ವಿಜಯ್ ಫೇರ್‌ವೆಲ್ ಸಿನಿಮಾಗೆ ಕೊನೆಗೂ ಸಿಕ್ಕಿತು ಟೈಟಲ್: ರಾಜಕೀಯ ಮುನ್ನುಡಿ ಬರೆಯುತ್ತಾ 69ನೇ ಚಿತ್ರ
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಕ್ಷೇತ್ರದಲ್ಲಿ ಒಂದು ಕಾಲು ಇಟ್ಟಾಗಿದೆ. ಇನ್ನೊಂದು ಕಾಲು ಇನ್ನೂ ಸಿನಿಮಾದಲ್ಲಿಯೇ ಇದೆ. ಇನ್ನೇನು ಆ ಕಾಲು ಎತ್ತುವುದಕ್ಕೆ ಹೆಚ್ಚೇನು ದಿನಗಳು ಇಲ್ಲ. ತನ್ನ ಮುಂದಿನ ಜೀವನವನ್ನು ರಾಜಕೀಯಕ್ಕೆ ಮೀಸಲಿಡಲು ನಿರ್ಧರಿಸಿದ್ದರಿಂದ ಹೆಚ್ಚಾಗಿ ಜನರ ಸಮ್ಮುಖದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅದಕ್ಕಿಂತ ಮುನ್ನ ಕೊನೆಯ ಸಿನಿಮಾವನ್ನು ಮುಗಿಸಲಿದ್ದಾರೆ.
ದಳಪತಿ ವಿಜಯ್ ಕೊನೆಯ ಸಿನಿಮಾವನ್ನು ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಡ್ಯೂಸ್ ಮಾಡುತ್ತಿದೆ. ಇದು ವಿಜಯ್ ನಟಿಸುತ್ತಿರುವ 69ನೇ ಸಿನಿಮಾ. ಈ ಕಾರಣಕ್ಕೆ ಕಾಲಿವುಡ್‌ಗಷ್ಟೇ ಅಲ್ಲ. ವಿಜಯ್ ಅಭಿಮಾನಿಗಳಿಗೂ ಈ ಸಿನಿಮಾ ತುಂಬಾನೇ ಮುಖ್ಯ. ಕಳೆದ ಕೆಲವು ದಿನಗಳಿಂದ ವಿಜಯ್ ಕೊನೆಯ ಸಿನಿಮಾದ ಟೈಟಲ್ ಬಗ್ಗೆನೇ ಚರ್ಚೆಯಾಗುತ್ತಿತ್ತು. ಕೊನೆಗೂ ಆ ಸಿನಿಮಾದ ಟೈಟಲ್ ಈಗ ರಿವೀಲ್ ಆಗಿದೆ.

ವಿಜಯ್ ರಾಜಕೀಯಕ್ಕೆ ಧುಮುಕುತ್ತಿರುವುದರಿಂದ ಈ ಸಿನಿಮಾ ಕೂಡ ಅದಕ್ಕೆ ಹೊಂದಿಕೊಂಡಂತೆ ಇರುತ್ತೆ ಅನ್ನೋ ಗುಮಾನಿ ಇತ್ತು. ಅದೀಗ ಸತ್ಯವಾಗಿದೆ. ವಿಜಯ್ ಕೊನೆಯ ಸಿನಿಮಾದಲ್ಲಿ ರಾಜಕೀಯದ ಫ್ಲೇವರ್ ಇರುತ್ತೆ. ಅದರ ಸುಳಿವು ನೀಡಿದ್ದು ಇಂದು (ಜನವರಿ 26) ರಿವೀಲ್ ಆಗಿರುವ ಅವರ ಕೊನೆಯ ಸಿನಿಮಾದ ಟೈಟಲ್. ಆ ಟೈಟಲ್ ಏನು? ಆ ಟೈಟಲ್ ಇಟ್ಟಿದ್ದರ ಹಿನ್ನೆಲೆಯೇನು? ಅನ್ನೋದನ್ನು ನೋಡೋಣ.
ದಳಪತಿ ವಿಜಯ್ ರಾಜಕೀಯಕ್ಕೆ ದಿಢೀರ್ ಎಂಟ್ರಿ ಕೊಟ್ಟಿಲ್ಲ. ಕಳೆದ ಹಲವು ವರ್ಷಗಳಿಂದ ಅವರು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದ ಸಿನಿಮಾಗಳು ರಾಜಕೀಯಕ್ಕೆ ಪ್ರವೇಶ ಮಾಡುವ ಸುಳಿವನ್ನು ನೀಡುತ್ತಲೇ ಇದ್ದರು. ವಿಜಯ್ ಸಿನಿಮಾ ಹೀರೋಯಿಸಂ ಒಂದು ಕಡೆಯಾದರೆ, ಇನ್ನೊಂದು ಕಡೆ ಅವರ ಕಥೆಗಳು ಸಮಾಜದಲ್ಲಿರುವ ಒಂದೊಂದೇ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಕಥೆಗಳೇ ಆಗಿರುತ್ತಿದ್ದವು. ಜನರ ಸಮಸ್ಯೆಗಳಿಗೆ ವಿಜಯ್ ಸ್ಪಂಧಿಸಿ ಸಿನಿಮಾ ಹೀರೋ ಆಗುತ್ತಿದ್ದರು.
