್ದರು.
"ಭಾರವಾದ ಹೃದಯದಿಂದ ನಾನು ನಿಮ್ಮೊಂದಿಗೆ ಕೆಲವು ಪ್ರಮುಖ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅನಿರೀಕ್ಷಿತ ಮತ್ತು ಅನಿವಾರ್ಯ ಸಂದರ್ಭಗಳಿಂದಾಗಿ, ಪ್ರತಿಷ್ಠಿತ ತಲೈವರ್ 173 ಸಿನಿಮಾದಿಂದ ನಾನು ಹಿಂದೆ ಸರಿಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಸುಂದರ್ ಸಿ ತಮ್ಮ ಪತ್ರ ಆರಂಭಿಸಿದ್ದಾರೆ.

ಬಳಿಕ ಮಾತು ಮುಂದುವೆರೆಸಿ "ದಂತಕಥೆಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ಸಿನಿಮಾ ನಿಜಕ್ಕೂ ನನಗೆ ಒಂದು ಕನಸು ನನಸಾದಂತೆ ಆಗಿತ್ತು. ಜೀವನದಲ್ಲಿ, ನಮ್ಮ ಕನಸುಗಳಿಂದ ಭಿನ್ನವಾಗಿದ್ದರೂ ಸಹ, ನಮಗಾಗಿ ನಿಗದಿಪಡಿಸಿದ ಮಾರ್ಗವನ್ನು ನಾವು ಅನುಸರಿಸಬೇಕಾದ ಕ್ಷಣಗಳಿವೆ. ಇವರಿಬ್ಬರ ಒಡನಾಟವು ಬಹಳ ಹಿಂದಿನದು. ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವದಿಂದ ಕಾಣುತ್ತೇನೆ. ಕಳೆದ ಕೆಲವು ದಿನಗಳಿಂದ ನಾವು ಹಂಚಿಕೊಂಡ ವಿಶೇಷ ಕ್ಷಣಗಳನ್ನು ನಾನು ಶಾಶ್ವತವಾಗಿ ಪಾಲಿಸುತ್ತೇನೆ. ಅವರು ನನಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದ್ದಾರೆ. ನಾನು ಈ ಅವಕಾಶದಿಂದ ಹಿಂದೆ ಸರಿಯುತ್ತಿದ್ದರೂ, ನಾನು ಅವರ ಮಾರ್ಗದರ್ಶನವನ್ನು ಪಡೆಯುತ್ತಲೇ ಇರುತ್ತೇನೆ. ಈ ಮಹೋನ್ನತ ಕೃತಿಗಾಗಿ ನನ್ನನ್ನು ಪರಿಗಣಿಸಿದ್ದಕ್ಕಾಗಿ ಅವರಿಬ್ಬರಿಗೂ ಧನ್ಯವಾದಗಳು" ಎಂದು ಸುಂದರ್ ಸಿ. ತಿಳಿಸಿದ್ದಾರೆ.
ಇಂತಾದೊಂದು ಚಿತ್ರಕ್ಕಾಗಿ ಕಾಯುತ್ತಿದ್ದವರಿಗೆ ಈ ಸುದ್ದಿ ನಿರಾಸೆ ಮೂಡಿಸುತ್ತಿರುವುದಕ್ಕೆ ಕ್ಷಮಿಸಿ ಎಂದು ನಿರ್ದೇಶಕ ಸುಂದರ್ ಸಿ. ಮನವಿ ಮಾಡಿದ್ದಾರೆ. ಒಂದೇ ವಾರಕ್ಕೆ ನಿರ್ದೇಶಕ ಚಿತ್ರದಿಂದ ಹೊರಬರಲು ಕಾರಣ ಏನು? ಎನ್ನುವ ಚರ್ಚೆ ಶುರುವಾಗಿದೆ. ಇದೇನು ಸಣ್ಣ ಸಿನಿಮಾ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಗುವುದೇ ಕಷ್ಟ. ಹಾಗಿರುವಾಗ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರನ್ನೇ ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳುವಂತೆ ರಜನಿಕಾಂತ್ ಹೇಳಿದ್ದರಂತೆ, ಅದಕ್ಕೆ ಸುಂದರ್ ಸಿ ಒಪ್ಪಲಿಲ್ಲ. ಹೀಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಶುರುವಾಗಿ ಸಿನಿಮಾದಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸದ್ಯ ಸುಂದರ್ ಸಿ. 'ಮೂಕುಟ್ಟಿ ಅಮ್ಮನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕನ್ನಡ ನಟ ದುನಿಯಾ ವಿಜಯ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇನ್ನು ಪತಿ ಸುಂದರ್ ಸಿ. ಬರೆದ ಬಹಿರಂಗ ಪತ್ರವನ್ನು ನಟಿ ಖುಷ್ಬು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಮಾಹಿತಿ ಸಿಗಬೇಕಿದೆ. ಒಟ್ಟಾರೆ ತಲೈವಾ 173 ಚಿತ್ರಕ್ಕೆ ಸುಂದರ್ ಸಿ. ಆಕ್ಷನ್ ಕಟ್ ಹೇಳುವುದು ಅನುಮಾನ ಎನ್ನುವಂತಾಗಿದೆ. ಅವರ ಬದಲು ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಬಹುದು ಎನ್ನುವ ಊಹಾಪೋಹ ಶುರುವಾಗಿದೆ.


Click it and Unblock the Notifications











