ಬಾಲ್ಯದ ಗೆಳೆಯರನ್ನು ಭೇಟಿಯಾದ ಸಂತಸದಲ್ಲಿ ನಟ ಕಮಲ್ ಹಾಸನ್
ಸಕಲಕಲಾವಲ್ಲಭ ಕಮಲ್ ಹಾಸನ್ ಸದಾ ಸಿನಿಮಾಗಳಲ್ಲಿ ಬ್ಯುಸಿ ಇರುತ್ತಾರೆ. ಇತ್ತೀಚಿಗೆ ಸಿನಿಮಾ ಜೊತೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವ ಕಮಲ್ ಈಗ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಸಿನಿಮಾ ರಾಜಕೀಯ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಕಮಲ್ ಇತ್ತೀಚಿಗೆ ಬಾಲ್ಯದ ಗೆಳೆಯರನ್ನು ಭೇಟಿಯಾಗಿದ್ದಾರೆ.
ಹೌದು, ಶಾಲೆಯಲ್ಲಿ ಒಟ್ಟಿಗೆ ಓದಿದ ದೋಸ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಾಲ್ಯದ ಗೆಳೆಯರನ್ನು ಭೇಟಿಯಾದ ಸಂತಸವನ್ನು ಕಮಲ್ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗಿ ಅವರ ಜೊತೆ ಸಮಯ ಕಳೆದು, ಮತ್ತೆ ಬಾಲ್ಯಕ್ಕೆ ಮರಳಿದ ಸಂತಸ ತಂದಿದೆ ಎಂದು ಕಮಲ್ ಬರೆದುಕೊಂಡಿದ್ದಾರೆ.
ಕಮಲ್ ಮತ್ತು ಸ್ನೇಹಿತರು ಒಂದೆ ಬಣ್ಣದ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರು ಸಾಲಾಗಿ ಕುಳಿತು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೊಟೋವನ್ನು ಸಹ ಶೇರ್ ಮಾಡಿದ್ದಾರೆ. ಅಂದ್ಹಾಗೆ ಕಮಲ್ ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಪ್ರಾರಂಭಿಸಿರುವ ಕಮಲ್ ಕೊಂಚ ಬ್ರೇಕ್ ನೀಡಿದ್ದಾರೆ.

ಇತ್ತೀಚಿಗಷ್ಟೆ ಕಾಲಿನ ಸರ್ಜರಿಗೆ ಒಳಗಾಗಿರುವ ಕಮಲ್ ಸದ್ಯ ರೆಸ್ಟ್ ನಲ್ಲಿ ಇದ್ದಾರೆ. ಈ ಸಮಯದಲ್ಲಿ ಕಮಲ್ ಬಾಲ್ಯದ ಗೆಳೆಯರನ್ನು ಭೇಟಿಯಾಗಿ ಸಮಯ ಕಳೆದಿದ್ದಾರೆ. ಇಂಡಿಯನ್-2 ಸಿನಿಮಾ ಮತ್ತೆ ಫೆಬ್ರವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರಕ್ಕೆ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರದಲ್ಲಿ ಕಮಲ್ ಗೆ ನಾಯಕಿಯಾಗಿ ಕಾಜಲ್ ಅಗರವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಕಾಜಲ್ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, 80 ವರ್ಷದ ಅಜ್ಜಿಯ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಚಿತ್ರೀಕರಣ ಮುಗಿಯಲಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











