"ಧನುಷ್ ಅವರೇ ಈ ಸೇಡು ಯಾಕೆ? ಕಾನೂನಾತ್ಮಕವಾಗಿ ಹೋರಾಡೋಣ"; ಧನುಷ್ ವಿರುದ್ಧ ನಯನತಾರಾ ಬಹಿರಂಗ ಪತ್ರ!
ತಮಿಳಿನ ಸ್ಟಾರ್ ನಟರಾದ ನಯನತಾರಾ ಹಾಗೂ ಧನುಷ್ ಇಬ್ಬರ ನಡುವಿನ ಗೆಳೆತನ ಹಳಸಿದೆ. ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇದ್ದಕ್ಕಿದ್ದ ಹಾಗೇ ದಿಢೀರನೇ ಧನುಷ್ ವಿರುದ್ಧ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಅಷ್ಟಕ್ಕೂ ಧನುಷ್ ಮೇಲೆ ನಯನತಾರಾ ಕೋಪಗೊಂಡಿದ್ದು ಏಕೆ? ತನ್ನ ಇನ್‌ಸ್ಟಾಗ್ರಾಂ ಮೂಲಕ ಬಹಿರಂಗ ಪತ್ರ ಬರೆದಿದ್ದು ಏಕೆ? ಅದರಲ್ಲಿ ಏನಿದೆ?
ಹೌದು, ಧನುಷ್ ವಿರುದ್ಧ ನಯನತಾರಾ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಧನುಷ್ ವಿರುದ್ಧ ಕಿಡಿಕಾರಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯ ಸಾಕ್ಷ್ಯಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಧನುಷ್ ನಿರ್ಮಿಸಿದ 'ನಾನುಂ ರೌಡಿ ಧನ್' ಸಿನಿಮಾದ ಮೇಕಿಂಗ್ ದೃಶ್ಯವನ್ನು ಬಳಸಿಕೊಳ್ಳಲಾಗಿದೆ. ಈ ವಿಚಾರಕ್ಕೆ ಧನುಷ್ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರ ಪ್ರೀತಿ ಹುಟ್ಟಿದ್ದು ಇದೇ 'ನಾನುಂ ರೌಡಿ ಧನ್' ಸಿನಿಮಾ ಸೆಟ್ಟಿನಲ್ಲಿಯೇ. ಹೀಗಾಗಿ ನಯನತಾರಾ ಧನುಷ್ ಬಳಿಕ ಆ ಸಿನಿಮಾದ ದೃಶ್ಯಗಳನ್ನು ಬಳಸಿಕೊಳ್ಳುವುದಕ್ಕೆ ಅನುಮತಿಯನ್ನು ಕೇಳಿದ್ದರು. ಆದರೆ, ಎರಡು ವರ್ಷಗಳಾದರೂ ಧನುಷ್ ಅನುಮತಿಯನ್ನು ನೀಡಿರಲಿಲ್ಲ. ಹೀಗಾಗಿ ನಯನತಾರಾ ಆ ಸಿನಿಮಾ ಚಿತ್ರೀಕರಣದ ವೇಳೆ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ 3 ಸೆಕೆಂಡ್‌ಗಳ ತುಣುಕನ್ನು ಬಳಸಿದ್ದರು. ಅದಕ್ಕೆ ಧನುಷ್ 10 ಕೋಟಿ ರೂಪಾಯಿ ಪರಿಹಾರ ಕೇಳಿ ನೋಟೋಸ್ ಕಳುಹಿಸಿದ್ದಾರೆ. ಇದು ನಯನತಾರಾ ಕಿಡಿಕಾರುವಂತೆ ಮಾಡಿದೆ. ಇನ್ನು ಲೇಡಿ ಸೂಪರ್‌ಸ್ಟಾರ್ ಬರೆದ ಬಹಿರಂಗ ಪತ್ರದಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ನನ್ನದು ಹೋರಾಟದ ಬದುಕು"
