ರಸ್ತೆ ಅಪಘಾತ: ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಯುವ ನಿರ್ದೇಶಕ ದುರ್ಮರಣ
ತಮಿಳಿನ ಯುವ ನಿರ್ದೇಶಕ ಎ.ವಿ. ಅರುಣ್ ಪ್ರಸಾದ್ ಅಲಿಯಾಸ್ ವೆಂಕಟ್ ಪಕ್ಕರ್ ಅವರು ಕೊಯಮತ್ತೂರಿನ ಮೆಟ್ಟುಪಾಳ್ಯಂ ಸಮೀಪ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿದ್ದಾಗ ಲಾರಿಯೊಂದಿಗೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Recommended Video
ಜಿ.ವಿ. ಪ್ರಕಾಶ್ ಮತ್ತು ಗಾಯತ್ರಿ ಸುರೇಶ್ ಪ್ರಮುಖ ತಾರಾಗಣದಲ್ಲಿರುವ '4ಜಿ' ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. ಅವರ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿರಲಿಲ್ಲ. ಈಗಷ್ಟೇ ಬೆಳೆಯುತ್ತಿದ್ದ ಯುವ ನಿರ್ದೇಶಕನ ಸಾವಿನ ಸುದ್ದಿ ತಮಿಳು ಚಿತ್ರರಂಗಕ್ಕೆ ಆಘಾತ ಮೂಡಿಸಿದೆ. ಸಂಗೀತ ನಿರ್ದೇಶಕರೂ ಆಗಿರುವ ನಟ ಜಿ.ವಿ. ಪ್ರಕಾಶ್ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಮೊದಲ ಚಿತ್ರ ಬಿಡುಗಡೆಗೂ ಮೊದಲೇ ಸಾವು
ಖ್ಯಾತ ನಿರ್ದೇಶಕ ಶಂಕರ್ ಅವರ ಬಳಿ ವೆಂಕಟ್ ಪಕ್ಕರ್ ಎಂಬ ಹೆಸರಿನಲ್ಲಿ ಸಹಾಯಕ ನಿರ್ದೇಶಕರಾಗಿ ವಿಕ್ರಮ್ ಅಭಿನಯದ 'ಐ' ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದರು. 4ಜಿ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದರು. ಆದರೆ ಆ ಸಿನಿಮಾ ತೆರೆಕಾಣುವ ಮೊದಲೇ ಅರುಣ್ ಮರೆಯಾಗಿದ್ದಾರೆ.
ಹೃದಯ ಛಿದ್ರವಾಗಿದೆ
'ಯುವ ನಿರ್ದೇಶಕ ಮತ್ತು ನನ್ನ ಮಾಜಿ ಸಹಾಯಕ ಅರುಣ್ ಸಾವಿನ ಸುದ್ದಿ ಕೇಳಿ ಹೃದಯ ಛಿದ್ರವಾಗಿದೆ. ನೀವು ಬಹಳ ಸಿಹಿಯಾದ, ಸಕಾರಾತ್ಮಕ ಮತ್ತು ಕಠಿಣ ಪರಿಶ್ರಮಿಯಾಗಿದ್ದಿರಿ. ನಿಮಗೆ ನನ್ನ ಪ್ರಾರ್ಥನೆಗಳು ಎಂದಿಗೂ ಇರುತ್ತದೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ತೀವ್ರ ಸಂತಾಪಗಳು' ಎಂಬುದಾಗಿ ನಿರ್ದೇಶಕ ಶಂಕರ್ ಹೇಳಿದ್ದಾರೆ.

ತೀವ್ರ ದುಃಖವಾಗಿದೆ
'ನನ್ನ ಸ್ನೇಹಿತ ವೆಂಕಟ್ ಪಕ್ಕರ್ ಅವರ ಸಾವಿನಿಂದ ತೀವ್ರ ದುಃಖವಾಗಿದೆ. ಅವರು ಎಂದೆಂದಿಗೂ ಸಕಾರಾತ್ಮಕವಾಗಿ ಇರುತ್ತಿದ್ದವರು. ಅವರ ಸಂಬಂಧಿಕರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ನಟ, ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಶೋಕ ವ್ಯಕ್ತಪಡಿಸಿದ್ದಾರೆ.

ಮನೋಬಲ ಆಘಾತ
ಅರುಣ್ ಅವರ ಸಾವಿನ ಬಗ್ಗೆ ಖ್ಯಾತ ಹಾಸ್ಯ ನಟ ಮನೋಬಲ ಸಹ ಆಘಾತ ವ್ಯಕ್ತಪಡಿಸಿದ್ದಾರೆ. ಅರುಣ್ ಅವರ ಫೋಟೊ ಹಂಚಿಕೊಂಡಿರುವ ಮನೋಬಲ, 'ಇದೇನಿದು? ಇದೇನು ಆಗುತ್ತಿದೆ? ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಹೇಳಿದ್ದಾರೆ.


Click it and Unblock the Notifications











