ದಿಢೀರನೇ ಆಸ್ಪತ್ರೆಗೆ ದಾಖಲಾದ ರಜನಿಕಾಂತ್: ಈಗ ಹೇಗಿದೆ ಆರೋಗ್ಯ ಸ್ಥಿತಿ?
ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ದಿಢೀರನೇ ಏರುಪೇರಾಗಿದೆ. ನಿನ್ನೆ (ಸೆಪ್ಟೆಂಬರ್ 30) ಮಧ್ಯ ರಾತ್ರಿ ದಿಢೀರನೇ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ವರದಿಯಾಗಿದೆ.
ರಜನಿಕಾಂತ್ ಹೃದಯದ ಸಮಸ್ಯೆ ಎದುರಾಗಿರಬಹುದು ಎಂದು ಅಂದಾಜಿಸಲಾಗಿದೆ. ಚೆನ್ನೈನ ಅಪೋಲೊ ಆಸ್ಪತ್ರೆಯ ವೈದ್ಯ ಡಾ. ಸಾಯಿ ಸತೀಶ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ರಜನಿಕಾಂತ್ ಕಿಬ್ಬೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಅಪೋಲೊ ಆಸ್ಪತ್ರೆಯ ವೈದ್ಯರು ಸ್ಟಂಟ್ ಅಳವಡಿಸಿದ್ದಾರೆ ಎನ್ನಲಾಗಿದೆ. ಇನ್ನೂ ಎರಡರಿಂದ ಮೂರು ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಗಿ ಬರಬಹುದು. ಆತಂಕ ಪಡುವ ಅಗತ್ಯವಿಲ್ಲ ಎಂದು ವರದಿಯಾಗಿದೆ.

73 ವರ್ಷದ ನಟ ರಜನಿಕಾಂತ್ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಸದ್ಯ ವೈದ್ಯರು ರಜನಿಯ ಆರೋಗ್ಯದ ಬಗ್ಗೆ ಇನ್ನೂ ಮಾಹಿತಿಯನ್ನು ನೀಡಿಲ್ಲ. ಆದರೆ, ಇಂದು (ಅಕ್ಟೋಬರ್ 1) ಬೆಳಗ್ಗೆ ಅಪೋಲೊ ಆಸ್ಪತ್ರೆಯ ಕ್ಯಾತ್ ಲ್ಯಾಬ್‌ನಲ್ಲಿ ರಜನಿಕಾಂತ್‌ಗೆ ಎಲೆಕ್ಟಿವ್ ಕಾರ್ಡಿಯಾಕ್ ಚಿಕಿತ್ಸೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆ (ಸೆಪ್ಟೆಂಬರ್ 30) ಮಧ್ಯ ರಾತ್ರಿ ರಜನಿಕಾಂತ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ದಿಢೀರನೇ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯ ರಜನಿಯ ವೈದ್ಯಕೀಯ ತಪಾಸಣೆ ಮಾಡಿದ್ದಾರೆ ಎಂದು ಡಿಟಿ ಎಕ್ಸ್‌ಟ್ ವರದಿ ಮಾಡಿದೆ. ವೈದ್ಯರು ಸೂಪರ್‌ಸ್ಟಾರ್ ಅನ್ನು ತೀವ್ರ ನಿಗಾವಹಿಸಿದ್ದಾರೆ ಎನ್ನಲಾಗಿದೆ.
ಸದ್ಯ ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ. ರಜನಿ ನಿನ್ನೆ (ಸೆಪ್ಟೆಂಬರ್ 30) ಲೋಕೇಶ್ ಕನಗರಾಜ್ ನಿರ್ದೇಶನದ 'ಕೂಲಿ' ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿಯೇ ರಜನಿ ಆರೋಗ್ಯ ತಪ್ಪಿದ್ದರು ಎಂದೂ ಡಿಟಿ ನೆಕ್ಸ್ಟ್ ವರದಿ ಮಾಡಿದೆ. ಸದ್ಯ ಸೂಪರ್‌ಸ್ಟಾರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ವೈದ್ಯರು ರಜನಿ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಬೆಳಗ್ಗೆ 6 ಗಂಟೆಗೆ ವೈದ್ಯಕೀಯ ಪರೀಕ್ಷೆ ಆರಂಭ ಆಗಲಿವೆ. ಆ ಬಳಿಕ ಮುಂದೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತೀರ್ಮಾನ ಮಾಡಲಿದ್ದಾರೆ. ರಜನಿ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಇಂದು (ಅಕ್ಟೋಬರ್ 1) ರಾತ್ರಿ ಅಥವಾ ನಾಳೆ (ಅಕ್ಟೋಬರ್ 2) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ರಜನಿಕಾಂತ್ ಪತ್ನಿ ಲತಾ ಕೂಡ ಇದು ರೆಗ್ಯೂಲರ್ ಚೆಕಪ್ ಎಂದು ಮಾಹಿತಿ ನೀಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಜನಿಕಾಂತ್ ನಟಿಸಿದ 170ನೇ ಸಿನಿಮಾ 'ವೆಟ್ಟೈಯಾನ್' ಬಿಡುಗಡೆಗೆ ಇನ್ನು ಕೇವಲ 10 ದಿನಗಳು ಇರುವಾಗಲೇ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿಜೆ ಜ್ಞಾನವೇಲು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಇದೇ ಅಕ್ಟೋಬರ್ 10ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.
ಇನ್ನು 2020ರಲ್ಲೂ ರಜನಿಕಾಂತ್ ಇದೇ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚೆನ್ನೈನ ಇದೇ ಆಸ್ಪತ್ರೆಯಲ್ಲಿ ರಜನಿಕಾಂತ್ ಇಂತಹದ್ದೇ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ತೆರೆಕಂಡ ರಜನಿಕಾಂತ್ ಸಿನಿಮಾ 'ಜೈಲರ್' ಬಾಕ್ಸಾಫೀಸ್‌ನಲ್ಲಿ ಮೆಗಾ ಸಕ್ಸಸ್ ಎಂದು ಸಾಬೀತಾಗಿತ್ತು. ಬಾಕ್ಸಾಫೀಸ್‌ನಲ್ಲಿ ಸುಮಾರು 650 ರಿಂದ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಯಶಸ್ಸಿನ ಅಲೆಯಲ್ಲಿದ್ದ ರಜನಿಕಾಂತ್ 'ವೆಟ್ಟೈಯಾನ್' ಸಿನಿಮಾ ಬಿಡುಗಡೆಯ ಉತ್ಸಾಹದಲ್ಲಿ ಇದ್ದಾರೆ.


Click it and Unblock the Notifications











