ಪತ್ನಿ ಶಾಲಿನಿಗೆ ದಿಢೀರ್ ಶಸ್ತ್ರ ಚಿಕಿತ್ಸೆ, ವಿದೇಶದಿಂದ ಓಡಿ ಬಂದ ಅಜಿತ್; ಫ್ಯಾನ್ಸ್‌ಗೆ ಆತಂಕ
ತಮಿಳು ಚಿತ್ರರಂಗದ ಜನಪ್ರಿಯ ನಟ ಅಜಿತ್ ಕುಮಾರ್ ಪತ್ನಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವತ: ಅವರೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಆಸ್ಪತ್ರೆಯಲ್ಲಿ ಪತಿಯೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ನೋಡಿದ ಬಳಿಕ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ದಿಢೀರನೇ ಆಸ್ಪತ್ರೆಗೆ ಸೇರುವಂತಹದ್ದು ಏನಾಯ್ತು?
ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ ವಿದೇಶದಲ್ಲಿ ತಮ್ಮ ಸಿನಿಮಾದ ಚಿತ್ರೀಕರಣದಲ್ಲಿದ್ದರು. 'ವಿಡಾಮುಯಾರ್ಚಿ' ಸಿನಿಮಾದ ಶೂಟಿಂಗ್ ಅಜೆರ್ಬೈಜಾನ್‌ನಲ್ಲಿ ನಡೆಯುತ್ತಿತ್ತು. ಜೂನ್ ಕೊನೆಯ ವಾರದಿಂದ ಸಿನಿಮಾದ ಶೂಟಿಂಗ್ ಆರಂಭ ಆಗಿತ್ತು. ಕ್ಲೈಮ್ಯಾಕ್ಸ್ ಆಕ್ಷನ್ ದೃಶ್ಯವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ, ಇವತ್ತು ಅಜಿತ್ ದಿಢೀರನೇ ಚೆನ್ನೈಗೆ ವಾಪಾಸ್ ಆಗಿದ್ದಾರೆ.

ಆಸ್ಪತ್ರೆಯ ಬಟ್ಟೆ ತೊಟ್ಟಿದ್ದ ಶಾಲಿನಿ ಪತಿ ಅಜಿತ್ ಜೊತೆ ಇವರು ಫೋಟೊವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅಜಿತ್ ಪತ್ನಿ ಶಾಲಿನಿ ದಿಢೀರನೇ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸುದ್ದಿ ಹರಿದಾಡುತ್ತಿದೆ. ಈ ಕಾರಣಕ್ಕೆ ಅಜಿತ್ ಅಭಿಮಾನಿಗಳು ಗಾಬರಿಗೊಂಡಿದ್ದಾರೆ.
ಅಜಿತ್ ಪತ್ನಿ ಶಾಲಿನಿ ಆಸ್ಪತ್ರೆಯಲ್ಲಿ ಪತಿಯೊಂದಿಗಿನ ಫೋಟೊವನ್ನು ಹಂಚಿಕೊಂಡು " ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ" ಎಂದಷ್ಟೇ ಬರೆದುಕೊಂಡಿದ್ದಾರೆ. ಆದರೆ, ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಶಾಲಿನಿ ಹೇಳಿಕೊಂಡಿಲ್ಲ. ಆದರೆ, ಫೋಟೊದಲ್ಲಿ ಶಾಲಿನಿ ಹಾಗೂ ಅಜಿತ್ ಇಬ್ಬರ ನಗುಮುಖದಲ್ಲಿದ್ದಾರೆ. ಹೀಗಾಗಿ ಶಾಲಿನಿ ಈಗ ಆರೋಗ್ಯವಾಗಿರಬಹುದೆಂದು ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದಾರೆ.
ಇತ್ತೀಚೆಗೆ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಶಾಲಿನಿ ಚಿಕ್ಕದೊಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕಾರಣಕ್ಕೆ ಅಜಿತ್ ಅಜೆರ್ಬೈಜಾನ್‌ನಲ್ಲಿ ನಡೆಯುತ್ತಿದ್ದ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ಪತ್ನಿಯ ಯೋಗಕ್ಷೇಮ ನೋಡಿಕೊಳ್ಳುವುದಕ್ಕೆ ಹಿಂತಿರುಗಿದ್ದಾರೆ. ತೀರಾ ಖಾಸಗಿ ವಿಷಯ ಆಗಿದ್ದರಿಂದ ಶಸ್ತ್ರಚಿಕಿತ್ಸೆ ಬಗ್ಗೆ ಹೋಗುವುದು ಬೇಡ. ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಮಾಹಿತಿಯನ್ನು ನೀಡಬಹುದು ಎಂದು ಇಂಡಿಯಾ ಟುಡೇಗೆ ಆಪ್ತ ಮೂಲಗಳು ತಿಳಿಸಿವೆ ಎಂದು ವರದಿ ಮಾಡಿದೆ.

ಶಾಲಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಹೊರಬೀಳುತ್ತಿದ್ದಂತೆ ಅಜಿತ್ ಅಭಿಮಾನಿಗಳು ಶಾಲಿನಿಗೆ ಏನಾಗಿದೆ ಎಂದು ಆತಂಕದಿಂದ ಕೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ #ShaliniAjithKumar ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಸದ್ಯ ಅಜಿತ್ ಹಾಗೂ ಶಾಲಿನಿ ಫೋಟೋ ನೋಡಿದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದಾರೆ. ಶಾಲಿನಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಅಜಿತ್ ಹಾಗೂ ಶಾಲಿನಿ ತಮಿಳು ಚಿತ್ರರಂಗದ ಸ್ಟಾರ್ ಜೋಡಿ. 'ಅಮಾರ್ಕಲಂ' ಸಿನಿಮಾದಲ್ಲಿ ಒಟ್ಟಿಗೆ ನಟಿಸುವಾಗ ಇಬ್ಬರಿಗೂ ಪರಸ್ಪರ ಪ್ರೀತಿ ಹುಟ್ಟಿತ್ತು. ಬಳಿಕ ಇಬ್ಬರೂ ಮದುವೆಯಾಗಿ ಹಾಯಾಗಿದ್ದಾರೆ. ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದಾರೆ. ಚಿತ್ರರಂಗದಲ್ಲಿ ಅಜಿತ್ ಕುಮಾರ್ ಹಾಗೂ ಶಾಲಿನಿ ಇಬ್ಬರೂ ಮಾದರಿ ದಂಪತಿಯಾಗಿದ್ದಾರೆ. ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ವಿವಾದಗಳು ಇಲ್ಲದೆ ನೆಮ್ಮದಿಯಾಗಿದ್ದಾರೆ. ಸದ್ಯ ಅಜಿತ್ ಕುಮಾರ್ 'ವಿಡಾಮುಯಾರ್ಚಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೇ ವರ್ಷ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











