ಬೆಂಗಳೂರಿನಲ್ಲಿ 'ಸೂರ್ಯಕಾಂತಿ' ನಟಿ ರೆಜಿನಾ ಕೆಸ್ಸೆಂಡ್ರಾ ತಾನು ಗರ್ಭಿಣಿ ಎಂದು ಗೋಗರೆದಿದ್ದೇಕೆ?
ದಕ್ಷಿಣ ಭಾರತದ ಜನಪ್ರಿಯ ನಟಿ ರೆಜಿನಾ ಕೆಸ್ಸೆಂಡ್ರಾ ತಮ್ಮ ಸಹಜ ಸೌಂದರ್ಯದಿಂದ ಬೋಲ್ಡ್ ನಡೆಯಿಂದ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಕನ್ನಡದಲ್ಲಿಯೂ 'ಸೂರ್ಯಕಾಂತಿ'ಯಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಟೀಕೆಗಳಿಗೆ ಗುರಿಯಾಗಿದ್ದೂ ಇದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಾನು ಗರ್ಭಿಣಿ ಸುಳ್ಳು ಹೇಳಿದ್ದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರೆಜಿನಾ 'ಸೂರ್ಯಕಾಂತಿ' ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಬಿಟ್ಟರೆ, ತಮಿಳು, ತೆಲುಗು ಹಾಗೂ ಹಿಂದಿ ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದೇ ಹೆಚ್ಚು. ತನ್ನ 9ನೇ ವಯಸ್ಸಿನಲ್ಲಿಯೇ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ರೆಜಿನಾ 2005ರಲ್ಲಿ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ಕನ್ನಡ, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ತಮಿಳು ನಟಿ ಇತ್ತೀಚೆಗೆ ಅಜಿತ್ ನಟನೆಯ 'ವಿದಾಮುಯರ್ಚಿ', ಬಾಲಿವುಡ್ ಸಿನಿಮಾ 'ಜಾಟ್', 'ಕೇಸರಿ ಚಾಪ್ಟರ್ 2' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೈಯಲ್ಲಿ ಇನ್ನೂ ಮೂರು-ನಾಲ್ಕು ಸಿನಿಮಾಗಳಿವೆ. ಈ ನಟಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಒಮ್ಮೆ ಬೆಂಗಳೂರಿನಲ್ಲಿ ಇದ್ದಾಗ ಗರ್ಭಿಣಿಯಾಗಿದ್ದೇನೆ ಎಂದು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾರೆ. ಅದ್ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ರೆಜಿನಾ ನಟನೆಯಲ್ಲಿ ಹೇಗೆ ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಹಾಗೇ ಮಾತು ಕೂಡ ಅಷ್ಟೇ ಬೋಲ್ಡ್. ಹಿಂದೊಮ್ಮೆ ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತಾಡಿ ಟೀಕೆ ಗುರಿಯಾಗಿದ್ದರು. ಪುರುಷರು ಮತ್ತು ಮ್ಯಾಗಿ ಎರಡೂ ಒಂದೇ ಎರಡು ನಿಮಿಷದಲ್ಲಿ ಕೆಲಸ ಮುಗಿದು ಹೋಗುತ್ತೆ ಎಂದಿದ್ದರು. ಈ ಹೇಳಿಕೆ ಪುರುಷರನ್ನು ಕೆರಳಿ ಕೆಂಡವಾಗುವಂತೆ ಮಾಡಿತ್ತು. ಹೀಗಾಗಿ ಗರ್ಭಿಣಿ ಅಂತ ಸುಳ್ಳು ಅಂತ ಹೇಳಿಕೊಂಡಿದ್ದು ಕೂಡ ವಿವಾದಾತ್ಮಕ ಹೇಳಿಕೆ ಅಂದುಕೊಳ್ಳಬೇಡಿ. ಇಲ್ಲೊಂದು ತಮಾಷೆಯ ಸನ್ನಿವೇಶವಿದೆ.
