ಗಂಡನ ಫೋಟೊ ಹರಿದು, ಡಿವೋರ್ಸ್ ಫೋಟೊಶೂಟ್ ಮಾಡಿಸಿದ ತಮಿಳು ನಟಿ ಶಾಲಿನಿ
ಇತ್ತೀಚೆಗೆ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಚಿತ್ರರಂಗದಲ್ಲಿ ಪ್ರತಿದಿನ ಯಾರಾದರೂ ಒಬ್ಬರ ವಿಚ್ಛೇದನದ ಪ್ರಕರಣಗಳು ಬೆಳಕಿಗೆ ಬರುತ್ತವೆ. ಇದು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದು ಇದೆ. ಕೆಲವು ಬೀದಿ ರಂಪಾಟ ಆದರೆ, ಮತ್ತೆ ಕೆಲವು ಅಲ್ಲಿಗೆ ಮುಗಿದು ಹೋಗುತ್ತೆ.
ಸಮಂತಾ-ನಾಗಚೈತನ್ಯ ವಿಚ್ಛೇದನದ ಸಂಗತಿ ಎರಡು ವರ್ಷಗಳಾಗುತ್ತಿದ್ದರೂ ಇನ್ನೂ ಚರ್ಚೆಯಾಗುತ್ತಲೇ ಇದೆ. ಆದರೆ, ಇಲ್ಲೊಬ್ಬ ನಟಿ ತನ್ನ ಡಿವೋರ್ಸ್ ಅನ್ನು ಸೆಲೆಬ್ರೆಟ್ ಮಾಡಿದ್ದಾರೆ. ಇದು ವಿಷಯವೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ತಮಿಳು ನಟಿ ಶಾಲಿನಿ ಇತ್ತೀಚೆಗೆ ತನ್ನ ಪತಿಯಿಂದ ಬೇರೆಯಾಗಿದ್ದರು. ಬೇರೆ ನಟಿಯರಂತೆ ವಿಚ್ಛೇದನವನ್ನು ಗಂಭೀರವಾಗಿ ಪರಿಗಣಿಸದೆ, ಸೆಲೆಬ್ರೆಟ್ ಮಾಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕೆ ಡಿವೋರ್ಸ್ ಫೋಟೊಶೂಟ್ ಮಾಡಿ ಗಂಡ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಡಿವೋರ್ಸ್‌ಗೂ ಫೋಟೊಶೂಟ್
ತಮಿಳು ನಟಿ ಶಾಲಿನಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಪತಿಯಿಂದ ಬೇರೆಯಾದ ನಟಿ ತಲೆ ಕೆಡಿಸಿಕೊಂಡಿಲ್ಲ. ಬಿಂದಾಸ್ ಲುಕ್ ಕೊಟ್ಟು ಭರ್ಜರಿಯಾಗಿ ಫೋಟೊಶೂಟ್ ಮಾಡಿದ್ದಾರೆ. ಅದನ್ನು ಕಂಡು ನೆಟ್ಟಿಗರೇ ಡಿವೋರ್ಸ್ ಫೋಟೊಶೂಟ್ ಅಂತ ಕರೆದುಬಿಟ್ಟಿದ್ದಾರೆ.

ರೆಡ್ ಗೌನ್ ತೊಟ್ಟು ತಮಿಳು ನಟಿ ಶಾಲಿನಿ ಫೋಟೊಶೂಟ್ ಮಾಡಿಸಿದ್ದಾರೆ. ಖುಷಿಯ ಮೂಡ್‌ನಲ್ಲಿ 'ಡಿವೋರ್ಸ್' ಅಂತ ಬೋರ್ಡ್ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳೊಂದಿಗೆ ಶಾಲಿನಿಯ ಧೈರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗಂಡನ ಫೋಟೊ ಹರಿದು ಫೋಟೊಶೂಟ್
ತಮಿಳು ನಟಿ ಶಾಲಿನಿ ಕ್ರಿಯೇಟಿವಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಫೋಟೊಶೂಟ್ ಕೂಡ ಅಷ್ಟೇ ಕ್ರಿಯೇಟಿವ್ ಆಗಿದೆ. ಈ ಫೋಟೊಶೂಟ್‌ನಲ್ಲಿ ಮದುವೆ ದಿನ ತೆಗೆದಿದ್ದು ಎನ್ನಲಾದ ಫೋಟೊವನ್ನು ಹರಿದು ಹಾಕಿದ್ದಾರೆ. ಗಂಡನ ಫೋಟೊವನ್ನು ತುಳಿದಿದ್ದಾರೆ. ಇದೆಲ್ಲವೂ ಫೋಟೊಶೂಟ್‌ನ ಹೈಲೈಟ್.
"ನನ್ನ ಬಳಿ 99 ಸಮಸ್ಯೆಗಳಿವೆ.. ಅದರಲ್ಲಿ ಗಂಡನ ಸಮಸ್ಯೆಯಿಲ್ಲ. ಧ್ವನಿಯಿಲ್ಲದವರಿಗೆ ವಿಚ್ಛೇದಿತ ಮಹಿಳೆಯ ಸಂದೇಶ. ಹದಗೆಟ್ಟಿದ ದಾಂಪತ್ಯವನ್ನು ತೊರೆಯುವುದರಲ್ಲಿ ತಪ್ಪಿಲ್ಲ. ಕಾರಣ ಏನೆಂದರೆ, ನೀವು ಸಂತೋಷವಾಗಿರಲು ಅರ್ಹರಾಗಿರುವ ವ್ಯಕ್ತಿ. ನಿಮ್ಮ ಬದುಕಿನ ಮೇಲೆ ಹಿಡಿತ ಸಾಧಿಸಿ ಹಾಗೇ ನಿಮ್ಮ ಹಾಗೂ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಸಲುವಾಗಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ" ಎಂದು ಶಾಲಿನಿ ಬರೆದು ಪೋಸ್ಟ್ ಮಾಡಿದ್ದಾರೆ.
ಗಂಡನಿಂದ ಕಿರುಕುಳ
ತಮಿಳು ನಟಿ ಶಾಲಿನಿ ರಿಯಾಜ್ ಎಂಬುವವರನ್ನು 2020 ಜುಲೈನಲ್ಲಿ ವಿವಾಹವಾಗಿದ್ದರು. ಇವರಿಗೆ ರಿಯಾ ಎಂಬ ಮಗಳು ಇದ್ದಾರೆ. ಮದುವೆಯ ಬಳಿಕ ಶಾಲಿನಿ ತನ್ನ ಪತಿಯ ವಿರುದ್ಧ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ವಿಚ್ಛೇದನ ನೀಡಿದ್ದಾರೆ ಎನ್ನಲಾಗಿದೆ.
ಶಾಲಿನಿ ತಮಿಳಿನ ಧಾರಾವಾಹಿ 'ಮುಲ್ಲುಮ ಮಲರುಂ' ಮೂಲಕ ಎಂಟ್ರಿ ಕೊಟ್ಟಿದ್ದರು. ಕೊನೆಯದಾಗಿ ರಿಯಾಲಿಟಿ ಶೋ 'ಸೂಪರ್ ಮಾಮ್'ನಲ್ಲಿ ಕಾಣಿಸಿಕೊಂಡಿದ್ದರು. ಡಿವೋರ್ಸ್ ಫೋಟೊಶೂಟ್ ಬಳಿಕ ಶಾಲಿನಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.


Click it and Unblock the Notifications











