ಬಿಡುಗಡೆಗೂ ಮುನ್ನವೇ ಮುಂಬೈನಲ್ಲಿ ರಜನಿಕಾಂತ್ 'ಕೂಲಿ' ನೋಡಿದ ಭೂಪ: ಫೋಟೋ ಹಾಕಿ ರಿವ್ಯೂ.. ಮಾಸ್ ಬ್ಲಾಸ್ಟರ್ ಅಂತೆ
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೂಲಿ' ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಆಗಸ್ಟ್ 14ರಂದು ವಿಶ್ವದಾದ್ಯಂತ ಬಿಡುಗಡೆ ಸಜ್ಜಾಗಿದೆ. ರಜನಿಕಾಂತ್ ಸಿನಿಮಾ ಅಂದರೆ ಒಂದು ಲೆವೆಲ್‌ಗೆ ಕ್ರೇಜ್ ಅಂತೂ ಇದ್ದೇ ಇರುತ್ತೆ. ತಲೈವಾ ಸ್ಟೈಲ್, ಆಕ್ಷನ್ ನೋಡುವುದಕ್ಕೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಇನ್ನು ರಿಲೀಸ್ ದಿನವಂತೂ ಕಾಲಿಡುವುದಕ್ಕೆ ಜಾಗ ಇರೋದಿಲ್ಲ. ಆ ಮಟ್ಟಿಗೆ ಕ್ರೇಜ್ ಇರುತ್ತೆ.
ಅದೇ ಏನಾದರೂ ಸಿನಿಮಾ ಚೆನ್ನಾಗಿ ಅಲ್ಲ ಅಂದರೆ ಮುಗಿದೇ ಹೋಯ್ತು. ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಆದರೆ, 'ಕೂಲಿ' ಬಿಡುಗಡೆಗೂ ಮುನ್ನವೇ ಜೋರಾಗಿ ಸದ್ದು ಮಾಡುತ್ತಿದೆ. ಅದರಲ್ಲೂ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದರಿಂದ ಸಿನಿಮಾಗೂ ಬೇಡಿಕೆ ಹೆಚ್ಚಾಗಿದೆ. ಈ ಮಧ್ಯೆ ಮುಂಬೈನಲ್ಲಿ ರಜನಿ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಇತ್ತು ಅನ್ನೋದು ಸುದ್ದಿ ಬೇರೆ ಓಡಾಡುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ರಜನಿ ಸಿನಿಮಾ ಸ್ಪೆಷಲ್ ಸ್ಕ್ರೀನ್ ನೋಡಿದ್ದಾಗಿ ಬರೆದುಕೊಂಡಿದ್ದಾರೆ. ಮುಂಬೈನಲ್ಲಿ 'ಕೂಲಿ' ಸಿನಿಮಾದ ಹಿಂದಿ ವರ್ಷನ್ ಸ್ಪೆಷಲ್ ಸ್ಕ್ರೀನಿಂಗ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಸಿನಿಮಾ ನೋಡಿದ್ದು, ಮೆಗಾ ಬ್ಲಾಕ್‌ಬಸ್ಟರ್ ಆಗೋದು ಗ್ಯಾರಂಟಿ ಎಂದು ಅವರು ಬರೆದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ, 'ಕೂಲಿ' ಬಗ್ಗೆ ಏನಿದೆ ವಿಮರ್ಶೆ? ರಜನಿಕಾಂತ್ ಪಾತ್ರ ಹೇಗಿದೆ? ಈ ಸಿನಿಮಾದಲ್ಲಿ ಏನಿಷ್ಟ ಆಗುತ್ತೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಆಗಸ್ಟ್ 14ರಂದು ರಿಲೀಸ್ ಆಗುತ್ತಿರುವ 'ಕೂಲಿ'ಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಆಮಿರ್ ಖಾನ್, ನಾಗಾರ್ಜುನಾ ಅಕ್ಕಿನೇನಿ, ಉಪೇಂದ್ರ, ಶ್ರುತಿ ಹಾಸನ್ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಇದೆ. ಇನ್ನು ಪೂಜಾ ಹೆಗ್ಡೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ರೆಬ್ಬಾ ಮೋನಿಕಾ ಜಾನ್, ಮಲಯಾಳಂ ನಟ-ನಿರ್ದೇಶಕ ಸೌಬಿನ್ ಶಾಹಿರ್, ಜೂನಿಯರ್ ಎಂಜಿಆರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಸಿನಿಮಾ ಪೂರ್ತಿ ತಾರೆಯರೇ ಎದ್ದು ಕಾಣುತ್ತಾರೆ.
