'ಜನ ನಾಯಗನ್'ಗೆ ಸೆನ್ಸಾರ್ ಸಂಕಷ್ಟ; ಅಂದೇ ರಿಲೀಸ್ ಆಗೋದು ಅನುಮಾನ.. ಮುಂದೇನು?
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಇದೇ ಜನವರಿ 9ರಂದು ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಬೇಕಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸೆನ್ಸಾರ್ ಮಂಡಳಿ ಹಾಗೂ ಈ ಸಿನಿಮಾದ ನಡುವಿನ ಗೊಂದಲ ಮುಂದುವರೆದಿದ್ದು, ಅಂದುಕೊಂಡ ದಿನವೇ ರಿಲೀಸ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ.
'ಜನನಾಯಗನ್' ತಂಡ ಮೊದಲ ಬಾರಿ ಸೆನ್ಸಾರ್‌ಗೆ ಸಿನಿಮಾವನ್ನು ತೋರಿಸಿದ ಬಳಿಕ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಲಾಗಿತ್ತು. ಸೆನ್ಸಾರ್ ಮಂಡಳಿ ಸೂಚನೆ ಮೇರೆಗೆ ಬದಲಾವಣೆಗಳನ್ನು ಮಾಡಿ ಮರು ವೀಕ್ಷಣೆಗೆ ನೀಡಲಾಗಿತ್ತು. ಇಲ್ಲಿಂದ ಸೆನ್ಸಾರ್ ಮಂಡಳಿ ಹಾಗೂ 'ಜನ ನಾಯಗನ್' ತಂಡದ ನಡುವೆ ಗೊಂದಲಗಳು ಶುರುವಾಗಿತ್ತು. ಈ ಸಂಬಂಧ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಚೆನ್ನೈ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ತೀರ್ಪನ್ನು ಜನವರಿ 9ರಂದು ಮುಂದೂಡಲಾಗಿದೆ.

ಈ ಮೂಲಕ ದಳಪತಿ ವಿಜಯ್ ಕೊನೆಯ ಸಿನಿಮಾವನ್ನು ಥಿಯೇಟರ್‌ನಲ್ಲಿ ಸಂಭ್ರಮಿಸಬೇಕು ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಿನಿಮಾ ಬಿಡುಗಡೆಯಾಗಬೇಕಿದ್ದ ದಿನವೇ ತೀರ್ಪು ಇರುವುದರಿಂದ ಅಂದು ರಿಲೀಸ್ ಆಗೋದು ಬಹುತೇಕ ಅನುಮಾನ. ಸದ್ಯ 'ಜನ ನಾಯಗನ್' ರಿಲೀಸ್ ಬಗ್ಗೆ ಗೊಂದಲ ಮನೆ ಮಾಡಿದೆ.
ಚೆನ್ನೈ ಹೈಕೋರ್ಟ್‌ನಲ್ಲಿ ಸೆನ್ಸಾರ್ ಮಂಡಳಿ ಪರ ವಕೀಲರು ನ್ಯಾಯಾಲಯದಲ್ಲಿ ಮಂಡಿಸಿದ ವಾದದಿಂದ 'ಜನ ನಾಯಗನ್' ರಿಲೀಸ್ ಇನ್ನಷ್ಟು ಜಟಿಲವಾಗಿದೆ. ಚೆನ್ನೈ ಹೈಕೋರ್ಟ್ ನ್ಯಾಯಾಧೀಶರಾದ ಪಿ.ಟಿ. ಆಶಾ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ಕೊಡಲು ಸೆನ್ಸಾರ್ ಮಂಡಳಿ ಸಮಯ ಕೇಳಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪನ್ನು ಜನವರಿ 9ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ. ಈ ವೇಳೆ ಐದು ಸದಸ್ಯರ ಹೊಸ ಪರಿಷ್ಕರಣಾ ಸಮಿತಿಯು ಸಿನಿಮಾವನ್ನು ವೀಕ್ಷಿಸಿ ಸೆನ್ಸಾರ್ ಪ್ರಮಾಣಪತ್ರ ನೀಡುವ ಕುರಿತು ನಿರ್ಧರಿಸಲಾಗುತ್ತೆ ಎನ್ನಲಾಗಿದೆ. ಇದರಿಂದ ದಳಪತಿ ವಿಜಯ್ ಅಭಿಮಾನಿಗಳು ಆತಂಕ ಮತ್ತಷ್ಟು ಹೆಚ್ಚಾಗಿದೆ.
'ಜನ ನಾಯಗನ್' ಸಿನಿಮಾದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಸೇನೆಯಲ್ಲಿ ಮಹಿಳೆಯರನ್ನು ಸೇರಿಸುವುದು. ಹಾಗೇ ಅವರನ್ನು ಹುಲಿಗಳಂತೆ ಬೆಳೆಸುವ ದೃಶ್ಯವಿದೆ. ವಿಜಯ್ ನಟನೆಯ ಈ ರಿಮೇಕ್ ಸಿನಿಮಾದಲ್ಲಿ ಸೇನೆಯ ಚಿಹ್ನೆಗಳನ್ನು ಯಾವುದೇ ಅನುಮತಿ ಇಲ್ಲದೆ ಬಳಸಿರೋದಕ್ಕೆ ಸೆನ್ಸಾರ್ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.