"ಶ್ರೀ ಧನುಷ್ ರಾಜಾ ಅವರೇ, ಕೆಲವು ತಪ್ಪುಗಳನ್ನು ತಿದ್ದಲು ನಾನು ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ತಂದೆ, ನಿಮ್ಮ ಸಹೋದರ ಹಾಗೂ ಖ್ಯಾತ ನಿರ್ದೇಶಕರ ಬೆಂಬಲದಿಂದ ಜನಪ್ರಿಯರಾಗಿರುವ ನಿಮ್ಮಂಥ ನಟರು ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಸಿನಿಮಾರಂಗ ಅನ್ನೋದು ನನ್ನಂಥವರಿಗೆ ಹೋರಾಟ ಅನ್ನೋದು ಎಲ್ಲರಿಗೂ ಗೊತ್ತು. ಯಾರ ಬೆಂಬಲವೂ ಇಲ್ಲದೆ ಸ್ವಂತ ಬಲದಿಂದ ಬೆಳೆದು ಬಂದ ಮಹಿಳೆ ನಾನು. ನಾನು ಈಗಿರುವ ಸ್ಥಾನವನ್ನು ಪಡೆಯಲು ಎಷ್ಟು ಹೋರಾಟ ಮಾಡಿದ್ದೇನೆ ಅನ್ನೋದು ನನಗೆ ಗೊತ್ತು. ಹೀಗಾಗಿ ನನ್ನ ಪರಿಚಯ ಇರುವವರಿಗೆ, ವೀಕ್ಷಕರಿಗೆ ಹಾಗೂ ಚಿತ್ರರಂಗದ ನನ್ನ ಹಿತೈಷಿಗಳಿಗೆ ಈ ಸತ್ಯವನ್ನು ಹೇಳುವ ಜವಾಬ್ದಾರಿಯಿದೆ." ಎಂದು ನಯನತಾರಾ ಹೇಳಿದ್ದಾರೆ.
ಚಿತ್ರದ ವಿರುದ್ಧ ಯಾಕೀ ಸೇಡು?
"ನೀನು ಈ ಸಾಕ್ಷಚಿತ್ರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೀರಿ. ಅದು ಕೇವಲ ನನಗಷ್ಟೇ ಅಲ್ಲ. ನನ್ನ ಪತಿ ಹಾಗೂ ಈ ಪ್ರಾಜೆಕ್ಟ್‌ಗೆ ಶ್ರಮ ಹಾಕಿದವರ ಸಮಯದ ಮೇಲೂ ಪರಿಣಾಮ ಬೀರುತ್ತಿದೆ. ನೆಟ್‌ಫ್ಲಿಕ್ಸ್‌ನ ಈ ಸಾಕ್ಷಚಿತ್ರ ನನ್ನ ಜೀವನ, ನನ್ನ ಪ್ರೀತಿ, ನನ್ನ ಮದುವೆ, ನನ್ನ ವೃತ್ತಿ ಹಾಗೂ ನನ್ನ ಆಸಕ್ತಿಗಳನ್ನು ಒಳಗೊಂಡಿದೆ. ನನ್ನ ಚಿತ್ರರಂಗದ ಹಿತೈಷಿಗಳು ಅವರ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆದರೆ, ನನ್ನ ಜೀವನದ ಪ್ರಮುಖ ಸಿನಿಮಾ 'ನಾನುಂ ರೌಡಿ ಧನ್' ಅನ್ನು ಈ ಸಾಕ್ಷ ಚಿತ್ರದಲ್ಲಿ ಸೇರಿಸಲಾಗಿಲ್ಲ." ಎಂದು ಬೇಸರ ಹೊರ ಹಾಕಿದ್ದಾರೆ.