ಇತ್ತೀಚೆಗಷ್ಟೇ 'ಕೂಲಿ' ಸಿನಿಮಾದ ಮತ್ತೊಂದು ಹಾಡನ್ನು ರಿಲೀಸ್ ಮಾಡಲಾಗಿದೆ. ಪೂಜಾ ಹೆಗ್ಡೆ ಹಾಗೂ ಮಲಯಾಳಂ ನಟ-ನಿರ್ದೇಶಕ ಸೌಬಿನ್ ಶಾಹಿರ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇಡೀ ಹಾಡಿನಲ್ಲಿ ಇವರಿಬ್ಬರ ಹೆಜ್ಜೆಗಳು ಮಸ್ತ್ ಕಿಕ್ ಕೊಡುತ್ತಿವೆ. ಈಗಾಗಲೇ ಹಾಡುಗಳು ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳ ಮನಸ್ಸನ್ನು ಗೆದ್ದಿವೆ. ಹೀಗಾಗಿ 'ಕೂಲಿ' ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಕುಲ್ದೀಪ್ ಗಾಡ್ವಿ ಎಂಬುವವರು ಈ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್‌ಗೆ ಹೋಗಿದ್ದು, ಚುಟುಕು ವಿಮರ್ಶೆ ಮಾಡಿದ್ದಾರೆ.
ಇವರು ಸಿನಿಮಾ ನೋಡಿದ್ದು ನಿಜಾನೋ.. ಇಲ್ಲ ಸುಳ್ಳು ಹೇಳುತ್ತಿದ್ದಾರಾ? ಅನ್ನೋದನ್ನು ಅಧಿಕೃತವಾಗಿ ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಥಿಯೇಟರ್ ಒಳಗಿಂದ 'ಕೂಲಿ' ಹಿಂದಿ ವರ್ಷನ್‌ನ ಟೈಟಲ್ ಅನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಇದನ್ನೇ ಇಟ್ಟುಕೊಂಡು ಕುಲ್ದೀಪ್ ಮಾಡಿರುವ 'ಕೂಲಿ' ಸಿನಿಮಾದ ವಿಮರ್ಶೆಯನ್ನು ನೋಡುವುದಾರೇ,
ಪತ್ರಕರ್ತ ಹಾಗೂ ಸಿನಿಮಾ ನಟ ಎಂದು ಹೇಳಿಕೊಂಡಿರುವ ಕುಲ್ದೀಪ್ ಗಾಡ್ವಿದ ಚುಟುಕು ಮಿಮರ್ಶೆ ಹೀಗಿದೆ. " ಕೂಲಿಯ ಪ್ರೈವೇಟ್ ಸ್ಕ್ರೀನಿಂಗ್ ನೋಡಿದೆ. ಇದು ಅದ್ಭುತ ಸಿನಿಮಾ. ಆಮಿರ್ ಖಾನ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ರಜನಿಕಾಂತ್ ಅದ್ಭುತ. ನಾಗಾರ್ಜುನ, ಶ್ರುತಿ ಹಾಸನ್, ಪೂಜಾ ಹೆಗ್ಡೆ, ಉಪೇಂದ್ರ ಸೇರಿದಂತೆ ಎಲ್ಲರೂ ತಮ್ಮ ಪಾತ್ರವನ್ನು ತಿಂದು ಹಾಕಿದ್ದಾರೆ. ಹಾಗೇ ಅನಿರುದ್ಧ್ ಬಿಜಿಎಂ ಮಾಸ್ಟರ್ ಸ್ಟ್ರೋಕ್. ಲೋಕೇಶ್ ಕನಗರಾಜ್ ಮಾಸ್ ಬ್ಲಾಕ್ ಬಸ್ಟರ್ ಸಿನಿಮಾವನ್ನು ಕೊಟ್ಟಿದ್ದಾರೆ." ಎಂದು ರಿವ್ಯೂ ಮಾಡಿ ಐದು ಸ್ಟಾರ್ ಕೊಟ್ಟಿದ್ದಾರೆ.
ಇನ್ನೂ 'ಕೂಲಿ' ಸಿನಿಮಾ ಹೈದರಾಬಾದ್, ವಿಶಾಖಪಟ್ಟಣಂ, ಜೈಪುರ, ಬ್ಯಾಂಕಾಕ್ ಸೇರಿದಂತೆ ಹಲವು ಭಾಗಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾವನ್ನು ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಸ್ಯಾಟಲೈಟ್ ಹಾಗೂ ಓಟಿಟಿಯಿಂದ ದೊಡ್ಡ ಮಟ್ಟದಲ್ಲಿಯೇ ವ್ಯಾಪಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











