'ಜೈಲರ್' ಸಿನಿಮಾದ ನಟ ಮಾರಿಮುತ್ತು ವಿಧಿವಶ.. ಕಂಬನಿ ಮಿಡಿದ ತಾರೆಯರು!
ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ ಸಿನಿಮಾ 'ಜೈಲರ್' ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಥಿಯೇಟರ್‌ನಲ್ಲಿ ಸದ್ದು ಮಾಡಿದ ಬಳಿಕ ಓಟಿಟಿಯಲ್ಲಿ ಅಬ್ಬರಿಸುತ್ತಿದೆ. ಚಿತ್ರತಂಡ ಇದೇ ಖುಷಿಯಲ್ಲಿರುವಾಗಲೇ ಸಿನಿಮಾದಲ್ಲಿ ನಟಿಸಿದ ಅದ್ಭುತ ನಟನನ್ನು ಕಳೆದುಕೊಂಡಿದೆ.
ಕಾಲಿವುಡ್‌ನ ಹಿರಿಯ ನಿರ್ದೇಶಕ ಹಾಗೂ ನಟ ಮಾರಿಮುತ್ತು ವಿಧಿವಶರಾಗಿದ್ದಾರೆ. ಈ ವಿಷಯವನ್ನು ಮಾರಿಮುತ್ತು ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ. 56 ವರ್ಷದ ನಟ ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾದಲ್ಲಿ ಖಳನಾಯಕನ ಸಹಾಯಕರಾಗಿ ಕಾಣಿಸಿಕೊಂಡಿದ್ದರು. ತೀವ್ರ ಹೃದಯಾಘಾತದಿಂದ ಮಾರಿಮುತ್ತು ತಮ್ಮ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ಮಾರಿಮುತ್ತು 25 ವರ್ಷಗಳ ಕಾಲ ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹಾಗೂ ನಟರಾಗಿ ಗುರುತಿಸಿಕೊಂಡಿದ್ದರು. ಇಂದು (ಸೆಪ್ಟೆಂಬರ್ 8) ಬೆಳಗ್ಗೆ ಮಾರಿಮುತ್ತುಗೆ ತೀವ್ರ ಹೃದಯಾಘಾತವಾಗಿತ್ತು. ಹತ್ತಿರದ ಸೂರ್ಯ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗುವ ವೇಳೆಗಾಗಲೇ ಮಾರಿಮುತ್ತು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ತಮಿಳು ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ಮಾರಿ ಮುತ್ತು ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾರಿಮುತ್ತು ಅವರ ನಿವಾಸದಲ್ಲಿ ಅವರ ಅಭಿಮಾನಿಗಳಿಗೆ ಹಾಗೂ ಚಿತ್ರರಂಗದ ಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾರಿಮುತ್ತು ತಮಿಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ತಮಿಳಿನ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಜಿತ್ ಅಭಿನಯದ 'ಆಸೈ' ಚಿತ್ರದ ಮೂಲಕ ಜನಪ್ರಿಯತೆಯನ್ನಯ ಗಳಿಸಿದ್ದರು. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವಾಗಲೇ 1999ರಲ್ಲಿ 'ವಾಲಿ' ಸಿನಿಮಾದ ಮೂಲಕ ನಟನಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು.
ಮಾರಿ ತಮ್ಮ ವೃತ್ತಿ ಬದುಕಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿನ ಇವರ ಪಾತ್ರಕ್ಕೆ ಪ್ರಶಂಸೆಯೂ ಸಿಕ್ಕಿದೆ. ಇಷ್ಟೇ ಅಲ್ಲದೆ 'ಕಣ್ಣುಂ ಕಣ್ಣುಂ' ಹಾಗೂ 'ಪುಲಿವಾಲ್' ಅಂತಹ ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ.


Click it and Unblock the Notifications