ಅವರ ಕೊನೆಯ ಸಿನಿಮಾ ಕೂಡ ಅಂತಹದ್ದೇ ಒಂದು ಕಥೆ ಅನ್ನೋದು ಟೈಟಲ್ ನೋಡಿದರೇ ಸಾಬೀತಾಗುತ್ತೆ. ಅಂದ್ಹಾಗೆ ಈ ಸಿನಿಮಾದ ಟೈಟಲ್ 'ಜನ ನಾಯಗನ್'. ಹೊಸ ರಾಜಕೀಯ ಪಕ್ಷ ಕಟ್ಟಿ ಅದನ್ನು ಅಧಿಕಾರಕ್ಕೆ ತರುವುದಕ್ಕೆ ಹೋರಾಡುತ್ತಿರುವ ವಿಜಯ್‌ಗೆ ಇಂತಹದ್ದೊಂದು ಟೈಟಲ್‌ನ ಅಗತ್ಯವಿತ್ತು. ಈ ಸಿನಿಮಾ ಬಿಡುಗಡೆಯಾಗುವ ಹೊತ್ತಿದೆ. ತಮಿಳುನಾಡಿನ ವಿಧಾನ ಸಭೆ ಚುನಾವಣೆ ಸನಿಹದಲ್ಲಿ ಇರುತ್ತೆ. ಆಗ ಜನ ನಾಯಕನಾಗಿ ಜನರ ಬಳಿ ಈ ಸಿನಿಮಾ ಕರೆದುಕೊಂಡು ಹೋಗುತ್ತೆ.
ಮೊದಲೇ ಸ್ಟಾರ್ ಇಮೇಜ್ ಇಟ್ಟುಕೊಂಡಿರುವ ವಿಜಯ್‌ಗೆ ಜನರನ್ನು ಸೆಳೆಯುವುದು ಹೆಚ್ಚೇನು ಕಷ್ಟ ಆಗುತ್ತಿಲ್ಲ. ಆದರೆ, ಚುನಾವಣೆಯ ಸಂದರ್ಭದಲ್ಲಿ 'ಜನ ನಾಯಗನ್' ಮತ್ತಷ್ಟು ಸಹಾಯಕ್ಕೆ ಬರುತ್ತೆ. 2026ಕ್ಕೆ ತಮಿಳುನಾಡಿನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಅದರಲ್ಲಿ ವಿಜಯ್ ಕಟ್ಟಿದ 'ತಮಿಳಿಗ ವೆಟ್ರಿ ಕಳಗಂ' ಪಕ್ಷ ಚುನಾವಣಾ ಅಖಾಡಕ್ಕೆ ಇಳಿಯಲಿದೆ. ವಿಜಯ್ ಕೂಡ ಆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ತಮಿಳುನಾಡಿನಲ್ಲಿ 2026 ಹೊಸ ಇತಿಹಾಸ ಸೃಷ್ಟಿಸಿದರೂ ಅಚ್ಚರಿಯಿಲ್ಲ. ಈಗಾಗಲೇ ವಿಜಯ್ ರಾಜಕೀಯ ಎಂಟ್ರಿಯಿಂದ ಅಲ್ಲಿನ ಪೊಲಿಟಿಕಲ್ ಪಾರ್ಟಿಗಳಿಗೆ ಟೆನ್ಷನ್ ಅಂತೂ ಶುರುವಾಗಿದೆ.
ಇನ್ನು ವಿಜಯ್ 'ಜನ ನಾಯಗನ್' ಸಿನಿಮಾವನ್ನು ಎಚ್. ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಇಂದು ರಿವೀಲ್ ಮಾಡಿರುವ ಪೋಸ್ಟರ್‌ನಲ್ಲಿ ವಿಜಯ್ ಅವರಲ್ಲಿ ರಾಜಕೀಯದ ಛಾಯೆ ಇರದೇ ಹೋದರೂ, ಅವರು ಸೆಲ್ಫಿ ಹಿಡಿಯುತ್ತಿರುವಾಗ ಹಿಂದೆ ನಿಂತಿರುವ ಜನರ ಸಮೂಹ ಸಿನಿಮಾದ ಬಗ್ಗೆ ಒಂದು ಕ್ಲಾರಿಯನ್ನು ನೀಡುತ್ತಿದೆ. ಈ ಸಿನಿಮಾ ಮೂಲಕ ವಿಜಯ್ ತನ್ನ ರಾಜಕೀಯದ ಉದ್ದೇಶವನ್ನು ಸೂಕ್ಷ್ಮವಾಗಿ ಜನರಿಗೆ ತಿಳಿಸಬಹುದು. ಈ ಸಿನಿಮಾ ವಿಜಯ್ ಜೊತೆ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೈನ್, ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ಅಶ್ವಿನ್ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











