ಡೆಡ್‌ಲೈನ್ ಮುಗಿಯೋದ್ರೊಳಗೆ ರಿಲೀಸ್ ಆಗ್ಬೇಕು 'ಜನ ನಾಯಗನ್'; 'ಸುಪ್ರೀಂ' ಸೆನ್ಸಾರ್ ಅಂತಿಮ
ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ಇದೇ ಜನವರಿ 9ರಂದು ರಿಲೀಸ್ ಆಗಬೇಕಿತ್ತು. ಅದಕ್ಕೆ ಬೇಕಾಗಿರೋ ತಯಾರಿ ಹಾಗೂ ಪ್ರಚಾರವನ್ನು ಮಾಡಿಕೊಂಡಿತ್ತು. ಮಲೇಷ್ಯಾಗೆ ಹೋಗಿ ಸಿನಿಮಾದ ಆಡಿಯೋ ಲಾಂಚ್ ಕೂಡ ಮಾಡಿ ಬಂದಿದ್ದರು. ಆದರೆ, ಇನ್ನೇನು ಸಿನಿಮಾ ರಿಲೀಸ್‌ಗೂ ಮುನ್ನ ಸೆನ್ಸಾರ್ ಮೆಟ್ಟಿಲೇರಿದ್ದ ಚಿತ್ರತಂಡ ವಿವಾದಕ್ಕೆ ಸಿಕ್ಕಿಕೊಂಡಿತ್ತು.
ಹೀಗಾಗಿ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಜನ ನಾಯಗನ್' ತಂಡಕ್ಕೆ ಕೆಲವು ತಿದ್ದು ಪಡಿಗಳನ್ನು ಮಾಡುವಂತೆ ಹೇಳಿತ್ತು. ಇದನ್ನು ಜನ ನಾಯಗನ್ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸೆನ್ಸಾರ್ ಮಂಡಳಿ ಹಾಗೂ ಕೆವಿಎನ್ ಪ್ರೊಡಕ್ಷನ್ ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ವಿಜಯ್ ಸಿನಿಮಾಗೆ ಸೆನ್ಸಾರ್ ಕೊಟ್ಟಿರಲಿಲ್ಲ. ಹೀಗಾಗಿ ಚೆನ್ನೈನ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಇನ್ನೂ ಕೇಸ್ ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಚಿತ್ರತಂಡ.

ಸುಪ್ರೀಂ ಕೋರ್ಟ್ ಈ ಪ್ರಕರಣ ವಿಚಾರಣೆಯನ್ನು ನಡೆಸುತ್ತಿದೆ. ಮುಂದಿನ ವಿಚರಣೆ ಜನವರಿ 19ಕ್ಕೆ ನಿಗದಿ ಪಡಿಸಲಾಗಿದೆ. ಹೀಗಾಗಿ ಈ ತಿಂಗಳ ಕೊನೆಯ ವಾರ ರಿಲೀಸ್ ಆಗಬಹುದೇ? ಎಂಬ ಪ್ರಶ್ನೆ ಕೂಡ ಎದ್ದಿದೆ. ಒಂದು ವೇಳೆ ಜನವರಿ 19ರಂದು 'ಜನ ನಾಯಗನ್' ರಿಲೀಸ್‌ಗೆ ಅನುಮತಿ ನೀಡದೇ ಹೋದರೆ, ಸಿನಿಮಾ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗಿ ಬರುಬಹುದು.
ದಳಪತಿ ವಿಜಯ್ ರಾಜಕೀಯ ಪ್ರವೇಶ ಮಾಡಿ ಆಗಿದೆ. ಅವರದ್ದೇ ಸ್ವಂತ ಪಕ್ಷ 'ಟಿವಿಕೆ'ಯನ್ನು ಕಟ್ಟಿದ್ದೂ ಆಗಿದೆ. ಈ ಪಕ್ಷ ಇದೇ ಮೊದಲ ಬಾರಿಗೆ 2026ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಅದಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದೆ. ಈಗಾಗಲೇ ತಮಿಳುನಾಡಿನಾದ್ಯಂತ ಸಮಾವೇಶಗಳನ್ನು ವಿಜಯ್ ಮಾಡುತ್ತಿದ್ದಾರೆ.