ರೆಜಿನಾ ಊಟದ ವಿಷಯದಲ್ಲಿ ಪರ್ಫೆಕ್ಟ್. ಯಾವಾಗ ಊಟ ಮಾಡಬೇಕು? ಹೇಗೆ ಮಾಡಬೇಕು? ಎಷ್ಟು ತಿನ್ನಬೇಕು? ಏನನ್ನು ಸೇವಿಸಬೇಕು? ಅನ್ನೋ ಬಗ್ಗೆ ಗಮನ ಹರಿಸುತ್ತಾರೆ. ಒಳ್ಳೆಯ ಊಟ ಸಿಗುತ್ತೆ ಅನ್ನೋದು ಗೊತ್ತಾದರೇ ಸಾಕು ಎಷ್ಟು ದೂರ ಬೇಕಾದರೂ ಹುಡುಕಿಕೊಂಡು ಹೋಗುತ್ತೇನೆ ಎಂದು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹಾಗೇ ಒಂದು ತಮಾಷೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಒಮ್ಮೆ ಬೆಂಗಳೂರಿನಲ್ಲಿದ್ದಾಗ ರೆಜಿನಾ ತನಗೆ ಇಷ್ಟವಾದ "ಮಿಸ್ಟಿ ದೋಯಿ" (ಬಂಗಾಳಿ ಸಿಹಿ) ತಿನ್ನುವ ಬಯಕೆಯಾಗಿತ್ತು. ಬೆಂಗಳೂರಿನಲ್ಲಿರುವ ಪ್ರಮುಖ ಸಿಹಿ ಅಂಗಡಿಗಳಿಗೆ ಹೋದರೆ ಎಲ್ಲಿಯೂ ಸಿಕ್ಕಿರಲಿಲ್ಲ. ಕೊನೆಗೆ ಒಂದು ಅಂಗಡಿಯಲ್ಲಿ ಆ ಸಿಹಿ ತಿನಿಸನ್ನು ಕಂಡಾಗ ಮಾಲೀಕ ಶಾಪ್ ಅನ್ನು ಮುಚ್ಚುವ ಸಮಯ ಬಂದಿತ್ತು. ಅಂಗಡಿಯವರು ಸಿಹಿಯನ್ನು ಕೊಡುವುದಕ್ಕೆ ನಿರಾಕರಿಸಿದ್ದರು. ಆಗ ರೆಜಿನಾ ಆ ಸಿಹಿಯನ್ನು ತಿನ್ನಲೇಬೇಕು ಅಂತ ಹಠಕ್ಕೆ ಬಿದ್ದಿದ್ದರಿಂದ "ನಾನು ಗರ್ಭಿಣಿ, ಈ ಸಿಹಿ ತಿನ್ನಬೇಕೆಂದು ತುಂಬಾ ಆಸೆಯಾಗುತ್ತಿದೆ" ಎಂದು ಸುಳ್ಳು ಹೇಳಿದ್ದರು.
ರೆಜಿನಾ ಮಾತು ಕೇಳಿ ಅಂಗಡಿಯ ಮಾಲೀಕನಿಗೆ ಕನಿಕರ ಉಕ್ಕಿ ಬಂದಿತ್ತು. ಮತ್ತೆ ಅಂಗಡಿ ಬಾಗಿಲು ತೆರೆದು ರೆಜಿನಾ ಬಯಸಿದ ಸಿಹಿಯನ್ನು ನೀಡಿದ್ದನು. ಮಿಸ್ಟಿ ದೋಯಿಗಾಗಿ ಸುಳ್ಳನ್ನು ಹೇಳಿದ್ದಾಗಿ ಆ ತಮಾಷೆಯ ಕ್ಷಣಗಳನ್ನು ರೆಜಿನಾ ನೆನಪಿಸಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ನಿಜವಾದ ಆಹಾರ ಪ್ರೇಮಿ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ರೆಜಿನಾ ಅವರನ್ನು ಆಹಾರ ಪ್ರಿಯೆ ಎಂದು ಕರೆದಿರುವ ನೆಟ್ಟಿಗರು ಈ ಘಟನೆ ತಮಾಷೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