ಸದ್ಯ 'ಜನ ನಾಯಗನ್' ಸಿನಿಮಾದ ಸೆನ್ಸಾರ್ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಸಿನಿಮಾ ಬಿಡುಗಡೆಗೆ ಇನ್ನು ಎರಡು ದಿನಗಳು ಬಾಕಿ ಇರುವುದರಿಂದ ಇಂದು (ಜನವರಿ 7) ಕೋರ್ಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಭಿಮಾನಿಗಳ ಭರವಸೆ ಹುಸಿಯಾಗಿದೆ. 'ಜನ ನಾಯಗನ್' ಸಿನಿಮಾದ ವಿಚಾರಣೆಯನ್ನು ನ್ಯಾಯಾಧೀಶರು ಜನವರಿ 9ಕ್ಕೆ ಮುಂದೂಡಿದ್ದಾರೆ. ಹೀಗಾಗಿ ಸಿನಿಮಾ ಈಗಾಗಲೇ ಅನೌನ್ಸ್ ಮಾಡಿದ ದಿನವೇ ರಿಲೀಸ್ ಆಗೋದು ಅನುಮಾನ.
ಅಲ್ಲದೆ, ಸಿನಿಮಾವನ್ನು ಮರು-ಪರಿಶೀಲನಾ ಸಮಿತಿಗೆ ಕಳುಹಿಸಿ, ಮತ್ತೊಮ್ಮೆ ಪರಿಶೀಲಿಸುವ ಸಂಪೂರ್ಣ ಹಕ್ಕು ತಮಗಿದೆ ಎಂದು ಸೆನ್ಸಾರ್ ಮಂಡಳಿ ವಾದ ಮಂಡಿಸಿದೆ. ಅಲ್ಲದೆ ಕೇಸ್ ಕೋರ್ಟ್‌ನಲ್ಲಿ ಸದ್ಯಕ್ಕೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡದಿರಲು ಮಂಡಳಿ ನಿರ್ಧರಿಸಿದೆ. ಕೆವಿಎನ್ ಪ್ರೊಡಕ್ಷನ್ ಪರ ವಾದ ಮಂಡಿಸಿದ ವಕೀಲ ಪರಶರನ್ ಐದು ಮಂದಿಯ ಸಮಿತಿಯಲ್ಲಿ ಕೇವಲ ಒಬ್ಬರು ಮಾತ್ರ ಆಕ್ಷೇಪಿಸಿದ್ದಾರೆ. ಕೊನೇ ಕ್ಷಣದಲ್ಲಿ ಸಿನಿಮಾ ಬಿಡುಗಡೆಯನ್ನು ತಡೆಯುವುದರಿಂದ ಭಾರಿ ಆರ್ಥಿಕ ನಷ್ಟವಾಗುತ್ತೆ ಎಂದು ವಾದ ಮಂಡಿಸಿದ್ದರು. ಸೆನ್ಸಾರ್ ಮಂಡಳಿ ಈಗಾಗಲೇ ಪ್ರಮಾಣಪತ್ರ ನೀಡಲು ಒಪ್ಪಿ, ಬಳಿಕ ಹಿಂದೆ ಸರಿಯುವುದು ಅವರ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ ಎಂದು ವಾದಿಸಿದ್ದಾರೆಂದು ವರದಿಯಾಗಿದೆ.


Click it and Unblock the Notifications