ಇದೇ ವೇಳೆ ವಿಜಯ್ ಸಿನಿಮಾ 'ಜನ ನಾಯಗನ್' ರಿಲೀಸ್ ಆದರೆ, ಅವರಿಗೆ ಪುಕ್ಕಟ್ಟೆ ಪ್ರಚಾರ ಸಿಗಲಿದೆ. ಆದ್ರೀಗ ವಿವಾದಕ್ಕೆ ಸಿಕ್ಕಿಕೊಂಡು ಕೋರ್ಟ್ ಮೆಟ್ಟಿಲೇರಿರುವ 'ಜನ ನಾಯಗನ್' ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡಲೇಬೇಕು ಅಂತ ಶತ ಪ್ರಯತ್ನ ಮಾಡುತ್ತಿದೆ. ಇತ್ತ ವಿಜಯ್ ಕೂಡ ಅದನ್ನೇ ಎದುರು ನೋಡುತ್ತಿದ್ದಾರೆ.
ಒಂದು ವೇಳೆ ಫೆಬ್ರವರಿ ಎರಡನೇ ವಾರದ ಒಳಗೆ ಸಿನಿಮಾ ರಿಲೀಸ್ ಆಗದೇ ಹೋದರೆ, ಮತ್ತೆ ತಮಿಳುನಾಡಿನ ಎಲೆಕ್ಷನ್ ಮುಗಿದ ಬಳಿಕವೇ ರಿಲೀಸ್ ಆಗಲಿದೆ. ಹೌದು, 2026ರಲ್ಲಿ ತಮಿಳುನಾಡಿನಲ್ಲಿ ವಿಧಾನ ಸಭೆಯ ಚುನಾವಣೆ ನಡೆಯಲಿದೆ. ಸಾಮಾನ್ಯವಾಗಿ ಈ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ. ಹೀಗಾಗಿ ಚುನಾವಣಾ ಆಯೋಗ ಯಾವಾಗ ಬೇಕಾದರೂ ರಿಲೀಸ್ ಡೇಟ್ ಅನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.
ಒಂದು ವೇಳೆ 'ಜನ ನಾಯಗನ್' ಸಿನಿಮಾ ರಿಲೀಸ್‌ಗೂ ಮುನ್ನವೇ ಚುನಾವಣಾ ಆಯೋಗ ತಮಿಳುನಾಡು ಚುನಾವಣೆಯ ಡೇಟ್ ಅನೌನ್ಸ್ ಮಾಡಿದರೆ, ಸಿನಿಮಾ ರಿಲೀಸ್ ಆಗೋದು ಅನುಮಾನ. ಯಾಕಂದ್ರೆ, 'ಜನ ನಾಯಗನ್' ಪ್ರಕರಣ ಕೋರ್ಟ್‌ನಲ್ಲಿ ಇರುವಾಗಲೇ ಚುನಾವಣಾ ಆಯೋಗ ಮತದಾನ ನಡೆಯುವ ದಿನವನ್ನು ಅನೌನ್ಸ್ ಮಾಡಿದರೆ, ನಿಯಮಗಳ ಪ್ರಕಾರ ಸಿನಿಮಾವನ್ನು ರಿಲೀಸ್ ಮಾಡುವಂತಿಲ್ಲ ಎನ್ನಲಾಗಿದೆ. ಹೀಗಾಗಿ ಫೆಬ್ರವರಿ 2ನೇ ವಾರದೊಳಗೆ ಸಿನಿಮಾ ರಿಲೀಸ್ ಆದರೆ, ಆದಂಗೆ.. ಇಲ್ಲದೇ ಹೋದರೆ, ಚುನಾವಣೆ ಮುಗಿದ ಮೇಲೆ ಎಂಬ ಮಾತುಗಳು ಕೇಳಿಬರುತ್ತಿವೆ.


Click it and Unblock the Notifications