ಇದು ಎರಡು ವರ್ಷ ಹೋರಾಟ
"ಎರಡು ವರ್ಷಗಳಿಂದ ಎನ್‌ಓಸಿ ( No Objection certificate) ಪಡೆಯುವುದಕ್ಕೆ ಹೋರಾಟ ಮಾಡಿದ್ದಷ್ಟೇ ಬಂತು. ನೆಟ್‌ಫ್ಲಿಕ್ಸ್ ಸಾಕ್ಷಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನಿಮ್ಮ ಅನುಮತಿಗೆ ಕಾದಿದ್ದಷ್ಟೇ ಬಂತು. 'ನಾನುಂ ರೌಡಿ ಧನ್' ಸಿನಿಮಾದ ಹಾಡುಗಳು, ದೃಶ್ಯವನ್ನು ಕೊನೆಗೆ ಫೋಟೋಗಳನ್ನು ಬಳಸಿಕೊಳ್ಳುವುದಕ್ಕೂ ಅನುಮತಿ ನೀಡಲಿಲ್ಲ. ಹೀಗಾಗಿ ನಾವು ಕೈ ಬಿಡಲು ನಿರ್ಧರಿಸಿದ್ವಿ. ಮತ್ತೆ ರೀ ಎಡಿಟ್ ಮಾಡಿ ಈಗಿರುವ ವರ್ಷನ್ ಅನ್ನು ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದೆವು. ಈ ಸಿನಿಮಾ ಹಾಡುಗಳ ಸಾಹಿತ್ಯ ನೈಜವಾಗಿದ್ದವು. ಹೀಗಾಗಿ ಅವನ್ನು ಬಳಸಿಕೊಳ್ಳುವ ಇಚ್ಛೆಯಾಗಿತ್ತು. ಆದರೆ, ನೀವು ಉದ್ದೇಶಪೂರ್ವಕವಾಗಿ ನಿರ್ದಾಕ್ಷಿಣ್ಯ ತೋರಿಸಿದ್ದು ನನ್ನ ಹೃದಯ ಚೂರಾಗುವಂತೆ ಮಾಡಿದೆ.
"ಕಾನೂನು ಹೋರಾಟ ಮಾಡೋಣ"
ನೆಟ್‌ಫ್ಲಿಕ್ಸ್ ಸಾಕ್ಷಚಿತ್ರದ ಟ್ರೈಲರ್ ರಿಲೀಸ್ ಆದ ಬಳಿಕ ನೀವು ಕಳಿಸಿದ ಲೀಗಲ್ ನೋಟೀಸ್ ನೋಡಿ ಶಾಕ್ ಆಯ್ತು. ಅದರಲ್ಲಿ ಬಳಸಿರುವ ಕೇವಲ 3 ಸೆಕೆಂಡುಗಳ ವಿಡಿಯೋವನ್ನು ನೋಡಿ ನೀವು ಪ್ರಶ್ನಿಸಿರುವ ಸಾಲುಗಳು ನನಗೆ ಆಘಾವನ್ನು ಉಂಟು ಮಾಡಿದೆ. ನಮ್ಮ ಪರ್ಸನಲ್ ಮೊಬೈಲ್‌ನಿಂದ ತೆಗೆದುಕೊಂಡು ತೆರೆಯ ಹಿಂದಿನ 3 ಸೆಕೆಂಡುಗಳ ದೃಶ್ಯಕ್ಕೆ 10 ಕೋಟಿ ರೂಪಾಯಿ ಕೇಳಿದ್ದೀರಿ. ಇದು ನಿಮ್ಮ ಕ್ಯಾರೆಕ್ಟರ್ ಏನು ಅನ್ನೋದನ್ನು ಹೇಳುತ್ತೆ. ನೀವು ಆಡಿಯೋ ರಿವೀಲ್ ವೇಳೆ ನಿಮ್ಮ ಮುಗ್ಧ ಅಭಿಮಾನಿಗಳೊಂದಿಗೆ ಮಾತಾಡುವಂತೆ ನೀವಿಲ್ಲ. ಕೊನೆಯ ಪಕ್ಷ ನನ್ನೊಂದಿಗೆ ಅಂತೂ ಇಲ್ಲ. ನಾನು ಕಾನೂನು ಹೋರಾಟ ಮಾಡುತ್ತೇನೆ. ಹಕ್ಕುಸ್ವಾಮ್ಯದ ದೃಷ್ಟಿಕೋನದಿಂದ 'ನಾನುಂ ರೌಡಿ ಧನ್' ದೃಶ್ಯಗಳನ್ನು ಬಳಸಿಕೊಳ್ಳಲು NOC ನೀಡಲು ನಿರಾಕರಿಸಿದ್ದಾಗಿ ಸಮರ್ಥಿಸಿಕೊಳ್ಳಬಹುದು. ಆದರೆ, ಅದರಲ್ಲಿ ನೈತಿಕ ಅಂಶವೂ ಇದೆ ಅನ್ನೋದನ್ನು ನಿಮಗೆ ನೆನಪಿಸುತ್ತೇನೆ." ಎಂದು ನಯನತಾರಾ ಕಿಡಿಕಾರಿದ್ದಾರೆ.


Click it and Unblock the Notifications











